ಬುಧವಾರ, ಮಾರ್ಚ್ 22, 2023
28 °C

ಮಠದ ಮೇಲೆ ಸರ್ಕಾರದ ಅಧಿಕಾರಕ್ಕೆ ಆಕ್ಷೇಪ: ‘ಆಡಳಿತಾಧಿಕಾರಿ ನೇಮಕ ಸಂವಿಧಾನಬಾಹಿರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಂವಿಧಾನದ 162ನೇ ವಿಧಿಯ ಅನುಸಾರ ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರ’ ಎಂದು ಮಠದ ಪರ ವಕೀಲರು ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್‌.ಪಾಟೀಲ್‌, ‘ಮುರುಘಾ ಶರಣರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ (ಪೊಕ್ಸೊ) ಮತ್ತು ಎಸ್ಸಿ-ಎಸ್ಟಿ ಜಾತಿನಿಂದನೆ ಆಪಾದನೆ ಹೊತ್ತು 2022ರ ಸೆಪ್ಟೆಂಬರ್‌ 1ರಿಂದ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ವಿವರಿಸಿದರು.

‘ಶರಣರು ಪೀಠಾಧಿಪತಿ ಮತ್ತು ಟ್ರಸ್ಟ್‌ ಅಧ್ಯಕ್ಷರಿದ್ದು ಉಸ್ತುವಾರಿಯನ್ನು ಬೇರೆಯವರಿಗೆ ವಹಿಸಿದ್ದಾರೆ. ಆದರೆ, ಸರ್ಕಾರ ಇದನ್ನೇ ಕಾರಣವಾಗಿಸಿಕೊಂಡು ಮಠದ ಮೇಲೆ ಅಧಿಕಾರ ಚಲಾಯಿಸಿದೆ. ಒಂದು ವೇಳೆ ಟ್ರಸ್ಟ್‌ ವ್ಯವಹಾರಗಳು ಸರಿಯಾಗಿ ನಡೆಯುತ್ತಿಲ್ಲ ಎಂದಾದರೆ ಸಿವಿಲ್‌ ಪ್ರಕ್ರಿಯಾ ಸಂಹಿತೆ-1908ರ (ಸಿಪಿಸಿ) ಕಲಂ 92ರ ಅನುಸಾರ ಪರಿಹಾರ ಪಡೆಯಲು ಮುಕ್ತ ಅವಕಾಶಗಳಿತ್ತು’ ಎಂದರು.

ಏತನ್ಮಧ್ಯೆ ನ್ಯಾಯಪೀಠವು, ‘ಸರ್ಕಾರ ನೇಮಕ ಮಾಡಿರುವ ಆಡಳಿತಾಧಿಕಾರಿ ಮಠದ ಪರಂಪರೆಯ ಸಮುದಾಯಕ್ಕೆ ಸೇರಿದವರೇ’ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿವಾದಿ ಪಿ.ಎಸ್‌. ವಸ್ತ್ರದ ಪರ ಹಾಜರಿದ್ದ ಹಿರಿಯ ವಕೀಲ ಗಂಗಾಧರ ಗುರುಮಠ, ‘ಹೌದು, ಅವರು ವೀರಶೈವ ಸಮುದಾಯಕ್ಕೆ ಸೇರಿದವರು’ ಎಂದರು. ಈ ಮಾತಿಗೆ ಜಯಕುಮಾರ್ ಪಾಟೀಲ್ ಬಲವಾದ ಆಕ್ಷೇಪ ವ್ಯಕ್ತಪಡಿಸಿ, ‘ವೀರಶೈವ‘ ಪದದ ಜೊತೆಗೆ ‘ಲಿಂಗಾಯತ‘ ಎಂಬುದನ್ನೂ ಸೇರಿಸಿದರು.


ಪಿ.ಎಸ್.ವಸ್ತ್ರದ, ಆಡಳಿತಾಧಿಕಾರಿ

ಈ ಪದಗಳ ಭಿನ್ನಾಭಿಪ್ರಯ ಅಭಿವ್ಯಕ್ತಗೊಳ್ಳುತ್ತಿದ್ದಂತೆಯೇ ಗುರುಮಠ ಅವರ ಪಕ್ಕದಲ್ಲಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಅವರು, ’ಈಗ ಅದೆಲ್ಲಾ ಬೇಡ. ವಿಷಯಾಂತರವಾಗುತ್ತದೆ’ ಎಂದರು. ಈ ಮಾತಿಗೆ ನ್ಯಾಯಪೀಠವೂ ಅನುಮೋದಿಸಿತು. ಸಿಪಿಸಿ ಕಲಂ 92ರ ಶಾಸನಬದ್ಧ ಅಧಿಕಾರ ಮತ್ತು ರಾಜ್ಯ ಸರ್ಕಾರದ ಕ್ರಮ ಹಾಗೂ ಸಂವಿಧಾನದ ಹಲವು ವಿಧಿಗಳ ಕುರಿತಂತೆ ಸುಪ್ರೀಂ ಕೋರ್ಟ್‌, ಹೈಕೋರ್ಟ್ ತೀರ್ಪುಗಳ ವಿವರಣೆಯನ್ನು ನೀಡಿದ ಜಯಕುಮಾರ್  ಪಾಟೀಲ್‌ ಒಂದೂವರೆ ಗಂಟೆಗೂ ಹೆಚ್ಚುಕಾಲ ಸುದೀರ್ಘ ವಾದ ಮಂಡಿಸಿದರು.

ದಿನದ ಕಲಾಪದ ಅವಧಿ ಮುಕ್ತಾಯಗೊಂಡ ಕಾರಣ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಲಾಗಿದೆ. ಪಿ.ಎಸ್‌.ವಸ್ತ್ರದ ಪರ ವಕಾಲತ್ತು ವಹಿಸಿರುವ ಎಚ್‌.ಸುನಿಲ್‌ ಕುಮಾರ್ ಮತ್ತು ಮಧ್ಯಂತರ ಅರ್ಜಿದಾರರ ಪರ ವಕೀಲ ಪಿ.ಪ್ರಸನ್ನಕುಮಾರ್ ಹಾಗೂ ಅರ್ಜಿದಾರರ ಪರ ವಕಾಲತ್ತು ವಹಿಸಿರುವ ಕಲ್ಯಾಣ ಬಸವರಾಜ್‌ ಹಾಜರಿದ್ದರು.

ಪ್ರಕರಣವೇನು?: ‘ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು, ಪೊಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದು, ರಾಜ್ಯ ಸರ್ಕಾರ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು