ಮಂಗಳವಾರ, ಜನವರಿ 18, 2022
23 °C
'ಅನಗತ್ಯ ಭಯ ಬೇಡ, ಲಸಿಕೆಗೆ ಆದ್ಯತೆ ಕೊಡಿ'

ಓಮೈಕ್ರಾನ್ ಆತಂಕ: ಸದ್ಯಕ್ಕೆ ಸಿನಿಮಾ, ಹೋಟೆಲ್, ಮಾಲ್ ಬಂದ್ ಇಲ್ಲ –ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ತಳಿ ಓಮೈಕ್ರಾನ್ ಆತಂಕ ಸೃಷ್ಟಿಸಿರುವುದು ನಿಜವಾದರೂ ಸದ್ಯಕ್ಕೆ ರಾಜ್ಯದಲ್ಲಿ ಚಿತ್ರ ಮಂದಿರ, ಹೋಟೆಲ್ ಮತ್ತು ಮಾಲ್‌ಗಳನ್ನು ಮುಚ್ಚುವುದಿಲ್ಲ. ಆದರೆ, ಇಂತಹ ಸ್ಥಳಗಳಿಗೆ ಹೋಗುವವರಿಗೆ ಸದ್ಯದಲ್ಲೇ ಲಸಿಕೆ ಕಡ್ಡಾಯ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ವೈದ್ಯರನ್ನು ಕುರಿತ 'ಪ್ರೇಮಂ ಪೂಜ್ಯಂ' ಸಿನಿಮಾ ನಾಯಕ ನಟ ಪ್ರೇಮ್ ಅವರು ಗುರುವಾರ ಅಶ್ವತ್ಥನಾರಾಯಣ ಅವರನ್ನು ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯಕ್ಕೆ ಯಾವುದೇ ವಲಯದ ಚಟುವಟಿಕೆಗಳನ್ನು ನಿರ್ಬಂಧಿಸುವ ಚಿಂತನೆ ಸರಕಾರಕ್ಕಿಲ್ಲ ಎಂದರು.

ಓಮೈಕ್ರಾನ್ ವೈರಾಣುವಿನಿಂದ ಜೀವಕ್ಕೇನೂ ಅಪಾಯವಿಲ್ಲ. ಆದರೆ, ಇದುವರೆಗೆ ಒಂದೂ ಡೋಸ್ ಲಸಿಕೆಯನ್ನು ಪಡೆದುಕೊಳ್ಳದೆ ಇರುವವರು ಮುಂಜಾಗ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಸರ್ಕಾರ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದರೆ, ಅನಗತ್ಯ ಭಯ-ಭೀತಿಗಳು ಬೇಡ ಎಂದು ಮನವಿ ಮಾಡಿದರು.

ಚಿತ್ರಮಂದಿರ, ಹೋಟೆಲ್, ಮಾಲ್‌ಗಳಂತಹ ಜನಸಂದಣಿಯ ಸ್ಥಳಗಳು ಸೇರಿದಂತೆ ಎಲ್ಲೆಡೆಗಳಿಗೂ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಹೋಗಬೇಕು. ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿರುವ 11 ದೇಶಗಳ ಪರಿಸ್ಥಿತಿ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಇವರ ಪರೀಕ್ಷಾ ವರದಿಗಳನ್ನು ಜಿನೋಮ್ ಸೀಕ್ವೆನ್ಸ್‌ಗೆ ಕಳಿಸಲಾಗಿದ್ದು, ಸಂಬಂಧಿಸಿದ ವ್ಯಕ್ತಿಗಳನ್ನು ಪ್ರತ್ಯೇಕ ವಾಸದಲ್ಲಿಡಲಾಗಿದೆ. ಅಂತಿಮ ಫಲಿತಾಂಶ ನೆಗೆಟಿವ್ ಆಗಿ ಬಂದರೆ ಮಾತ್ರ ಇವರನ್ನು ಮನೆಗೆ ಕಳಿಸಿ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಮುಂದುವರಿದು, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದ್ದು, ನೆಗೆಟಿವ್ ಬಂದವರಿಗೆ ಮಾತ್ರ ರಾಜ್ಯದೊಳಕ್ಕೆ ಪ್ರವೇಶಾನುಮತಿ ನೀಡಲಾಗುವುದು. ಈ ಆತಂಕದ ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವ ಮತ್ತು ಜೀವನ ಉಳಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ನುಡಿದರು.

ಒಮೈಕ್ರಾನ್ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಧಾನಮಂಡಲದ ಅಧಿವೇಶನವನ್ನು ಕೂಡ ರದ್ದುಪಡಿಸಬೇಕೆಂದು ವಿಧಾನಸೌಧ ಸಚಿವಾಲಯ ಸಲಹೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭಾಪತಿಯೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರೇಮ್ ಚಿತ್ರಕ್ಕೆ ಅಭಿನಂದನೆ
ನಟ ಪ್ರೇಮ್ ವೈದ್ಯರಾಗಿ ಅಭಿನಯಿಸಿರುವ `ಪ್ರೇಮಂ ಪೂಜ್ಯಂ’ ಸಿನಿಮಾ ಜನಪರ ಕಳಕಳಿ ಹೊಂದಿದೆ. ಇವರು ನಮ್ಮೆಲ್ಲರ ಲವ್ಲಿ ಸ್ಟಾರ್ ಆಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರ ಜೀವ ರಕ್ಷಿಸುವ ಕೆಲಸ ಮಾಡುತ್ತಿರುವ ವೈದ್ಯರ ಕತೆ ಚಿತ್ರದಲ್ಲಿದೆ. ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ ಎಂದಿರುವ ಅಶ್ವತ್ಥನಾರಾಯಣ, ಸರ್ಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ಚಿತ್ರಕ್ಕೆ ಅಭಿನಂದನೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು