ಮಂಗಳವಾರ, ಜನವರಿ 19, 2021
22 °C
ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ

PV Web Exclusive| ಗ್ರಾಮ ಪಂಚಾಯಿತಿ ಚುನಾವಣೆ ನಂತರ ಧರ್ಮಸ್ಥಳದಲ್ಲಿ ಆಣೆ–ಪ್ರಮಾಣ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಈಗ ಬೇಡಿಕೆ ಸೃಷ್ಟಿಯಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಮಂಜುನಾಥನ ಸನ್ನಿಧಿಯಲ್ಲಿ ‘ನನ್ನನ್ನೇ ಬೆಂಬಲಿಸಬೇಕು’ ಎಂದು ಆಣೆ– ಪ್ರಮಾಣ ಮಾಡಿಸುತ್ತಿದ್ದಾರೆ.

ಗ್ರಾ.ಪಂ. ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರು ಸದಸ್ಯರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಆಯ್ಕೆ ಆಗಿದ್ದಕ್ಕೆ ಧರ್ಮಸ್ಥಳಕ್ಕೆ ಪ್ರವಾಸ ಹೋಗಿ ಬರೋಣ ಎಂದು ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನೇ ಬೆಂಬಲಿಸುವ ಪ್ರಸ್ತಾವ ಮುಂದಿಡಲಾಗುತ್ತಿದೆ. ದೇವರ ಮುಂದೆ ಪ್ರಮಾಣ ಮಾಡಿದರೆ ನನ್ನನ್ನು ಕೈಬಿಡುವುದಿಲ್ಲ. ಮಂಜುನಾಥನ ಮೇಲೆ ಪ್ರಮಾಣ ಮಾಡಿ ಭರವಸೆ ನೀಡಬೇಕು ಎಂದು ಕೇಳಿಕೊಳ್ಳಲಾಗುತ್ತಿದೆ. ಕೆಲ ಸದಸ್ಯರು ಒತ್ತಾಯಕ್ಕೆ ಕಟ್ಟುಬಿದ್ದು ವಚನ ನೀಡುತ್ತಿದ್ದಾರೆ.

ಹೋಬಳಿ ಹಾಗೂ ತಾಲ್ಲೂಕು ಭಾಗದ ರಾಜಕೀಯ ಪಕ್ಷಗಳ ಕೆಲ ಮುಖಂಡರು ಸಹ ಮುಂದಿನ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ತಮ್ಮ ಪಕ್ಷದ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನ ನಡೆಸಿದ್ದಾರೆ. ಈಗಿನಿಂದಲೇ ತಳಮಟ್ಟದಲ್ಲಿ ಪಕ್ಷ ಸಂಘಟಿಸಿ, ಗ್ರಾಮೀಣ ಮಟ್ಟದ ನಾಯಕರ ಬೆಂಬಲ ಪಡೆದರೆ ಮುಂದೆ ನೆರವಿಗೆ ಬರುತ್ತದೆ. ಜತೆಗೆ ನಮ್ಮ ಪಕ್ಷದವರೇ ಗ್ರಾ.ಪಂ.ನಲ್ಲಿ ಅಧ್ಯಕ್ಷರಾಗಿದ್ದರೆ ಚುನಾವಣೆ ಗೆಲ್ಲಲು ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಸ್ಥಳೀಯ ರಾಜಕೀಯ ಮುಖಂಡರೂ ಧರ್ಮಸ್ಥಳ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

ಕೆಲವು ಕಡೆ ಶಾಸಕರು ಹಾಗೂ ಅವರ ಬೆಂಬಲಿಗರು ಪ್ರವಾಸ ಏರ್ಪಡಿಸುತ್ತಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕರು ಹಾಗೂ ಮಾಜಿ ಶಾಸಕರು ತಮ್ಮ ಪಕ್ಷದ ಬೆಂಬಲಿಗರನ್ನು ಅಧಿಕಾರದಲ್ಲಿ ಕೂರಿಸಲು ಸಾಕಷ್ಟು ಪ್ರಯತ್ನ ಆರಂಭಿಸಿದ್ದಾರೆ. ಅದೇ ರೀತಿ ಇತರ ಕ್ಷೇತ್ರಗಳಲ್ಲೂ ನಡೆದಿದೆ.

ಚುನಾವಣೆ ಖರ್ಚು ವಾಪಸ್ ಕೊಡಿ

ಕೆಲವು ‘ಜಾಣ’ ಸದಸ್ಯರು ಇದೇ ಅವಕಾಶವನ್ನು ಬಂಡವಾಳ ಮಾಡಿಕೊಂಡು ಚುನಾವಣೆಗೆ ಮಾಡಿರುವ ವೆಚ್ಚವನ್ನು ಮರಳಿ ಪಡೆಯುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರನ್ನು ಬೆಂಬಲಿಸಬೇಕಾದರೆ ‘ಚುನಾವಣೆಯಲ್ಲಿ ಗೆಲ್ಲಲು ಎಷ್ಟು ಖರ್ಚಾಗಿದೆ, ಅಷ್ಟು ಹಣ ಕೊಡಬೇಕು’ ಎಂಬ ಷರತ್ತು ಹಾಕುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೇರುವುದು ಪ್ರತಿಷ್ಠೆಯಾಗಿರುವ ಗ್ರಾ.ಪಂ.ಗಳಲ್ಲಿ ಸದಸ್ಯರಿಗೆ ಹಣನೀಡಿ ಖರೀದಿ ಮಾಡಲಾಗುತ್ತಿದೆ.

ಹಣ ನೀಡಲು ಸಾಧ್ಯವಾಗದ ಕಡೆಗಳಲ್ಲಿ ಹಾಗೂ ಒಂದೆರಡು ಸದಸ್ಯರ ಬೆಂಬಲದ ಕೊರತೆ ಎದುರಿಸುತ್ತಿರುವ ಕಡೆಗಳಲ್ಲಿ ತಮ್ಮ ಪಕ್ಷಕ್ಕೆ ಬಂದರೆ ಅಧ್ಯಕ್ಷರನ್ನಾಗಿ ಮಾಡುವ ಭರವಸೆಯನ್ನು ವಿವಿಧ ಪಕ್ಷಗಳ ಮುಖಂಡರು ನೀಡುತ್ತಿದ್ದಾರೆ. ಮೀಸಲಾತಿ ನಿಗದಿಯನ್ನು ನೋಡಿಕೊಂಡು ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಮುಂದೆ ಪಕ್ಷದಲ್ಲೇ ಮುಂದುವರಿಯಬೇಕು ಎಂಬ ಷರತ್ತು ವಿಧಿಸಿದ್ದಾರೆ.

ಹಣ ಕೊಟ್ಟವರು ಅಧ್ಯಕ್ಷರಾಗಲಿ

ಗ್ರಾ.ಪಂ ಅಧ್ಯಕ್ಷರ ಅಧಿಕಾರ ಅವಧಿ 30 ತಿಂಗಳು. ಪದೇಪದೇ ಅಧ್ಯಕ್ಷರ ಸ್ಥಾನ ಬದಲಾಗುವುದಿಲ್ಲ. ಐದು ವರ್ಷದ ಅವಧಿಯಲ್ಲಿ ಇಬ್ಬರು ಮಾತ್ರ ಅಧಿಕಾರ ಅನುಭವಿಸಲು ಸಾಧ್ಯ. ಚುನಾವಣೆಗೆ ಖರ್ಚಾಗಿರುವಷ್ಟು ಹಣಕೊಟ್ಟು ಅಧ್ಯಕ್ಷರಾಗಲಿ. ನಾವೂ ಜನರಿಗೆ ಹಣನೀಡಿ ಗೆದ್ದು ಬಂದಿಲ್ಲವೆ’ ಎಂದು ತುಮಕೂರು ತಾಲ್ಲೂಕಿನ ಊರ್ಡಿಗೆರೆ ಗ್ರಾ.ಪಂ ಸದಸ್ಯರೊಬ್ಬರು ಪ್ರಶ್ನಿಸುತ್ತಾರೆ.

ಪಕ್ಷಕ್ಕೆ ಬಂದರೆ ₹5 ಲಕ್ಷ

ತುಮಕೂರು ತಾಲ್ಲೂಕಿನ ಅರಕೆರೆ ಗ್ರಾಮದ ಮುಖಂಡರೊಬ್ಬರು ತಮ್ಮ ಪಕ್ಷಕ್ಕೆ ಬರುವ ಗ್ರಾ.ಪಂ ಸದಸ್ಯರಿಗೆ ₹5 ಲಕ್ಷ ನೀಡುವುದಾಗಿ ಹೇಳಿದ್ದಾರೆ.

ಪಕ್ಷವೊಂದರ ಯುವ ಮೋರ್ಚಾ ಘಟಕದ ಮುಖಂಡರೊಬ್ಬರು ತಮ್ಮ ಪಕ್ಷದ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಲು ಹಣದ ಮೂಲಕ ಆಹ್ವಾನ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು