ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ಈರುಳ್ಳಿ ಆವಕ: ರಾಜ್ಯದಲ್ಲಿ ದರ ಕುಸಿತ

Last Updated 6 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಕಲಬುರ್ಗಿ/ದಾವಣಗೆರೆ/ಬೆಂಗಳೂರು: ರಾಜ್ಯದಲ್ಲಿ ಉತ್ತಮ ಇಳುವರಿ ಹಾಗೂ ನೆರೆಯ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಆವಕವಾಗುತ್ತಿರುವ ಕಾರಣ ಹುಬ್ಬಳ್ಳಿ, ವಿಜಯಪುರ, ಕಲಬುರ್ಗಿ, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಸೋಮವಾರ ಭಾರಿ ಕುಸಿತ ಕಂಡಿದೆ. ಸಣ್ಣ ಈರುಳ್ಳಿ ಪ್ರತಿ ಕೆ.ಜಿ.ಗೆ ₹8 ಹಾಗೂ ದೊಡ್ಡ ಈರುಳ್ಳಿ ₹25ರವರೆಗೆ ಮಾರಾಟವಾಗುತ್ತಿದೆ. ರೈತರಿಗೆ ಪ್ರತಿ ಕೆ.ಜಿ.ಗೆ ₹5 ರಿಂದ 15ರವರೆಗೆ ದೊರೆಯುತ್ತಿದೆ. ಕಳೆದ 20 ದಿನಗಳಿಂದ ಬೆಲೆ ನಿರಂತರವಾಗಿ ಕುಸಿಯುತ್ತ ಸಾಗಿದೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ ₹15ರಂತೆ ಮಾರಾಟವಾಗುತ್ತಿದೆ. ಬಾಗಲಕೋಟೆ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಕೆ.ಜಿ.ಗೆ ₹10, ದೊಡ್ಡ ಈರುಳ್ಳಿ ₹25 ದರವಿದೆ.ವಿಜಯಪುರ ಜಿಲ್ಲೆಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹15 ರಿಂದ ₹20 ಇದೆ. ಆದರೆ, ರೈತರಿಗೆ ಈ ದರ ಲಭಿಸುತ್ತಿಲ್ಲ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹1,400 ರಿಂದ ₹800ಕ್ಕೆ ಕುಸಿದಿದೆ.

ರಾಯಚೂರು ಎಪಿಎಂಸಿಯಲ್ಲಿ ಎರಡು ದಿನಗಳಾದರೂ ಈರುಳ್ಳಿ ಖರೀದಿ ಆಗದಿರುವುದಕ್ಕೆ ಆಕ್ರೋಶಗೊಂಡ ರೈತರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿದರು. ಪ್ರತಿ ಕ್ವಿಂಟಲ್‌ ಈರುಳ್ಳಿ ದರ ₹ 1,000 ಕ್ಕೆ ತಲುಪಿತ್ತು. ಆದರೂ ಖರೀದಿದಾರರು ಬಂದಿಲ್ಲ.

ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ತಾಲ್ಲೂಕುಗಳಲ್ಲಿ 5,000 ಹೆಕ್ಟೇರ್‌ಗಳಲ್ಲಿ ಈರುಳ್ಳಿ ಬೆಳೆದು, ಉತ್ತಮ ಬೆಲೆ ಸಿಗುವ ವಿಶ್ವಾಸ ಹೊಂದಿದ್ದ ರೈತರಿಗೆ ತೀವ್ರ ನಿರಾಸೆಯಾಗಿದೆ. ‘ಬೆಂಗಳೂರಿನ ಮಾರುಕಟ್ಟೆಯಲ್ಲಿ 50ರಿಂದ 60 ಕೆ.ಜಿ. ತೂಕದ ಪ್ರತಿ ಈರುಳ್ಳಿ ಪ್ಯಾಕೆಟ್‌ಗೆ ₹600–₹700 ದರ ಸಿಗುತ್ತಿದ್ದು ದಿಕ್ಕು ತೋಚದಂತಾಗಿದೆ’ ಎಂದು ಡಿ.ಎಸ್‌. ಹಳ್ಳಿ ಗ್ರಾಮದ ಈರುಳ್ಳಿ ಬೆಳೆಗಾರ ಲಿಂಗಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನ ವಿವಿಧ ಎಪಿಎಂಸಿಗಳಿಗೆ ಸೋಮವಾರ ಸುಮಾರು 3 ಸಾವಿರ ಟನ್‌ಗೂ ಅಧಿಕ ಈರುಳ್ಳಿ ಪೂರೈಕೆಯಾಗಿದೆ. ಬೆಂಗಳೂರು ಸಣ್ಣ ಈರುಳ್ಳಿ ಕ್ವಿಂಟಲ್‌ಗೆ ₹300 ಮತ್ತು ಸ್ಥಳೀಯ ಈರುಳ್ಳಿ ಕ್ವಿಂಟಲ್‌ಗೆ ₹700 ಹಾಗೂ ಪೂನಾ ಈರುಳ್ಳಿ ಕ್ವಿಂಟಲ್‌ಗೆ ₹1,000 ದಂತೆ ಮಾರಾಟವಾಗುತ್ತಿದೆ.

ಕಲಬುರಗಿಯಲ್ಲಿ ಪ್ರತಿ ಕೆ.ಜಿ.ಗೆ ₹20,ಬೀದರ್‌ನಲ್ಲಿ ಕೆ.ಜಿ.ಗೆ ₹ 10ಕ್ಕೆ ಕುಸಿದಿದೆ. ಯಾದಗಿರಿಯಲ್ಲಿ ಕ್ವಿಂಟಲ್‌ ಈರುಳ್ಳಿ ಬೆಲೆ ₹600ರಿಂದ ₹800 ಇದೆ.

‘ಕರ್ನಾಟಕ ಅಲ್ಲದೇ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂದ್ರಪ್ರದೇಶ, ಗುಜರಾತ್‌ನಲ್ಲಿಯೂ ಈರುಳ್ಳಿ ಇಳುವರಿ ಉತ್ತಮವಾಗಿದ್ದು, ಆವಕ ಹೆಚ್ಚಳವಾಗಿದೆ. ಹೀಗಾಗಿ ಎಲ್ಲೆಡೆ ದರ ಕುಸಿತವಾಗಿದೆ’ ಎನ್ನುತ್ತಾರೆ ಹುಬ್ಬಳ್ಳಿ ಉಳ್ಳಾಗಡ್ಡಿ–ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ.

*
ವಿದೇಶಗಳಿಗೆ ಈರುಳ್ಳಿ ರಫ್ತು ನಿರ್ಬಂಧ ವಿಧಿಸಿರುವುದರಿಂದ ದರ ಕುಸಿತಕ್ಕೆ ಕಾರಣವಾಗಿದೆ. ಜೊತೆಗೆ ಈ ವರ್ಷ ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಂಪರ್‌ ಬೆಳೆ ಬಂದಿದೆ.
–ಸಿದ್ದರಾಮ ಬರಗಿಮಠ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ, ವಿಜಯಪುರ

*
ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲಿ ಈರುಳ್ಳಿ ಬೆಳೆ ಇಳುವರಿ ಹೆಚ್ಚಾಗಿರುವ ಕಾರಣ ಪೂರೈಕೆ ಅಧಿಕವಾಗಿದ್ದು, ಬೇಡಿಕೆ ಕುಸಿದಿದೆ.
–ಬಿ. ಶಿವಶಂಕರ, ಕಾರ್ಯದರ್ಶಿ, ಬೆಂಗಳೂರು ಆಲೂಗಡ್ಡೆ–ಈರುಳ್ಳಿ ವರ್ತಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT