ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬರೀ ಪ್ರಚಾರ: ಸಿಗದ ಪರಿಹಾರ

ಗ್ರಾಮ ವಾಸ್ತವ್ಯ: ಅನುಷ್ಠಾನಕ್ಕೆ ಬಾರದ ಕಂದಾಯ ಸಚಿವರ ಭರವಸೆ
Last Updated 4 ಜೂನ್ 2022, 19:31 IST
ಅಕ್ಷರ ಗಾತ್ರ

ಮೈಸೂರು: ಕಂದಾಯ ಇಲಾಖೆಯ ನಿಷ್ಕ್ರಿಯತೆ, ವಿಳಂಬ ಧೋರಣೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ
ಮಹತ್ವಾಕಾಂಕ್ಷೆಯಿಂದ ಕಂದಾಯ ಸಚಿವ ಆರ್. ಅಶೋಕ ಅವರು ನಡೆಸುತ್ತಿರುವ ‘ಗ್ರಾಮ ವಾಸ್ತವ್ಯ ಕಾರ್ಯಕ್ರಮ’ವು ಅಬ್ಬರದ ಪ್ರಚಾರಕ್ಕಷ್ಟೆ ಸೀಮಿತವಾಗಿದೆ. ಜನರು, ತೊಂದರೆ ಅನುಭವಿಸುವುದು ತಪ್ಪಿಲ್ಲ.

‘ಜನ ಕಚೇರಿಗೆ ಅಲೆಯುತ್ತಾ, ಅಧಿಕಾರಿಗಳ ಎದುರು ಕೈಕಟ್ಟಿ ನಿಲ್ಲುವ ಬದಲು ಅಧಿಕಾರಿಗಳೇ ಜನರೆದುರು ಕೈಕಟ್ಟಿ ನಿಲ್ಲಬೇಕು’ ಎನ್ನುವ ಸಚಿವರ ಆಶಯವು ವಾಸ್ತವ್ಯದ ದಿನಕ್ಕಷ್ಟೇ ಸೀಮಿತವಾಗುತ್ತಿದೆ!

ಸಚಿವರು ಈವರೆಗೆ 7 ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಹೋದ ಕಡೆಯಲ್ಲೆಲ್ಲಾ ಜನರಲ್ಲಿ ಹೊಸ ಕನಸುಗಳನ್ನು ಬಿತ್ತುತ್ತಿದ್ದಾರೆ. ಆದರೆ, ಅವು ನನಸಾಗುತ್ತಿವೆಯೇ ಎಂಬ ಪ್ರಶ್ನೆಗೆ ನಿರಾಶಾದಾಯಕ ಉತ್ತರ ಸಿಗುತ್ತಿದೆ. ಏಕೆಂದರೆ, ‘ಆ’ ಗ್ರಾಮಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯೇನೂ ಆಗಿಲ್ಲ. ಜೀವನಮಟ್ಟ ಸುಧಾರಿಸಿಲ್ಲ. ಅನುದಾನದ ಘೋಷಣೆಯೂ ಕಾರ್ಯರೂಪಕ್ಕೆ ಬಂದಿಲ್ಲ. ಸಚಿವರ ಭೇಟಿ ಕಾರಣಕ್ಕೆ ರಸ್ತೆ ದುರಸ್ತಿ, ಚರಂಡಿ ಸ್ವಚ್ಛತೆ ಮೊದಲಾದ ಸಣ್ಣಪುಟ್ಟ ತಾತ್ಕಾಲಿಕ ಕೆಲಸಗಳಷ್ಟೇ ನಡೆದಿವೆ.

ಗ್ರಾಮೀಣ ಜನರ ಬಹುಪಾಲು ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದೇ ಆಗಿರುತ್ತವೆ. ಸರ್ಕಾರದ ಈ ಪ್ರಮುಖ ಇಲಾಖೆಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಜನರಿಗೆ ಅನುಕೂಲಗಳನ್ನು ಕಲ್ಪಿಸಬಹುದು. ಆದರೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ವಿಳಂಬಗತಿಯ ಕಾರ್ಯವೈಖರಿಯನ್ನು ಬದಲಾಯಿಸಲು, ಸರ್ಕಾರವೇ ಜನರ ಬಳಿಗೆ ಬರುತ್ತಿದೆ ಎಂಬ ಘೋಷಣೆಯಡಿ ಪಿಂಚಣಿ, ವೃದ್ಧಾ‍ಪ್ಯ ವೇತನದಂಥ ಆದೇಶಪತ್ರಗಳನ್ನು ವಿತರಿಸಿದ್ದು ಬಿಟ್ಟರೆ ಹತ್ತಾರು ಸಮಸ್ಯೆಗಳು ಪರಿಹಾರವಾಗಿಲ್ಲ.

‘ನಮ್ಮೂರಿಗೆ ಸಚಿವರು, ಹಿರಿಯ ಅಧಿಕಾರಿಗಳೇ ಬಂದಿದ್ದರು. ನಮ್ಮ ಕೆಲಸಗಳೆಲ್ಲವೂ ಸುಲಭವಾಗಿ ಆಗಿಬಿಡುತ್ತವೆ; ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ’ ಎಂಬ ಜನರ ನಿರೀಕ್ಷೆಗಳು ಹುಸಿಯಾಗಿವೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ.

ಸಮಸ್ಯೆಗಳೊಂದಿಗೇ ಜೀವನ: ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ, ಅವುಗಳನ್ನು ಬಗೆಹರಿಸುವ ಭರವಸೆಗಳನ್ನಂತೂ ಸಚಿವರು ನೀಡುತ್ತಿದ್ದಾರೆ. ಅಧಿಕಾರಿಗಳಿಗೂ ‘ಬಿಸಿ’ ಮುಟ್ಟಿಸುತ್ತಿ ದ್ದಾರೆ. ಆದರೆ 2ನೇ ಹಂತವಾದ ಅನುಪಾಲನೆ ಪರಿಣಾಮಕಾರಿ ಯಾಗಿ ಆಗುತ್ತಿಲ್ಲ. ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೂ ತಲೆಕೆಡಿಸಿ
ಕೊಳ್ಳುತ್ತಿಲ್ಲ. ತಿಂಗಳಾಗುವ ಷ್ಟರಲ್ಲಿ ಇನ್ನೊಂದು ಗ್ರಾಮವಾಸ್ತವ್ಯಕ್ಕೆ ಸಚಿ ವರು ತಯಾರಾಗುತ್ತಿರುತ್ತಾರೆ! ಅವ
ರಿಗೆ ‘ವ್ಯವಸ್ಥೆ’ ಮಾಡುವತ್ತ ಅಧಿಕಾರಿಗಳು ಗಮನ ಹರಿಸುತ್ತಾರೆ. ಪರಿಣಾಮ? ವಾಸ್ತವ್ಯ ನಡೆದ ಹಳ್ಳಿ ಜನ ಎಂದಿನ ಸಮಸ್ಯೆಗಳೊಂದಿಗೆ ಜೀವನ ಸವೆಸುತ್ತಿದ್ದಾರೆ.

‘ಇಲಾಖೆಯನ್ನು ಮತ್ತಷ್ಟು ಜನಪರಗೊಳಿಸಬೇಕು’ ಎಂಬ ಸಚಿವರ ಬಯಕೆಗೆ ಅಧಿಕಾರಿ ವರ್ಗ ಸ್ಪಂದಿಸದಿರುವುದು ‘ಪ್ರಜಾವಾಣಿ’ ನಡೆಸಿದ ರಿಯಾಲಿಟಿ ಚೆಕ್‌ ವೇಳೆ ಕಂಡು ಬಂತು. ಕಾರ್ಯಕ್ರಮಕ್ಕೆ ನೀಡುವಷ್ಟೇ ಆದ್ಯತೆಯನ್ನು ಸಚಿವರು ಫಾಲೋಅಪ್‌ಗೆ ಕೊಡದಿರುವುದು ಢಾಳಾಗಿ ಎದ್ದು ಕಾಣುತ್ತಿದೆ.

ಕ್ರಾಂತಿಕಾರಿ ಬದಲಾವಣೆಯಾಗಿಲ್ಲ: ಸ್ಥಳೀಯ ಅಧಿಕಾರಿಗಳ ಹಂತದಲ್ಲಿ ಆಗಬಹುದಾದ ಕೆಲವು ಸಣ್ಣಪುಟ್ಟ ಕೆಲಸಗಳಷ್ಟೇ ನಡೆದಿವೆ. ಒತ್ತುವರಿ, ಭೂಪರಿವರ್ತನೆ, ಅಕ್ರಮ ಸಾಗುವಳಿ ಸಕ್ರಮಗೊಳಿಸುವುದು, ಆಶ್ರಯ ಯೋಜನೆ, ರೈತರಿಗೆ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಆದೇಶ, ಕಾಯ್ದೆಗಳಿಗೆ ತಿದ್ದುಪಡಿ ಮೊದಲಾದವುಗಳೂ ನಡೆದಿಲ್ಲ.

‘ಕ್ರಾಂತಿಕಾರಿ ಬದಲಾವಣೆ’ ಸಾಧ್ಯ ವಾಗಿಲ್ಲ. ಉಡುಪಿಯ ಕೆಂಜೂರಿನಲ್ಲಿರುವ ಕರಾವಳಿಯ ಅತ್ಯಂತ ಹಿಂದುಳಿದಿರುವ ಕುಡುಬಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಹಕ್ಕುಪತ್ರ ವಿತರಿಸುವ ಮತ್ತು ಭೂ ಮಂಜೂರಾತಿ ಮಾಡಿಕೊಡುವುದಕ್ಕೆ ಸಂಬಂಧಿಸಿ ಅಶೋಕ್ ನೀಡಿದ್ದ ಆಶ್ವಾಸನೆ ಮಾತುಗಳಲ್ಲಷ್ಟೆ ಉಳಿದಿರುವುದು ಇದಕ್ಕೆ ಜ್ವಲಂತ ಉದಾಹರಣೆ.

‘‌ಪರಿಹಾರ ವಿತರಣೆಯಲ್ಲಿ ಅನ್ಯಾಯ ವಾಗಿದೆ’ ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಚವೆಯ ನೆರೆ ಸಂತ್ರಸ್ತರು ಸಚಿವರೆದುರು ಅಳಲು ತೋಡಿಕೊಂಡಿದ್ದರು. ಕಾರ್ಯಕ್ರಮ ನಡೆದ ವಸತಿನಿಲಯದ ಹಳೆಯ ಚಾವಣಿ ಬದಲಾಯಿಸಿಕೊಡುವ ಭರವಸೆಯನ್ನೂ ಸಚಿವರು ಮರೆತಿದ್ದಾರೆ. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು, ಶೇ 64ರಷ್ಟು ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರ ವಿತರಿಸಬೇಕು ಎಂಬ ಬೇಡಿಕೆಗಳಿಗೆ ಸಿಕ್ಕ ಸ್ಪಂದನೆ ಶೂನ್ಯ!

ತಂತ್ರಾಂಶವೇ ಸಿದ್ಧವಾಗಿಲ್ಲ: ‘ಮೂರೇ ದಿನಗಳಲ್ಲಿ ಭೂ ಪರಿವರ್ತನೆ ಮಾಡಿಕೊಡಲಾಗುವುದು’ ಎಂಬ ಸಚಿವರ ಆಶ್ವಾ ಸನೆಯೂ ಅನುಷ್ಠಾನವಾಗಿಲ್ಲ. ಎಂದಿನಂತೆ ಅಧಿಕಾರಿಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ; ಅಲೆದಾಡಿ ಸುತ್ತಿದ್ದಾರೆ ಎಂಬ ದೂರುಗಳಿವೆ.‌ ‘ಸಚಿವರು ಹೇಳಿದ್ದನ್ನು ಮಾಡಲು ತಂತ್ರಾಂಶವೇ ಸಿದ್ಧವಾಗಿಲ್ಲ’ ಎನ್ನುವುದು ಅಧಿಕಾರಿಗಳ ಸಮಜಾಯಿಷಿ.

ಇನ್ನೊಂದೆಡೆ, 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿಯಿಂದಲೂ ನಿರೀಕ್ಷಿತ ಪ್ರಯೋಜನವಾಗಿಲ್ಲ. ಆ ಸೇವೆ ಬಗ್ಗೆ ಪ್ರಚಾರದ ಕೊರತೆಯೂ ಇದೆ.

ವಾಸ್ತವ್ಯ ಕಾರ್ಯಕ್ರಮವು ಹಳ್ಳಿಗಳಲ್ಲಿನ ಜನರ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತಿದೆ. ಆದರೆ, ಪರಿಹಾರ ಎನ್ನುವುದು ಕನ್ನಡಿಯೊಳಗಿನ ಗಂಟಿ ನಂತಾಗಿಯೇ ಉಳಿದಿರುವುದು ಕಟು ವಾಸ್ತವ. ಇದಕ್ಕೆ, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ನಡೆಸುವ ವಾಸ್ತವ್ಯ ಕಾರ್ಯಕ್ರಮವೂ ಹೊರತಾಗಿಲ್ಲ ಎನ್ನುವುದು ಹಳ್ಳಿಗಳ ಚಿತ್ರಣ ಸಾರಿ ಸಾರಿ ಹೇಳುತ್ತಿದೆ.

ಶಾಲೆಯಾಗಲಿಲ್ಲ, ಬಸ್ ಬಂತು..

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿಯ ಜನ ಪ್ರೌಢಶಾಲೆಗಾಗಿ ಮಂಡಿಸಿದ್ದ ಬೇಡಿಕೆ ಹಾಗೆಯೇ ಉಳಿದಿದೆ. ‘ಶೆರೇವಾಡ ಗ್ರಾಮದಲ್ಲಿ 6.50 ಎಕರೆ ಜಾಗ ನೀಡಿ, ಸಮಾಜ ಕಲ್ಯಾಣ ಇಲಾಖೆಯಿಂದ ₹ 28 ಕೋಟಿ ಅನುದಾನದಲ್ಲಿ ಡಾ.ಅಂಬೇಡ್ಕರ್ ವಸತಿ ಶಾಲೆ ನಿರ್ಮಿಸಲಾಗುವುದು’ ಎಂದು ಸಚಿವರು ನೀಡಿದ್ದ ಭರವಸೆಗೆ ವರ್ಷದ ಮೇಲೆ 2 ತಿಂಗಳಾಗಿದೆ!

‘ಆರು ಕಿ.ಮೀ.ದೂರದ ಬೂಅರಳಿಕಟ್ಟಿ‌ ಪ್ರೌಢಶಾಲೆಗೆ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ’ ಎಂದು ಅದೇ ಗ್ರಾಮದ ವಿದ್ಯಾರ್ಥಿನಿಯರು ಅಲವತ್ತುಕೊಂಡ ಮರುದಿನದಿಂದಲೇ ಬಸ್‌ ಕಾರ್ಯಾಚರಣೆ ಆರಂಭವಾಗಿದೆ‌.

‘ಆರಂಭದಲ್ಲಿ ಲೋಪ ದೋಷ ಸಹಜ’

‘ಗ್ರಾಮ ವಾಸ್ತವ್ಯ’ ನನಗೂ ಪಾಠಶಾಲೆ ಇದ್ದಹಾಗೆ. ಯಾವುದೇ ಯೋಜನೆ ಜಾರಿ ಮಾಡಿದಾಗ ಮೊದ ಮೊದಲು ಸ್ವಲ್ಪ ಲೋಪದೋಷಗಳು ಇರುತ್ತವೆ. ನನ್ನ ಉದ್ದೇಶ ಅಧಿಕಾರಿಗಳು ಮತ್ತು ಜನರ ಮಧ್ಯೆ ಅಂತರ ಕಡಿಮೆ ಆಗಬೇಕು. ಅಧಿಕಾರಿಗಳಿಗೆ ಹಳ್ಳಿಗಳ ಸಮಸ್ಯೆ ದರ್ಶನ ಆಗಬೇಕು. ಆಗ ಮಾತ್ರ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಸುಲಭ. ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಪಿಂಚಣಿ ಪಡೆಯಲು ಜನರು ಮೊದಲು ಕಷ್ಟಪಡುತ್ತಿದ್ದರು. ಈಗ 72 ಗಂಟೆಗಳಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೇ ಸಿಗುವಂತೆ ಮಾಡಿದ್ದೇನೆ. ಇದು ದೇಶದಲ್ಲಿಯೇ ವಿನೂತನ ಕ್ರಮ. ಸ್ವಾವಲಂಬಿ ಆಪ್‌ ಮೂಲಕ ಜನರೇ ಪೋಡಿ ಮಾಡಿಕೊಳ್ಳಲು ಅವಕಾಶ ಮಾಡಲಾಗಿದೆ. ಮುಂದೆ ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ ತಾಲ್ಲೂಕಿಗೆ ಭೇಟಿ ನೀಡಬೇಕು ಎನ್ನುವ ಯೋಜನೆಗೆ ರೂಪುರೇಷೆ ಸಿದ್ಧಪಡಿಸಿ, ನಾನೇ ಖುದ್ದು ವೇಳಾಪಟ್ಟಿ ನಿಗದಿಪಡಿಸುತ್ತೇನೆ. ಹೀಗೆ ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ಜನರ ಮೆನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಹಾಗೂ ಇಲಾಖೆಯಲ್ಲಿ ಹೊಸತನ ತರಲು ಸರ್ವ ಪ್ರಯತ್ನ ಮಾಡುತ್ತಿದ್ದೇನೆ.
- ಆರ್‌.ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT