ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ’

ವಿವಿಧ ಕ್ಷೇತ್ರಗಳ ತಜ್ಞರಿಂದ ಒಕ್ಕೊರಲ ಅಭಿಮತ * ‘ಒಂದು ರಾಷ್ಟ್ರ–ಒಂದು ಚುನಾವಣೆ’ ಚರ್ಚೆ
Last Updated 22 ಫೆಬ್ರುವರಿ 2022, 17:18 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ 1952ರಿಂದ 1967ರವರೆಗೆ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ‘ಒಂದು ರಾಷ್ಟ್ರ–ಒಂದು ಚುನಾವಣೆ’ಯ ಬಗ್ಗೆ ಜನಾಭಿಪ್ರಾಯಗಳನ್ನು ಆಧರಿಸಿ, ಸಂವಿಧಾನದ ಅಡಿಯಲ್ಲಿ ಕ್ರಮವಹಿಸಬೇಕು. ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆಗೆ ಅನುವು ಮಾಡಿಕೊಡಬೇಕು.’

ಇವು ಭಾರತೀಯ ವಿಕಾಸ ವೇದಿಕೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ ‘ಒಂದು ರಾಷ್ಟ್ರ–ಒಂದು ಚುನಾವಣೆ’ ದುಂಡು ಮೇಜಿನ ಸಭೆಯಲ್ಲಿ ವಿವಿಧ ಕ್ಷೇತ್ರಗಳ ತಜ್ಞರಿಂದ ವ್ಯಕ್ತವಾದ ಒಮ್ಮತದ ಅಭಿಪ್ರಾಯಗಳು.

ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,‘ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಬಗ್ಗೆ ನಿರಂತರ ಚರ್ಚೆ ನಡೆಯಬೇಕು. ಚರ್ಚೆಯೇ ಬೇಡ ಎಂಬ ವಾತಾವರಣ ವಿಧಾನಸೌಧದ ಒಳಗಡೆ ಹಾಗೂ ಹೊರಗಡೆ ಇರಬಾರದು. 1983ರಲ್ಲಿಯೇ ಒಂದು ರಾಷ್ಟ್ರ–ಒಂದು ಚುನಾವಣೆಯ ಬಗ್ಗೆ ಚುನಾವಣಾ ಆಯೋಗ ಹೇಳಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದಾರೆ ಎಂಬ ಮಾತ್ರಕ್ಕೆ ಇದನ್ನು ವಿರೋಧಿಸುವುದು ಸರಿಯಲ್ಲ.ಹಾಲಿ ವ್ಯವಸ್ಥೆಯು ಅಭಿವೃದ್ಧಿಯ ವೇಗಕ್ಕೆ ತಡೆ ಒಡ್ಡುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಕಾರ್ಯಚಟುವಟಿಕೆಗಳು ಕುಂಠಿತ ಆಗುತ್ತಿವೆ. ಲೋಕಸಭೆ ಚುನಾವಣೆಗೆ ₹ 60 ಸಾವಿರ ಕೋಟಿಖರ್ಚಾಗುತ್ತಿದೆ. ಹಣದ ಉಳಿತಾಯ, ಮಾನವ ಶಕ್ತಿಯ ಸದ್ಬಳಕೆಗೆ ಚುನಾವಣೆ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ’ ಎಂದು ತಿಳಿಸಿದರು.

‘ಏಕಕಾಲದಲ್ಲಿ ಚುನಾವಣೆ ಸಾಕಾರಗೊಳ್ಳಲು ಸಂವಿಧಾನಿಕ ತಿದ್ದುಪಡಿಗಳು ಅಗತ್ಯ. ಈಗ ಚುನಾವಣೆಗಳಲ್ಲಿಜನ ಬಲ, ಧನ ಬಲ ನಿರ್ಣಾಯಕ ಆಗುತ್ತಿವೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಒಂದೇ ಬಾರಿಗೆ ನಡೆಸಿದರೆ ಮಾನವ ಶ್ರಮ, ಸಮಯ ಮತ್ತು ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ’ ಎಂದು ಹೇಳಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಒಂದೊಂದು ರಾಜ್ಯದಲ್ಲಿ ಒಂದೊಂದು ಅವಧಿಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಚುನಾವಣಾ ವೆಚ್ಚ ಅಧಿಕ ಆಗುತ್ತಿದೆ. ಹಾಲಿ ಚುನಾವಣಾ ವ್ಯವಸ್ಥೆಯಲ್ಲಿ ಹಲವಾರು ಲೋಪಗಳಿವೆ. ಒಂದು ರಾಷ್ಟ್ರ–ಒಂದು ಚುನಾವಣೆ ಅಗತ್ಯ. ಇದರಿಂದ ಸಾವಿರಾರು ಕೋಟಿ ರೂಪಾಯಿ ಉಳಿಯುತ್ತದೆ’ ಎಂದು ಅಭಿಮತ ವ್ಯಕ್ತಪಡಿಸಿದರು.

ವಕೀಲ ಅಶೋಕ್ ಹಾರನಹಳ್ಳಿ, ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತುರ್ತಾಗಿ ಅಗತ್ಯ. ಈ ಪ್ರಕ್ರಿಯೆ ಸಮುದ್ರ ಮಂಥನದ ರೀತಿ ನಡೆಯಬೇಕು.ಪ್ರಜಾಪ್ರಭುತ್ವದ ಮಂಥನದಲ್ಲಿ ವಿಷವೇ ಹೆಚ್ಚು ಬರುವಂತೆ ಅನಿಸುತ್ತದೆ. 2014ರ ನಂತರ ಎರಡು ಮೂರು ವರ್ಷಗಳಲ್ಲಿ 14ರಿಂದ 15 ಚುನಾವಣೆಗಳು ನಡೆದಿವೆ. 2024ರ ಲೋಕಸಭೆ ಚುನಾವಣೆಗೆ ಆದರೂ ಒಂದು ಹೆಜ್ಜೆ ಮುಂದಿಡಬೇಕು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಮ್ಮೆ ನಡೆದರೆ ವ್ಯವಸ್ಥೆಯಲ್ಲಿ ತಕ್ಕ ಮಟ್ಟಿನ ಸುಧಾರಣೆ ಸಾಧ್ಯ’ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷಐ.ಎಸ್. ಪ್ರಸಾದ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹಾಗೂಭಾರತೀಯ ವಿಕಾಸ ವೇದಿಕೆಯ ಪ್ರಧಾನ ಸಂಚಾಲಕಎಂ.ಆರ್. ವೆಂಕಟೇಶ್ ‘ಒಂದು ರಾಷ್ಟ್ರ–ಒಂದು ಚುನಾವಣೆ’ ಬಗ್ಗೆ ತಮ್ಮ ಅಭಿಮತ ವ್ಯಕ್ತಪ‍ಡಿಸಿದರು.

‘ಸಮಗ್ರ ಬದಲಾವಣೆ ಅಗತ್ಯ’

‘ಪಂಚಾಯಿತಿಯಿಂದ ಲೋಕಸಭೆಯ ವರೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಬಗ್ಗೆ ಚರ್ಚೆಯಾಗಬೇಕು. ಪ್ರಸ್ತುತ ರಾಜಕಾರಣ ನಂಬಿಕೆ ಮತ್ತು ವಿಶ್ವಾಸ ಕಳೆದುಕೊಂಡಿದ್ದು, ಕೇಂದ್ರ ಸರ್ಕಾರ ವ್ಯಕ್ತಿಗತ ಪ್ರತಿಷ್ಠೆಯಾಗಿ ಪರಿಗಣಿಸುತ್ತಿದೆ. ಪ್ರತಿಪಕ್ಷಗಳನ್ನು ಶತ್ರುಗಳೆಂದು ಪರಿಗಣಿಸುತ್ತಿದೆ. ಇದರಿಂದ ಅಪನಂಬಿಕೆ ಬರುತ್ತಿದೆ. ವಿಪಕ್ಷಗಳು ಪ್ರತಿಸ್ಪರ್ಧಿಗಳೇ ಹೊರತು ಶತ್ರುಗಳಲ್ಲ. ಆದ್ದರಿಂದ ಎಲ್ಲ ಪ್ರಾದೇಶಿಕ ಪಕ್ಷಗಳ ಒಮ್ಮತದ ಅಭಿಪ್ರಾಯದೊಂದಿಗೆ ಈ ವ್ಯವಸ್ಥೆ ಜಾರಿಯಾಗಬೇಕು’ ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ತಿಳಿಸಿದರು.

‘ಮರೆಯಾದ ಸೇವಾ ಮನೋಧರ್ಮ’

‘ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮುಖ್ಯ. 1967ರವರೆಗೆ ಚುನಾವಣೆಗಳಲ್ಲಿ ಅಭ್ಯರ್ಥಿಗಳಿಗೆ ಮತದಾರರೇ ಚುನಾವಣಾ ಖರ್ಚಿಗೆ ಹಣ ನೀಡುತ್ತಿದ್ದರು. ಉತ್ತಮ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿತ್ತು. ಅಭ್ಯರ್ಥಿಗಳಲ್ಲಿ ಸೇವಾ ಮನೋಧರ್ಮ ಮತ್ತು ತತ್ವ ನಿಷ್ಠೆಯನ್ನು ಕಾಣಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ ಇದನ್ನು ಕಾಣುವುದು ಕಷ್ಟ. ಒಂದು ರಾಷ್ಟ್ರ ಒಂದು ಚುನಾವಣೆಯಿಂದಚುನಾವಣೆ ಆಯೋಗದ ಮೇಲೆ ಹೊರೆ ಕಡಿಮೆ ಆಗಲಿದೆ’ ಎಂದು ಪಿ.ಇ.ಎಸ್. ವಿಶ್ವವಿದ್ಯಾಲಯದ ಕುಲಾಧಿಪತಿ‍ಎಂ.ಆರ್. ದೊರೆಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT