ಮಂಗಳವಾರ, ಜನವರಿ 18, 2022
22 °C

ಆನ್‌ಲೈನ್‌ ಜೂಜು ಸಾಮಾಜಿಕ ಪಿಡುಗು: ಅಡ್ವೊಕೇಟ್‌ ಜನರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆನ್‌ಲೈನ್‌ ಜೂಜುಗಳು ಸಾಮಾಜಿಕ ಪಿಡುಗುಗಳಾಗಿ ಪರಿಣಿಮಿಸಿದ್ದು, ನ್ಯಾಯಪೀಠವು ಇವುಗಳನ್ನು ಕೇವಲ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಥವಾ ಪ್ರಸರಣ ಕಾಯ್ದೆ ಅಡಿಯಲ್ಲಿ ನೋಡಬಾರದು’ ಎಂದು ಅಡ್ವೊಕೇಟ್‌ ಜನರಲ್ ಹೈಕೋರ್ಟ್‌ಗೆ ಮನವಿ ಮಾಡಿದರು.

ಹಣ ಕಳೆದುಕೊಳ್ಳಬಹುದಾದ ಆನ್‌ಲೈನ್ ಆಟಗಳನ್ನು ನಿಷೇಧಿಸಿ, ಕರ್ನಾಟಕ ಪೊಲೀಸ್ ಕಾಯ್ದೆ–1963ಕ್ಕೆ ತರಲಾಗಿರುವ ತಿದ್ದುಪಡಿ ಪ್ರಶ್ನಿಸಿದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಿಚಾರಣೆ ಮುಂದುವರಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಜೂಜು ನಿಷೇಧಕ್ಕೆ ಸಂಬಂಧಿಸಿದಂತೆ ಐಜಿಪಿ ಪ್ರವೀಣ್‌ ಸೂದ್‌ ವರದಿಯ ಶಿಫಾರಸುಗಳನ್ನು ಆಧರಿಸಿಯೇ ಸರ್ಕಾರ ಮುಂದಿನ ಹೆಜ್ಜೆ ಇರಿಸಿದೆ. ಇದೊಂದು ಹೊಸ ಮತ್ತು ಅಪರೂಪದ ಸಂದರ್ಭ. ಈ ಪ್ರಕರಣವನ್ನು ಕಾನೂನಾತ್ಮಕ ವಿಮರ್ಶೆಯ ಜೊತೆಜೊತೆಗೇ ಜೂಜನ್ನು ಪಿಡುಗು ಎಂದು ಭಾವಿಸಿ ಪರಿಶೀಲಿಸಬೇಕಾದ ಅವಶ್ಯಕತೆ ಇದೆ’ ಎಂದು ವಿವರಿಸಿದರು.

‘ಪ್ರವೀಣ್‌ ಸೂದ್‌ ವರದಿ ಆಧರಿಸಿ ತಿದ್ದುಪಡಿ ಮಸೂದೆಯನ್ನು ಶಾಸನಕರ್ತರು ಮುತ್ಸದ್ದಿತನದಿಂದಲೇ ರೂಪಿಸಿದ್ದಾರೆ. ಆದ್ದರಿಂದ ನ್ಯಾಯಪೀಠ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು. ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು