ಶನಿವಾರ, ಡಿಸೆಂಬರ್ 4, 2021
20 °C

‘ಡ್ರಗ್ ದಂಧೆ; ಪುರಾವೆ ನೀಡಲು ಮತ್ತೊಮ್ಮೆ ಅವಕಾಶ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ ದಂಧೆ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸಿಸಿಬಿ ಅಧಿಕಾರಿಗಳಿಗೆ ಯಾವುದೇ ಪುರಾವೆ ನೀಡಿಲ್ಲ ಎಂದು ಗೊತ್ತಾಗಿದೆ.

ಇಂದ್ರಜಿತ್ ಅವರ ವಿಚಾರಣೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ, 'ಸಿಸಿಬಿ ಕಚೇರಿಗೆ ಸೋಮವಾರ ಬಂದಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹೇಳಿಕೆ ನೀಡಿದ್ದಾರೆ. ಹಿಂದಿನ ಕೆಲ ಘಟನೆಗಳು ಹಾಗೂ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ’ ಎಂದರು.

‘ತಮ್ಮ ಹೇಳಿಕೆಗೆ ತಕ್ಕಂತೆ ಪುರಾವೆಗಳನ್ನು ಅವರು ನೀಡಿಲ್ಲ. ಸಂಬಂಧಪಟ್ಟ ಪುರಾವೆಗಳಿದ್ದರೆ ಒದಗಿಸಲು ಮತ್ತೊಮ್ಮೆ ಅವಕಾಶ  ನೀಡಲಿದ್ದೇವೆ. ಸಿಸಿಬಿ ವಿಶೇಷ ತಂಡವೂ ಡ್ರಗ್ ಮಾಫಿಯಾ ವಿರುದ್ಧ ತನಿಖೆ ಮುಂದುವರಿಸಿದೆ’ ಎಂದೂ ತಿಳಿಸಿದರು.

ನೈಜೀರಿಯಾ ಪ್ರಜೆಗಳ ಹೆಸರು ಪ್ರಸ್ತಾಪ; ಸ್ಯಾಂಡಲ್‌ವುಡ್‌ನ ಕೆಲ ನಟ–ನಟಿಯರು ಹಾಗೂ ಇತರರಿಗೆ ನೈಜೀರಿಯಾದ ಕೆಲ ಪ್ರಜೆಗಳು ಡ್ರಗ್ ಪೂರೈಕೆ ಮಾಡುತ್ತಿರುವ ಬಗ್ಗೆಯೂ ಇಂದ್ರಜಿತ್ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಗೊತ್ತಾಗಿದೆ.‌

ಸ್ಯಾಂಡಲ್‌ವುಡ್‌ನಲ್ಲಿ ಅವ್ಯಾಹತವಾಗಿದೆ ಎನ್ನಲಾದ ಡ್ರಗ್ ದಂಧೆಯನ್ನು ಎನ್‌ಸಿಬಿ ಅಧಿಕಾರಿಗಳು ಬಯಲು ಮಾಡುತ್ತಿದ್ದಂತೆ, ಸಿಸಿಬಿ ಅಧಿಕಾರಿಗಳು ಸಹ ತಮ್ಮದೇ ಆಯಾಮದಲ್ಲಿ ತನಿಖೆ ಶುರು ಮಾಡಿದ್ದಾರೆ. ಹಳೇ ಪ್ರಕರಣ ಹಾಗೂ ಕೆಲ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಅನುಮಾನಾಸ್ಪದ ಗ್ರಾಹಕರ ಪಟ್ಟಿಯನ್ನೂ ಸಿದ್ಧಪಡಿಸಿದ್ದಾರೆ. ಅದಕ್ಕೂ ಇಂದ್ರಜಿತ್ ನೀಡಿರುವ ಹೆಸರುಗಳಿಗೆ ಹೋಲಿಕೆಯಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ದೊಡ್ಡ ಮಟ್ಟದ ದಂಧೆ’

ಸಿಸಿಬಿಯ ಹೆಚ್ಚುವರಿ ಪೊಲೀಸ್ ಕಮಿಷನರ್ ಹಾಗೂ ಬೆಂಗಳೂರು ಕಮಿಷನರ್‌ ಆಗಿಯೂ ಕೆಲಸ ಮಾಡಿರುವ ಕೆಎಸ್‌ಆರ್‌ಪಿಯ ಎಡಿಜಿಪಿ ಅಲೋಕ್‌ಕುಮಾರ್ ಅವರು ಡ್ರಗ್ ಮಾಫಿಯಾ ಪ್ರಕರಣ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

‘ಡ್ರಗ್‌ ಮಾಫಿಯಾ ದೊಡ್ಡ ಮಟ್ಟದ ದಂಧೆ. ಇದನ್ನು ಬುಡಸಮೇತ ಹೋಗಲಾಡಿಸಲು ದಂಧೆಯಲ್ಲಿ ತೊಡಗಿರುವವರನ್ನು ಕ್ರೂರವಾಗಿ ಬೇಟೆಯಾಡಬೇಕು’ ಎಂದು ಅಲೋಕ್‌ಕುಮಾರ್ ಹೇಳಿದ್ದಾರೆ.

‘2011ರಲ್ಲಿ ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಮಾರ್ಟಿನ್ ಎನ್ ಡ್ಯೂಕ್ ಎನ್ನುವ ಡ್ರಗ್ಸ್ ಮಾಸ್ಟರ್ ಮೈಂಡ್‌ನನ್ನು ಸೆರೆ ಹಿಡಿಯಲಾಗಿತ್ತು. 2019 ರಲ್ಲಿ 60 ಡ್ರಗ್‌ ಪೆಡ್ಲರ್‌ಗಳನ್ನು ಪರೇಡ್ ನಡೆಸಲಾಗಿತ್ತು’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಠಾಣೆಗಳಿಗೆ ಕಮಿಷನರ್ ಭೇಟಿ

ಡ್ರಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಲು ಪೊಲೀಸರಿಗೆ ಸೂಚನೆ ನೀಡಿರುವ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ನಗರದ ಹಲವು ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಸವೇಶ್ವರ ನಗರ, ಚಂದ್ರಾ ಲೇಔಟ್ ಹಾಗೂ ಉಪ್ಪಾರಪೇಟೆ ಠಾಣೆಗಳಿಗೆ ಮಂಗಳವಾರ ಭೇಟಿ ನೀಡಿದ ಕಮಲ್ ಪಂತ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಚರ್ಚಿಸಿದರು. ‘ಡ್ರಗ್ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಿ. ಅಪರಾಧ ತಡೆಗಟ್ಟಲು ಮುಂದಾಗಿ’ ಎಂದು ಸೂಚನೆ ನೀಡಿದರು.

ಮೂರೂವರೆ ಕೆ.ಜಿ ಗಾಂಜಾ ಜಪ್ತಿ

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದು, ಅವರಿಂದ ₹ 1.75 ಲಕ್ಷ ಮೌಲ್ಯದ ಮೂರೂವರೆ ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಕುಂಬಳಹಳ್ಳಿಯ ಕೆ. ಮುನಿರಾಜು (33) ಹಾಗೂ ದೇವನಹಳ್ಳಿ ದಾಸರಬೀದಿಯ ನಾಗೇಶ್ (25) ಬಂಧಿತರು. ಸೂಲಿಬೆಲೆ ರಸ್ತೆಯ ಡಾಬಾವೊಂದರ ಬಳಿ ಆರೋಪಿಗಳು ಗಾಂಜಾ ಮಾರುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು