ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು

Last Updated 4 ಡಿಸೆಂಬರ್ 2022, 13:08 IST
ಅಕ್ಷರ ಗಾತ್ರ

‘ರಸ್ತೆ ಗುಂಡಿಗೆ ಯಾರು ಹೊಣೆ?’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಡಿಸೆಂಬರ್ 27) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಸ್ಥಳೀಯ ಜನಪ್ರತಿನಿಧಿ, ಅಧಿಕಾರಿಗಳಿಂದ ಪರಿಹಾರ’

ವಾಹನ ಖರೀದಿಸುವಾಗ ಕಟ್ಟುವ ತೆರಿಗೆಯಿಂದ ಉತ್ತಮ ರಸ್ತೆ ನಿರ್ಮಿಸುವುದು ಸರ್ಕಾರದ ಕರ್ತವ್ಯ. ಆದರೆ, ಅದು ತನ್ನ ಸಂವಿಧಾನಿಕ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾದಾಗ, ರಸ್ತೆ ಗುಂಡಿಗಳಿಂದ ಆಗುತ್ತಿರುವ ಅಮಾಯಕ ಜನರ ಮಾರಣ ಹೋಮವೇ ಸಾಕ್ಷಿ. ಬ್ರಿಟಿಷರು ಕಟ್ಟಿದ ಕಟ್ಟಡಗಳು ,ಸೇತುವೆಗಳು,ರೈಲ್ವೆ ಮೋರಿಗಳು ನೂರು ವರ್ಷದ ನಂತರ ಇಂದಿಗೂ ಗಟ್ಟಿಮುಟ್ಟಾಗಿವೆ. ಆದರೆ, ಇಂದಿನ ಮೀತಿಮೀರಿದ ಭ್ರಷ್ಟಾಚಾರದಿಂದ ಈ ವ್ಯವಸ್ಥೆ ಹಾಳಾಗಿದೆ.
ಅವೈಜ್ಞಾನಿಕ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಿಂದ ಮೃತಪಟ್ಟರೆ, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿಸಿ, ಅವರಿಂದ ಪರಿಹಾರ ಕೊಡಿಸುವ ಕಾನೂನನ್ನು ಜಾರಿಗೊಳಿಸಬೇಕು.

ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ

----

‘ಚುನಾವಣೆ ಮುನ್ನ ಡಾಂಬರ್‌ ವಾಸನೆ’

ರಸ್ತೆಗುಂಡಿ ಎನ್ನುವುದು ಬರೀ ರಸ್ತೆಗೆ ಸೀಮಿತವಾಗಿಲ್ಲ, ಅದು ಸಾಮಾನ್ಯಜನರ ಬದುಕಿನಲ್ಲಿ ಮರೆಯಲಾಗದ ಕಪ್ಪುಚುಕ್ಕೆಯಾಗಿ ಕಾಣತೊಡಗಿದೆ. ನಿತ್ಯ ಒಬ್ಬರೂ ಗುಂಡಿಗೆ ಬಿದ್ದು ಜೀವ ಬಿಡುತ್ತಿದ್ದಾರೆ. ರಾಜಕಾರಣಿಗಳು ಬರುವ ಮುನ್ನ ಒಂದೆರೆಡು ದಿನಗಳ ಮಟ್ಟಿಗೆ ಟಾರ್ ಹಾಕಲಾಗುತ್ತಿದೆ. ಮತ್ತೆ ಎರಡೇ ದಿನಕ್ಕೆ ಅದು ಕಿತ್ತು ಹೋಗುತ್ತಿದೆ. ಡಾಂಬರ್ ವಾಸನೆ ಬರುತ್ತಿದೆ ಎಂದರೆ, ಒಂದು ಮುಂದೆ ಚುನಾವಣೆ ಬರುತ್ತಿದೆ ಎಂದರ್ಥ ಇಲ್ಲಾ ಯಾವುದೇ ಒಬ್ಬ ರಾಜಕಾರಣಿಯ ಬರುತ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು.

ಬಸವರಾಜ ಕೊಕ್ಕರಗುಂದಿ, ಗದಗ

----

‘ಹೈಕೋರ್ಟ್‌ ನಿರ್ದೇಶನ ಪಾಲಿಸಿ’

ರಸ್ತೆ ಕಾಮಗಾರಿಯೇ ಸೇರಿ ಯಾವುದೇ ಸರ್ಕಾರಿ ಕಾಮಗಾರಿಗಳಿಗೆ ಅದರದ್ದೇ ಆದ ನಿಯಮಾವಳಿವೆ. ಆದರೆ ಪ್ರಬಲರೇ ಗುತ್ತಿಗೆ ಪಡೆಯುವ ಬಹುತೇಕ ಪ್ರಕರಣಗಳಲ್ಲಿ ಈ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದಲೇ ಬಹುತೇಕ ಅನಾಹುತಗಳಿಗೆ ಕಾರಣವಾಗುವುದು ನಿಶ್ಚಿತ. ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಲಂಚದ ಪ್ರಖರತೆಯೂ ಇದಕ್ಕೆ ಕಾರಣವಾಗಿರಬಹುದು. ಅಧಿಕಾರಿಗಳು ಯಾವುದೇ ಮುಲಾಜಿಗೆ ಒಳಗಾಗದೇ ಕ್ರಮ ಕೈಗೊಂಡಾಗ ಇಂತಹ ಅನಾಹುತಗಳನ್ನು ತಪ್ಪಿಸಲು ಸಾಧ್ಯ. ಅಮಾಯಕರು ಬಲಿಯಾದಾಗ ಪಡೆಯುವ ಪರಿಹಾರಕ್ಕಾಗಿ ಓಡಾಡಲಾಗದೆ ಸಂಕಟ ಅನುಭವಿಸುವ ಸಂಗತಿಗಳು ದೂರವಾಗಬೇಕಿದೆ. ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

ಸುರೇಶ್ ಕಲಾಪ್ರಿಯಾ, ಗಂಗಾವತಿ

––––

‘ರಸ್ತೆಗುಂಡಿ ಆಳುವ ವರ್ಗದ ಹುಂಡಿಗಳಾಗಿ ಪರಿವರ್ತನೆ’

ಕೆಟ್ಟ ರಸ್ತೆಗಳು ಮತ್ತು ಗುಂಡಿಗಳಿಂದಾಗಿ ಉಂಟಾಗುವ ಅಪಘಾತ ಮತ್ತು ಸಾವುಗಳಿಗೆ ಸಂಬಂಧಿಸಿದ ಇಲಾಖೆ ಹಾಗೂ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವ ಮತ್ತು ಪರಿಹಾರ ನೀಡುವ ಅಗತ್ಯವಿದೆ. ನಮ್ಮಲ್ಲಿ ರಸ್ತೆಗಳ ನಿರ್ಮಾಣ ಹಾಗೂ ದುರಸ್ತಿ ಭ್ರಷ್ಟಾಚಾರದ ದೊಡ್ಡ ಮೂಲಗಳು. ಇತರ ಯಾವುದೇ ಕಾಮಗಾರಿಗಳಿಗಿಂತ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತದೆ. ಇದರಿಂದ ಅಲ್ಪಾವಧಿಯಲ್ಲಿಯೇ ರಸ್ತೆಗಳು ಕೆಟ್ಟು ಹೋಗುತ್ತಿವೆ. ಕಾಂಕ್ರೀಟ್ ರಸ್ತೆಗಳ ಪರಿಸ್ಥಿತಿ ಕೂಡ ಏನು ಚೆನ್ನಾಗಿಲ್ಲ. ಇದಕ್ಕೆ ಯಾರೂ ಹೊಣೆಗಾರರಾಗದಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ. ನಮ್ಮ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಒಳಭಾಗದ ರಸ್ತೆಗಳ ಪರಿಸ್ಥಿತಿಯಂತೂ ತೀರಾ ಶೋಚನಿಯ. ಯಾರಿಗೆ ದೂರಿದರು, ಏನೇ ಪ್ರತಿಭಟಿಸಿದರೂ ಕೂಡ ಕ್ರಮ ಆಗುವುದಿಲ್ಲ. ಗುಣಮಟ್ಟದ ರಸ್ತೆಗಳು ಗುಣಮಟ್ಟದ ಆಡಳಿತದ ಪ್ರತೀಕ. ಕೆಟ್ಟ ರಸ್ತೆಗಳು ಕೆಟ್ಟ ಆಡಳಿತದ ಪ್ರತಿಬಿಂಬ. ರಸ್ತೆಗಳು ಕೆಟ್ಟಂತೆ ಅಥವಾ ರಸ್ತೆಗಳ ಮೇಲೆ ಗುಂಡಿಗಳು ಬಿದ್ದಂತೆ ತಕ್ಷಣ ದುರಸ್ತಿಗೊಳಿಸುವ ಒಂದು ವ್ಯವಸ್ಥೆ ನಮ್ಮಲ್ಲಿ ಜಾರಿಗೆ ಬರಬೇಕಾಗಿದೆ. ಇದಕ್ಕೆ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಬೇಕು. ಇಲ್ಲದಿದ್ದಲ್ಲಿ ರಸ್ತೆ ಗುಂಡಿಗಳು ಆಳುವ ವರ್ಗದ ಹುಂಡಿಗಳನ್ನು ತುಂಬುವ ಮೂಲಗಳಾಗಿ ಅಮಾಯಕ ಜೀವಗಳನ್ನು ಬಲಿಪಡೆಯುತ್ತಲೇ ಇರುತ್ತವೆ.

ವೆಂಕಟೇಶ ಮಾಚಕನೂರ. ಧಾರವಾಡ

––––––

‘ಈ ಸಾವು ನ್ಯಾಯವೇ?’


ರಸ್ತೆ ಗುಂಡಿಗಳಿಂದ ಮಾತ್ರ ಅಲ್ಲ ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದಲೂ ವಾಹನಗಳು ಬಿದ್ದು ಅಪಘಾತಗಳಾಗುತ್ತಿವೆ. ರಸ್ತೆಯಲ್ಲಿ ಗುಂಡಿ ಇದ್ದರೆ ರಿಪೇರಿ ಆಗುವ ಮೊದಲೇ ಸಾರ್ವಜನಿಕರೇ ಮುಂದೆ ಗುಂಡಿ ಇದೆ ಎಂದು ಎಚ್ಚರಿಸುವ ಫಲಕ ಅಳವಡಿಸಬೇಕು. ಹಲವೆಡೆ ಸಾರ್ವಜನಿಕರೇ ಮುತುವರ್ಜಿ ವಹಿಸಿ ಬಿಬಿಎಂಪಿ ಅಥವಾ ಸಂಬಂಧಪಟ್ಟವರಿಗೆ ಕಾಯದೆ ತಾವೇ ಸ್ವತ: ಮಣ್ಣು ಸಿಮೆಂಟ್ ಹಾಕಿ ಗುಂಡಿ ಮುಚ್ಚುವುದನ್ನು ನೋಡಿದ್ದೇವೆ. ಅಂತವರನ್ನ ಸನ್ಮಾನ ಮಾಡಿ ಪ್ರಶಸ್ತಿ ಕೊಟ್ಟು ಗೌರವಿಸಬೇಕು. ಪೊಲೀಸ್ ಇಲಾಖೆ ದಂಡ ವಸೂಲಿ ಮಾತ್ರ ಮಾಡುತ್ತಾರೆ. ಆದರೆ, ರಸ್ತೆ ಗುಂಡಿ ಮುಚ್ಚಿಸುವ ಪ್ರಯತ್ನ ಮಾಡುವುದಿಲ್ಲ.


- ದೀಪಕ್ ಶಿರಾಲಿ.
ತ್ಯಾಗರಾಜ ನಗರ, ಬೆಂಗಳೂರು

––––

‘ದುರಸ್ತಿ ಕಾರ್ಯ ವಿಳಂಬವಾಗಬಾರದು’

ರಸ್ತೆ ಗುಂಡಿಯ ಸಮಸ್ಯೆಗಳಿಂದ ಉಂಟಾಗಿರುವ ಅಡಚಣೆ, ಅಪಘಾತ, ಸಾವು, ನೋವು, ಆತಂಕಗಳು ಸಾರ್ವಜನಿಕರು ನಿತ್ಯದ ಸಹಿಸಲಾಗದ ಅನುಭವವಾಗಿದೆ. ಇದಕ್ಕೆ ವಾಹನ ಸವಾರರು ರಸ್ತೆ ಸುರಕ್ಷತೆಯ ನಿಯಮಗಳ ಉಲ್ಲಂಘನೆ ಕೂಡ ಕಾರಣವಾಗಿದೆ.

ಸಂಬಂಧಪಟ್ಟ ಇಲಾಖೆಗಳು ರಸ್ತೆಗಳ ದುರಸ್ತಿ ಕಾರ್ಯಕ್ಕೆ ವಿಳಂಬ ನೀತಿ ಅನುಸರಿಸದೇ, ಭ್ರಷ್ಟಾಚಾರದಲ್ಲಿ ತೊಡಗದೆ, ಸಮನ್ವಯದ ಕೊರತೆ ನೀಗಿಸಿಕೊಂಡು, ಪರಸ್ಪರ ಸಹಕಾರದಿಂದ ಮೇಲ್ವಿಚಾರಣೆ-ನಿರ್ವಹಣೆಯಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.

ದತ್ತಪ್ರಕಾಶ್ ಏಕಬೋಟೆ, ಬೆಂಗಳೂರು

–––

‘ರಸ್ತೆ ಗುಂಡಿಯಲ್ಲಿ ಸತ್ತವರು ಹುತ್ತಾತ್ಮರು’

ರಸ್ತೆ ಗುಂಡಿಗೆ ಬಲಿಯಾದ ಮಂಡ್ಯದ ಎನ್‌. ನರಸಯ್ಯ ಅವರ ತಂದೆ–ತಾಯಿಯ ಅಳಲು ಕೇಳುವವರಾರು? ರಸ್ತೆ ಗುಂಡಿಯಿಂದ ಸತ್ತವರೆಲ್ಲರೂ ಹುತ್ತಾತ್ಮರು. ಸರ್ಕಾರ ಅವರ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಕಠಿಣ ನಿಯಮ ರೂಪಿಸುವ ಅಗತ್ಯವಿದೆ.

ಪಿನಾಕಪಾಣಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT