ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮಿಕ್ರಾನ್‌ ಭೀತಿ: ಲಾಕ್‌ಡೌನ್‌ ಪ್ರಸ್ತಾವವೇ ಸರ್ಕಾರದ ಮುಂದಿಲ್ಲ; ಡಾ.ಕೆ.ಸುಧಾಕರ್

Last Updated 29 ನವೆಂಬರ್ 2021, 6:54 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ. ಈ ವಿಷಯದಲ್ಲಿ ಜನರನ್ನು ಆತಂಕಕ್ಕೆ ತಳ್ಳುವ ಕೆಲಸವನ್ನು ಯಾರೂ ಮಾಡಬಾರದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಕೆಲವು ದೇಶಗಳಲ್ಲಿ ಓಮಿಕ್ರಾನ್‌ ತಳಿಯ ಹೊಸ ಕೋವಿಡ್‌ ವೈರಾಣು ಪತ್ತೆಯಾಗಿದೆ. ಅದು ವೇಗವಾಗಿ ಹರಡುತ್ತದೆ ಎಂಬ ಮಾಹಿತಿ ಲಭಿಸಿದೆ. ಆದರೆ, ಅದೇ ಕಾರಣಕ್ಕಾಗಿ ಲಾಕ್‌ಡೌನ್‌ ಮಾಡಲಾಗುತ್ತದೆ ಎಂಬ ವದಂತಿಯನ್ನು ಸಾಮಾಜಿಕ ಮಾಧ್ಯಮಗಳು ಅಥವಾ ಮಾಧ್ಯಮಗಳಲ್ಲಿ ಬಿತ್ತರಿಸಬಾರದು ಎಂದರು.

ಕೋವಿಡ್‌ನಿಂದ ಜನರು ಈಗಾಗಲೇ ಸಾಕಷ್ಟು ನೊಂದಿದ್ದಾರೆ. ಪ್ರಾಣ ಹಾನಿ, ಆರ್ಥಿಕ ನಷ್ಟ ಮತ್ತು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಜನರನ್ನು ಆತಂಕಕ್ಕೆ ಸಿಲುಕಿಸುವಂತಹ ಪ್ರಯತ್ನವನ್ನು ಮಾಡಬಾರದು ಎಂದು ಹೇಳಿದರು.

ಮಂಗಳವಾರ ಸಭೆ: ಈವರೆಗಿನ ಮಾಹಿತಿ ಪ್ರಕಾರ 12 ದೇಶಗಳಲ್ಲಿ ಓಮಿಕ್ರಾನ್‌ ತಳಿಯ ಕೋವಿಡ್‌ ವೈರಾಣು ಪತ್ತೆಯಾಗಿದೆ. ಈ ಕಾರಣದಿಂದ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯವಿದೆ. ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಲು ಮಂಗಳವಾರ ಉನ್ನತಮಟ್ಟದ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರವರೆಗೆ ಎಲ್ಲ ಹಂತದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ತಜ್ಞರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ಎಲ್ಲರ ಜತೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಲಾಗುವುದು. ನಂತರ ನಿಯಂತ್ರಣ ಕ್ರಮಗಳ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದರು.

ಡೆಲ್ಟಾದಷ್ಟು ಭೀಕರವಲ್ಲ: ಓಮಿಕ್ರಾನ್‌ ತಳಿಯ ವೈರಾಣು ಪತ್ತೆಯಾಗಿರುವ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ವೈದ್ಯ ಸ್ನೇಹಿತರ ಜತೆ ಮಾತನಾಡಿದ್ದೇನೆ. ಅವರು ನೀಡಿದ ಮಾಹಿತಿ ಪ್ರಕಾರ, ಓಮಿಕ್ರಾನ್‌ ತಳಿಯ ವೈರಾಣು ಒಂಭತ್ತು ತಿಂಗಳಿಂದ ಇರುವ ಡೆಲ್ಟಾ ತಳಿಯ ವೈರಾಣುವಿನಷ್ಟು ತೀವ್ರವಾಗಿ ವರ್ತಿಸುವುದಿಲ್ಲ. ಇದು ಸೌಮ್ಯವಾಗಿ ವರ್ತಿಸುತ್ತಿರುವ ವೈರಾಣು ಎಂಬ ಮಾಹಿತಿ ಲಭಿಸಿದೆ ಎಂದು ಸುಧಾಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT