ಸೋಮವಾರ, ನವೆಂಬರ್ 30, 2020
19 °C

ಸರ್ಕಾರಕ್ಕೆ ನೋಟಿಸ್‌ ಜಾರಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಕುದುರೆ ರೇಸ್‌ನಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ಗೆ ಅವಕಾಶ  ಕಲ್ಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡುವಂತೆ ಮಂಗಳವಾರ ಆದೇಶಿಸಿದೆ.

ನಗರದ ನಿವಾಸಿ ಸಿ. ಗೋಪಾಲ್‌ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ಕುದುರೆ ರೇಸ್‌ನಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ಗೆ ಅವಕಾಶ ಕಲ್ಪಿಸಲು ಯಾವ ಕಾಯ್ದೆ ಅಥವಾ ನಿಯಮಗಳಲ್ಲಿ ಅವಕಾಶ ಇದೆ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಬಿಟಿಸಿ ಕುದುರೆ ರೇಸ್‌ನಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ಗೆ ಅವಕಾಶ ಕಲ್ಪಿಸುವ ಪ್ರಸ್ತಾವಕ್ಕೆ ಅನುಮತಿ ನೀಡಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜೂನ್‌ 29ರಂದು ಹೊರಡಿಸಿರುವ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ‘ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ವರಮಾನ ಹರಿದು ಬರಬೇಕೆಂಬ ಉದ್ದೇಶದಿಂದ ಆನ್‌ಲೈನ್‌ ಬೆಟ್ಟಿಂಗ್‌ಗೆ ಅನುಮತಿ ನೀಡಲಾಗಿದೆ. ಅದರಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮಗಳನ್ನು ಪರಿಗಣಿಸದೆ ಆದೇಶ ಹೊರಡಿಸಲಾಗಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

ರಾಜ್ಯ ಸರ್ಕಾರ 2007ರಲ್ಲಿ ಆನ್‌ಲೈನ್‌ ಲಾಟರಿ ಸೇರಿದಂತೆ ಎಲ್ಲ ಬಗೆಯ ಲಾಟರಿಗಳನ್ನು ನಿಷೇಧಿಸಿದೆ. ಟರ್ಫ್‌ ಕ್ಲಬ್‌ಗಳ ಚಟುವಟಿಕೆ ಮತ್ತು ಬೆಟ್ಟಿಂಗ್‌ ಈವರೆಗೂ ಮಹಾನಗರಗಳಿಗೆ ಸೀಮಿತವಾಗಿತ್ತು. ಆನ್‌ಲೈನ್‌ ಬೆಟ್ಟಿಂಗ್‌ಗೆ ಅವಕಾಶ ಕಲ್ಪಿಸಿರುವುದರಿಂದ ಗ್ರಾಮೀಣ ಪ್ರದೇಶದ ಜನರೂ ಜೂಜಾಡಲು ಅವಕಾಶ ನೀಡಿದಂತಾಗಿದೆ. ಎಲ್ಲ ಬಗೆಯ ಜೂಜಾಟಗಳೂ ಸಮಾಜಕ್ಕೆ ಶಾಪ ಎಂದು ಭಾರತೀಯ ನ್ಯಾಯಾಂಗ ಆಯೋಗ ತನ್ನ ವರದಿಯಲ್ಲಿ ಹೇಳಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

‘ಬಿಟಿಸಿ ಬೆಟ್ಟಿಂಗ್‌ಗಾಗಿಯೇ ಮೊಬೈಲ್‌ ಅಪ್ಲಿಕೇಷನ್‌ ರೂಪಿಸಲಿದೆ. ಈವರೆಗೂ ಕುದುರೆ ರೇಸ್‌ ಬೆಟ್ಟಿಂಗ್‌ ಕುರಿತು ಮಾಹಿತಿ ಇಲ್ಲದವರು, ಅನುಭವ ಇಲ್ಲದವರೂ ಇನ್ನು ಮುಂದೆ ಅದರ ಹಿಂದೆ ಬೀಳುವ ಅಪಾಯವಿದೆ’ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

‘ಬಿಟಿಸಿಯಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ’ ಎಂದು ಸರ್ಕಾರದ ಪರ ವಕೀಲರು ಮೌಖಿಕವಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಆನ್‌ಲೈನ್‌ ಬೆಟ್ಟಿಂಗ್‌ಗೆ ಅವಕಾಶ ನೀಡಲು ಯಾವುದಾದರೂ ಕಾನೂನು, ನಿಯಮಗಳು ಇವೆಯೆ ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಸರ್ಕಾರದ ಪರ ವಕೀಲರಿಗೆ ಸೂಚಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.