ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಕೋಚಿಂಗ್: ‘ಗೆಟ್‌-ಸೆಟ್‌ ಗೋ’ ವ್ಯವಸ್ಥೆಗೆ ಸಿಎಂ ಚಾಲನೆ

Last Updated 22 ಮಾರ್ಚ್ 2021, 11:14 IST
ಅಕ್ಷರ ಗಾತ್ರ

ಬೆಂಗಳೂರು: ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಬಾರಿ ಕೂಡಾ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್‌ ನೀಡಲಾಗುವ ‘ಗೆಟ್‌-ಸೆಟ್‌ ಗೋ’ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು.

‘ಗೆಟ್‌-ಸೆಟ್‌ ಗೋ’ ವ್ಯವಸ್ಥೆಗೆ ವಿಧಾನಸೌಧದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಈವರೆಗೆ ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ತರಬೇತಿ ನೀಡಲಾಗುವುದು. ಇದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸೌಲಭ್ಯವನ್ನು ಅಭ್ಯರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ವರ್ಷಪೂರ್ತಿ ಗೆಟ್‌ ಸೆಟ್‌ ಗೋ: ಈ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಇಡೀ ವರ್ಷಪೂರ್ತಿ ‘ಗೆಟ್‌ ಸೆಟ್‌ ಗೋ‘ ಮೂಲಕ ಕೋಚಿಂಗ್‌ ವ್ಯವಸ್ಥೆ ಇರಲಿದೆ’ ಎಂದರು.

‘ಐಐಟಿಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿಸುವ ಗುರಿಯಿಂದ ಈ ಹೆಜ್ಜೆ ಇಡಲಾಗುತ್ತಿದೆ. ಜೆಇಇ, ನೀಟ್‌ ಪರೀಕ್ಷೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಹೆಚ್ಚು ರಾಂಕುಗಳನ್ನು ಪಡೆಯಲು ಇದು ಸಹಕಾರಿ. ಜತೆಗೆ, ಯಾವ ವಿದ್ಯಾರ್ಥಿಯೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕದಂತೆ ವರ್ಷವಿಡೀ ಅಧ್ಯಯನ ಮಾಡಬಹುದು’ ಎಂದರು.

ಕಲಿಕೆ ಸುಲಭ ಮತ್ತು ಸರಳ: ‘ಕಲಿಕೆ, ಪರಿಷ್ಕರಣೆ ಹಾಗೂ ಪರೀಕ್ಷೆ ಪರಿಕಲ್ಪನೆಯಲ್ಲಿ ‘ಗೆಟ್‌ ಸೆಟ್‌ ಗೋʼ ಕೋಚಿಂಗ್‌ ವ್ಯವಸ್ಥೆ ರೂಪಿಸಲಾಗಿದೆ. ಇದರಲ್ಲಿ ನೀಟ್‌, ಜೆಇಇ, ಸಿಇಟಿ ಪರೀಕ್ಷಾರ್ಥಿಗಳಿಗೆ ಅಗತ್ಯವಾದ ಅಧ್ಯಯನ ಸಾಮಗ್ರಿಯ ಜತೆಗೆ ವಿಡಿಯೊಗಳು, ಪಠ್ಯ ಸಾರಾಂಶ, ಸಂವಾದಾತ್ಮಕ ಪರೀಕ್ಷೆಗಳು ಇರುತ್ತವೆ. ಇಡೀ ದೇಶದಲ್ಲಿಯೇ ವಿದ್ಯಾರ್ಥಿಗಳಿಗಾಗಿ ಇಂಥ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕ’ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ʼಗೆಟ್‌ ಸೆಟ್‌ ಗೋʼ ಆನ್‌ಲೈನ್‌ ಫ್ಲಾಟ್‌ಫಾರಂಗೆ ಸುಲಭವಾಗಿ ಪ್ರವೇಶ ಪಡೆಯಬಹುದು. ಕರ್ನಾಟಕವೂ ಸೇರಿದಂತೆ ಸಿಇಟಿ ಬರೆಯಲಿರುವ ದೇಶದ ಯಾವುದೇ ವಿದ್ಯಾರ್ಥಿ ತನ್ನ ವಿವರಗಳನ್ನು ನಮೂದಿಸಿ ಆಕ್ಸಿಸ್‌ ಮಾಡಬಹುದು. ವೆಬ್‌ಸೈಟ್‌, ಯುಟ್ಯೂಬ್‌ ಅಥವಾ ಗೆಟ್‌ ಸೆಟ್‌ ಗೋ ಆಪ್‌ ಮೂಲಕ ಕೋಚಿಂಗ್‌ ಪಡೆಯಬಹುದು.

ಈ ಆಪ್‌ ಆಂಡ್ರಾಯಿಡ್‌, ಐಓಎಸ್‌ನಲ್ಲೂ ಲಭ್ಯ. ಇದಕ್ಕೆ ಗೂಗಲ್‌ ಆಪ್ ಸ್ಟೋರ್‌ನಲ್ಲಿ 4.3 ರೇಟಿಂಗ್‌ ಇದೆ‌. ವಿದ್ಯಾರ್ಥಿಗಳು getcetgo.in ವೆಬ್ ಪೋರ್ಟಲ್, ಗೂಗಲ್ ಪ್ಲೇಸ್ಟೋರ್ ಆಯಂಡ್ರಾಯ್ಡ್ ಆಪ್ GetCETGO ಮೂಲಕ ಮಾಹಿತಿ ಪಡೆಯಬಹುದು. ತಮ್ಮ ವಿವರಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

‘ಕಳೆದ ವರ್ಷ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ದೀಕ್ಷಾ ಸಂಸ್ಥೆ ಈ ವರ್ಷ ಕೂಡಾ ತರಬೇತಿ ನೀಡಲಿದ್ದು, ಕೋವಿಡ್‌ ಸಂಕಷ್ದದಿಂದ ವಿದ್ಯಾರ್ಥಿ ಮತ್ತು ಪೋಷಕರು ಇನ್ನೂ ಹೊರಬಾರದ ಕಾರಣ ಸರ್ಕಾರ ಈ ಕಾರ್ಯಕ್ರಮ ಮುಂದುವರಿಸಲು ನಿರ್ಧರಿಸಿದೆ. ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆಗೂ ತಯಾರಿ ನಡೆಸುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಅತ್ಯುತ್ತಮ ಕೋಚಿಂಗ್‌ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಕಾಲೇಜುಗಳು ಸ್ಥಗಿತ ಇಲ್ಲ: ‘ಕೋವಿಡ್‌ ಕಾರಣದಕ್ಕೆ ಸದ್ಯ ಕಾಲೇಜುಗಳನ್ನು ಸ್ಥಗಿತ ಮಾಡುವುದಿಲ್ಲ. ಈಗಾಗಲೇ ಒಂದು ವರ್ಷ ವ್ಯರ್ಥವಾಗಿರುವುದು ಸಾಕು’ ಎಂದು ಅಶ್ವತ್ಥನಾರಾಯಣ ಹೇಳಿದರು.

ಬಿಎಂಎಸ್‌ ಕಾಲೇಜ್‌ ಸೇರಿ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ ಎಂದು ಸುದ್ದಿಗಾರರು ಗಮನಸೆಳೆದಾಗ ಉತ್ತರಿಸಿದ ಅವರು, ‘ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಕ್ಲಾಸ್‌ ಕಡ್ಡಾಯವಲ್ಲ. ಆಫ್‌ಲೈನ್‌ ಅಥವಾ ಆನ್‌ಲೈನ್‌ನಲ್ಲೂ ಹಾಜರಾಗಬಹುದು. ಆದರೆ, ಹಾಜರಾತಿ ಕಡ್ಡಾಯ. ಆಯಾ ಶಿಕ್ಷಣ ಸಂಸ್ಥೆಗಳು ಇನ್ನೂ ಉತ್ತಮವಾಗಿ ಕೋವಿಡ್‌ ಪರಿಸ್ಥಿತಿನಿಭಾಯಿಸಬೇಕು. ಪರಿಣಾಮಕಾರಿಯಾಗಿ ಪರೀಕ್ಷೆ ಮಾಡಬೇಕು. ಸ್ಯಾನಿಟೈಸೇಷನ್‌, ಮಾಸ್ಕ್‌, ದೈಹಿಕ ಅಂತರ ಕಾಪಾಡಿಕೊಳ್ಳುವತ್ತ ಹೆಚ್ಚು ನಿಗಾ ಇಡಬೇಕು’ ಎಂದು ಸಲಹೆ ಮಾಡಿದರು.

‘ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ವ್ಯತ್ಯಯ ಆಗಬಾರದು. ಪರಿಸ್ಥಿತಿ ಎದುರಿಸಲು ಶಿಕ್ಷಣ ಸಂಸ್ಥೆಗಳು ಎಲ್ಲ ತಯಾರಿ ಮಾಡಿಕೊಳ್ಳಬೇಕು. ಈಗಾಗಲೇ ವ್ಯಾಕ್ಸಿನ್‌ ಬಂದಿದೆ. ಎರಡನೇ ಅಲೆ ಎದ್ದಿದೆ ಎನ್ನುವ ಕಾರಣಕ್ಕೆ ಆಫ್‌ಲೈನ್‌ ತರಗತಿಗಳನ್ನು ಸ್ಥಗಿತ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರನಾಯಕ್‌, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖ್ಯಸ್ಥ ವೆಂಕಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT