ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರು ತರಿಸುತ್ತಿರುವ ಈರುಳ್ಳಿ

Last Updated 17 ಅಕ್ಟೋಬರ್ 2020, 19:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ ಪರಿಣಾಮವಾಗಿ ವಸ್ತುಗಳ ಸಾಗಾಟಕ್ಕೆ ತೊಂದರೆ ಎದುರಾಯಿತು. ಉತ್ಪಾದನೆಯಲ್ಲಿ ವ್ಯತ್ಯಾಸ ಆಯಿತು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ವಿವಿಧ ಬೆಳೆಗಳು ಹಾಳಾದವು. ಇವೆಲ್ಲದರ ಪರಿಣಾಮ ಎಂಬಂತೆ ನಿತ್ಯ ಬಳಸುವ ಈರುಳ್ಳಿ, ತೊಗರಿಬೇಳೆ, ಹೆಸರುಕಾಳು ಸೇರಿದಂತೆ ಬಹುತೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ.

ಮುಂಬೈ ಕರ್ನಾಟಕದ ಧಾರವಾಡ, ಬಾಗಲಕೋಟೆ, ಗದಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಜೊತೆಗೆ ಮಹಾರಾಷ್ಟ್ರದಿಂದಲೂ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಆವಕವಾಗುತ್ತದೆ. ಲಾಕ್‌ಡೌನ್‌ ಹಾಗೂ ನಂತರದ ದಿನಗಳಲ್ಲಿ ಸರಕು ಸಾಗಣೆ ವ್ಯವಸ್ಥೆಯಲ್ಲಾದ ವ್ಯತ್ಯಾಸದ ಪರಿಣಾಮವಾಗಿ ಮಹಾರಾಷ್ಟ್ರದಿಂದ ಆವಕ ಕಡಿಮೆಯಾಗಿದೆ.

ಕಳೆದ ನಾಲ್ಕು ತಿಂಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿಯೂ ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ನೀರು ಪಾಲಾಗಿವೆ. ಹೀಗಾಗಿ, ಈರುಳ್ಳಿ ಬೆಲೆಯು ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹5,000 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹60 ರಿಂದ 70ಕ್ಕೆ ಮಾರಾಟವಾಗುತ್ತಿದೆ.

ಗದಗ, ಧಾರವಾಡ ಜಿಲ್ಲೆಯಲ್ಲಿ ಹೆಸರುಕಾಳು ಪ್ರಮುಖ ವಾಣಿಜ್ಯ ಬೆಳೆ. ಪ್ರತಿ ಬಾರಿಯೂ ಪ್ರತಿ ಕ್ವಿಂಟಲ್‌ಗೆ ₹5,500 ರಿಂದ ₹ 6,500ರವರೆಗೆ ಮಾರಾಟವಾಗುತ್ತಿತ್ತು. ಹೀಗಾಗಿ, ರೈತರು ಕೇಂದ್ರ ಸರ್ಕಾರದ ಬೆಂಬಲ ಬೆಲೆ (₹7,196) ಪ್ರಕಾರ ಖರೀದಿಸಬೇಕು ಎಂದು ಆಗ್ರಹಿಸುತ್ತಿದ್ದರು. ಆದರೆ, ಈ ಬಾರಿ ಪ‍್ರತಿ ಕ್ವಿಂಟಲ್‌ಗೆ
₹ 8,000 ದಂತೆ ಮಾರಾಟವಾಗುತ್ತಿದೆ. ಜನ ಸಾಮಾನ್ಯರಿಗೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹ 120ರಂತೆ ದೊರೆಯುತ್ತಿದೆ.

ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ತರಕಾರಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹುಬ್ಬಳ್ಳಿ ಮಾರುಕಟ್ಟೆಯಿಂದ ದಾವಣಗೆರೆಗೂ ತರಕಾರಿ ಕಳುಹಿಸಲಾಗುತ್ತದೆ. ಬೀನ್ಸ್‌, ಚವಳಿಕಾಯಿ, ಬದನೆಕಾಯಿ, ಕ್ಯಾರೆಟ್‌ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಕೆ.ಜಿ.ಗೆ ₹ 70ರಿಂದ ₹ 100ಕ್ಕೆ ತಲುಪಿದೆ. ತರಕಾರಿ ಬೆಲೆ ಹೆಚ್ಚಳದಿಂದ ಮನೆ ನಿಭಾಯಿಸುವುದೇ ಕಷ್ಟವಾಗಿದೆ ಎಂದು ಗೃಹಿಣಿಯರು ಹೇಳುತ್ತಿದ್ದಾರೆ.

‘ಮಳೆಯಿಂದಾಗಿ ಬಹುತೇಕ ಬೆಳೆಗಳು ಹಾಳಾಗಿವೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಸಾಗಣೆ ತೊಂದರೆಯೂ ಆಗಾಗ ಎದುರಾಗುತ್ತಿರುತ್ತದೆ’ ಎನ್ನುತ್ತಾರೆ ಹುಬ್ಬಳ್ಳಿ ಎಪಿಎಂಸಿ ವ್ಯಾಪಾರಿ ತಮ್ಮಣ್ಣ ಸಂಶಿ.

‘ಹಮಾಲಿ ಕೆಲಸ ಮಾಡುತ್ತಿದ್ದೇವೆ. ಮೊದಲಿನಂತೆ ಕೆಲಸ ಸಿಗುವುದಿಲ್ಲ. ಆದರೆ, ಬೆಲೆಗಳಲ್ಲಿ ಮಾತ್ರ ಹೆಚ್ಚಳವಾಗಿದೆ. ಸಾಲ ಮಾಡಿ ಜೀವನ ಸಾಗಿಸಬೇಕಾಗಿದೆ’ ಎನ್ನುತ್ತಾರೆ ಹಮಾಲಿ ಕಾರ್ಮಿಕ ಹುಸೇನಸಾಬ್‌ ನದಾಫ್.

ನಿರ್ವಹಣೆ: ವಿಜಯ್‌ ಜೋಷಿ, ಮಾಹಿತಿ: ಬಸವರಾಜ ಹವಾಲ್ದಾರ (ಹುಬ್ಬಳ್ಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT