ಸೋಮವಾರ, ಸೆಪ್ಟೆಂಬರ್ 27, 2021
22 °C
ಶಿಕ್ಷಕರು ಕಲಿಸಿದ್ದೇನು? ವಿದ್ಯಾರ್ಥಿಗಳು ಕಲಿತಿದ್ದೇನು?: ನಡೆಯದ ಚರ್ಚೆ

ಆನ್‌ಲೈನ್ ಶಿಕ್ಷಣ: ಬೇಕಿದೆ ಮೌಲ್ಯಮಾಪನ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಮೈಸೂರು: ಕೋವಿಡ್‌–19 ಪರಿಣಾಮವಾಗಿ ಆನ್‌ಲೈನ್‌ ಬೋಧನೆ ಮತ್ತು ಕಲಿಕೆಯ ಎರಡನೇ ಶೈಕ್ಷಣಿಕ ವರ್ಷ ಆರಂಭವಾಗಿ ವೇಗ ಪಡೆದಿದೆ. ಆದರೆ, ಒಂದು ವರ್ಷ ಶಿಕ್ಷಕರು ಕಲಿಸಿದ್ದೇನು? ವಿದ್ಯಾರ್ಥಿಗಳು ಕಲಿತಿದ್ದೇನು?ಎಂಬುದರ ಸಮರ್ಪಕ ಮೌಲ್ಯಮಾಪನವೇ ರಾಜ್ಯದಲ್ಲಿ ನಡೆದಿಲ್ಲ. ಅಲ್ಲಲ್ಲಿಗುಂಪು ಚರ್ಚೆ, ವೆಬಿನಾರ್‌ಗಳಷ್ಟೇ ನಡೆದಿವೆ. ಮೌಲ್ಯಮಾಪನಕ್ಕಿಂತಲೂ ಶೈಕ್ಷಣಿಕ ವರ್ಷಗಳ ನಿರಂತರತೆಯನ್ನು ಕಾಯ್ದುಕೊಳ್ಳುವತ್ತಲೇ ಎಲ್ಲರ ಗಮನವಿದೆ.

ಶಾಲೆ–ಕಾಲೇಜು, ಬೋಧನೆ, ಕಲಿಕೆಯ ಇಡೀ ಸಾಂಪ್ರದಾಯಿಕ ವ್ಯವಸ್ಥೆಯು ಛಿದ್ರಗೊಂಡಿದೆ. ಈ ಸ್ಥಿತಿಯಲ್ಲಿ ಇಲಾಖೆಗಳು, ಶಿಕ್ಷಕರು, ಪೋಷಕರು ವಾರ್ಷಿಕ ನಿರಂತರತೆಗೇ ಒತ್ತು ಕೊಟ್ಟು, ಹಿಂದಿನ ವರ್ಷದ ಮುಂದುವರಿಕೆಯಾಗಿ ಮತ್ತೆ ವಿದ್ಯಾರ್ಥಿಗಳನ್ನು ಆನ್‌ಲೈನ್‌ ಕಲಿಕೆಯತ್ತ ತಳ್ಳಿದ್ದಾರೆ. ವಿದ್ಯಾರ್ಥಿಗಳು ಯಾವ ಆಕ್ಷೇಪಣೆಯನ್ನೂ ಎತ್ತುವ ಸ್ಥಿತಿಯಲ್ಲಿ ಇಲ್ಲ.

ಪೂರ್ವ ಪ್ರಾಥಮಿಕ ಹಂತದಿಂದ ವೃತ್ತಿ ಶಿಕ್ಷಣದ ಕೋರ್ಸ್‌ಗಳವರೆಗಿನಕಲಿಕೆಯವರೆಗೂ ಕೋವಿಡ್‌ ತನ್ನ ಪ್ರಭಾವ, ಪರಿಣಾಮ ಬೀರಿದೆ. ಯಾವ ಆನ್‌ಲೈನ್‌, ಮೊಬೈಲ್‌ಫೋನ್‌ ಜಗತ್ತಿನಿಂದ ಮಕ್ಕಳನ್ನು ದೂರವಿಡಬೇಕು ಎಂದು ಪೋಷಕರು, ಶಿಕ್ಷಕರು ಹೇಳುತ್ತಿದ್ದರೋ ಅದನ್ನೇ ಅವಲಂಬಿಸಿದ ಪರಿಸ್ಥಿತಿಯಲ್ಲಿ ನಡೆದಿರುವ ಬೋಧನೆ ಮತ್ತು ಕಲಿಕೆಯ ಫಲಿತಾಂಶವೇನು ಎಂಬ ಹುಡುಕಾಟವೂ ನಡೆದಿಲ್ಲ.

1ರಿಂದ 10ನೇ ತರಗತಿವರೆಗಿನ ಮಕ್ಕಳ ಕಲಿಕೆಯ ಸ್ವರೂಪ, ಗಳಿಸಿಕೊಂಡ ಕೌಶಲ ಅರಿಯಲು ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ನಡೆಸಿದ ಸಮೀಕ್ಷೆಯು ಕೂಡ ಬೋಧನೆ–ಕಲಿಕೆಯ ಮೌಲ್ಯಮಾಪನಕ್ಕಿಂತಲೂ, ಆ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಕುರಿತು ಅಂಕಿ ಅಂಶಗಳಿಗಷ್ಟೇ ಒತ್ತು ನೀಡಿದೆ.

ಇದನ್ನು ಹೊರತುಪಡಿಸಿದರೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಬೋಧನೆ ಮತ್ತು ಕಲಿಕೆಯ ಹಿನ್ನೋಟದ ಪ್ರಯತ್ನಗಳತ್ತ ಆಯಾ ಇಲಾಖೆಗಳು ಗಮನ ಹರಿಸಿಲ್ಲ.

 ಕಲಿತ ಮತ್ತು ಕಲಿಯದ ಪಾಠಗಳ ಗುಂಗಿನಲ್ಲಿ ವಿದ್ಯಾರ್ಥಿಗಳು ಮುಂದಿನ ತರಗತಿಗಳತ್ತ ನಡೆದಿದ್ದಾರೆ.

ಪರೀಕ್ಷೆಯೇ ಇಲ್ಲದೆ ಪಾಸ್: ಎಸ್‌ಎಸ್ಎಲ್‌ಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆಯನ್ನೇ ನಡೆಸದೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮೌಲ್ಯಮಾಪನದ ಮಾನದಂಡವಾದ ವಾರ್ಷಿಕ ಪರೀಕ್ಷೆಯ ಗೈರು ಹಾಜರಿಯಲ್ಲೇ ವಿದ್ಯಾರ್ಥಿಗಳು ಪದವಿ, ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ದಾಂಗುಡಿ ಇಟ್ಟಿದ್ದಾರೆ. ಅದು ಕಲಿಕೆಯ ಮುಂದುವರಿದ ಭಾಗ. ಆದರೆ, ಪದವಿ ಪೂರೈಸಿರುವ, ಎಂಜಿನಿಯರಿಂಗ್‌, ವೈದ್ಯಕೀಯದಂಥ ವೃತ್ತಿ ಶಿಕ್ಷಣ ಪಡೆಯುತ್ತಿರುವವರಿಗೆ ಕೋವಿಡ್‌ ಕಾಲಘಟ್ಟವು ‘ತಾವೇನು ಕಲಿತೆವು? ಮುಂದೆ ಈ ಕಲಿಕೆ ನೆರವಿಗೆ ಬರುತ್ತದೆಯೇ’ ಎಂಬ ಅನುಮಾನ, ಆತಂಕ ಮೂಡಿಸಿದೆ.

ಅದಕ್ಕೆ ಪೂರಕವಾಗಿಯೇ, ‘2021ರಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸುವಂತಿಲ್ಲ’ ಎಂದು ಸ್ಪಷ್ಟಪಡಿಸಿ ಬ್ಯಾಂಕೊಂದು ನೀಡಿದ್ದ ನೇರ ಸಂದರ್ಶನದ ಜಾಹೀರಾತು ವೈರಲ್‌ ಆಗಿದ್ದನ್ನು ಗಮನಿಸಬಹುದು. ಅಂದರೆ, ಕೋವಿಡ್‌ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದವರ ಕಲಿಕೆ, ತಿಳಿವಳಿಕೆ ಮತ್ತು ಕೆಲಸದ ಸಾಮರ್ಥ್ಯದ ಬಗ್ಗೆ ಉದ್ಯೋಗದಾತ ಸಂಸ್ಥೆಗಳಲ್ಲಿ ಈಗಾಗಲೇ ಅನುಮಾನ ಮೂಡಿದೆ. ಕೋವಿಡ್‌ ಮುಂದುವರಿದಿರುವ ಸಂದರ್ಭದಲ್ಲಿ ಇಂಥ ಅನುಮಾನಗಳಿಗೆ ತಕ್ಕ ಉತ್ತರ ನೀಡುವಂಥ ಬೋಧನೆ ಮತ್ತು ಕಲಿಕೆಯ ಹೊಸ ಮಾದರಿಗಳನ್ನು ರೂಪಿಸುವುದು ಹೇಗೆ ಎಂಬುದರ ಕಡೆಗೆ ಸರ್ಕಾರ ಮತ್ತು ಇಲಾಖೆಗಳು ತಕ್ಕ ಗಮನವನ್ನು ಹರಿಸಿಲ್ಲ.

ಬೋಧನೆ ಮತ್ತು ಕಲಿಕೆಯ ಮೌಲ್ಯಮಾಪನ ಕುರಿತು ಗಮನ ಸೆಳೆದರೆ, ವಿಶ್ವವಿದ್ಯಾಲಯಗಳ ಕುಲಪತಿಗಳಿಂದ ಶಾಲಾ ಶಿಕ್ಷಕರವರೆಗೆ ಎಲ್ಲರೂ ಆನ್‌ಲೈನ್‌ ಕಲಿಕೆಗೆ ಇರುವ ಮೂಲಸೌಕರ್ಯಗಳ ಕೊರತೆ ಮತ್ತು ಅಡಚಣೆಗಳು ಹಾಗೂ ಹೆಚ್ಚಿದ ಒತ್ತಡಗಳ ಬಗ್ಗೆಯೇ ಮಾತನಾಡಲಾರಂಭಿಸುತ್ತಾರೆ. ತರಗತಿಯೊಳಗಿನ ನೇರ ಬೋಧನೆ ಮತ್ತು ಕಲಿಕೆಯ ಕುರಿತು ಅಪಾರ ಪ್ರೀತಿಯನ್ನೂ ತೋರುತ್ತಾರೆ.

‘ಆನ್‌ಲೈನ್‌ ಕಲಿಕೆಯು ಸಮಯವನ್ನು ಉಳಿಸಿದೆ, ಪ್ರಯಾಣದ ಶ್ರಮ, ಖರ್ಚನ್ನು, ಇಂಧನದ ಬಳಕೆಯನ್ನೂ ಕಡಿಮೆ ಮಾಡಿದೆ ಎಂಬ ಪ್ರತಿಪಾದನೆಗಳು ವ್ಯಾವಹಾರಿಕ ದೃಷ್ಟಿಯಿಂದಷ್ಟೇ ಗಮನ ಸೆಳೆಯುತ್ತವೆ. ಆದರೆ, ಶಿಕ್ಷಕರ ವ್ಯಕ್ತಿತ್ವ, ಪ್ರಯೋಗಾಲಯದ ನೇರ ಪಾಠ, ಸಾಮೂಹಿಕವಾಗಿ ಕಲಿಯುವ ಪ್ರಕ್ರಿಯೆ ವಿದ್ಯಾರ್ಥಿಗಳನ್ನು ಪ್ರಭಾವಿಸುವ, ವ್ಯಕ್ತಿತ್ವ ರೂಪಿಸುವ ಸಾಧ್ಯತೆಗಳಿದ್ದರೆ ಮಾತ್ರ ಶಿಕ್ಷಣ ಸಾರ್ಥಕ’ ಎಂಬುದು ಚಿಂತಕ ಪ್ರೊ.ಮುಜಾಫರ್‌ ಅಸ್ಸಾದಿ ಅವರ ಪ್ರತಿಪಾದನೆ.

‘ಮಗಳು ಶಾಲೆಯ ಮುಖವನ್ನೇ ನೋಡದೇ ಎರಡನೇ ತರಗತಿ ಓದುತ್ತಿದ್ದಾಳೆ. ತನ್ನದೇ ವಯಸ್ಸಿನವರೊಂದಿಗೆ ಬೆರೆಯದೆ ಆಕೆಗೆ ಸರಿಯಾಗಿ ಮಾತನಾಡಲು ಬರುತ್ತಿಲ್ಲ. ಶಾಲೆಗೆ ಹೋಗುವ ಮೂಲಕ ಕಲಿಯಬೇಕಾದ ಸಾಮುದಾಯಿಕ ಜೀವನದ ಅನುಭವವೇ ಇಲ್ಲದ ಸ್ಥಿತಿಯಲ್ಲಿ ಮಕ್ಕಳು ಮನುಷ್ಯರಾಗುವುದು ಹೇಗೆ? ಅಂಥ ಪ್ರಯತ್ನಗಳ ಬಗ್ಗೆ ಚರ್ಚೆಗಳೇ ಇಲ್ಲದೆ ಶಿಕ್ಷಣ ವ್ಯವಸ್ಥೆ ಮುಂದುವರಿಯುತ್ತಿದೆ’ ಎನ್ನುವುದು ಮೈಸೂರಿನ ಗೃಹಿಣಿ ರಮ್ಯಾ ಅವರ ಅಭಿಪ್ರಾಯ.

ಆನ್‌ಲೈನ್‌ ಕಲಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಅಶ್ಲೀಲ ಚಿತ್ರಗಳನ್ನು ವಿನಿಮಯ ಮಾಡಿಕೊಂಡ ಸುದ್ದಿಯೊಂದು ಇತ್ತೀಚೆಗೆ ಪ್ರಕಟವಾಗಿತ್ತು. ಕಲಿಕೆಯ ಪ್ರಕ್ರಿಯೆಯು ಹದಿಹರೆಯದ ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಕರೆದೊಯ್ಯುತ್ತಿರುವ ಆತಂಕಕಾರಿ ಬೆಳವಣಿಗೆ ಇದು.

ಕೋವಿಡ್‌ ಕಾಲಘಟ್ಟದಲ್ಲಿ ದೊರಕಿದ ಅಪಾರ ಬಿಡುವಿನ ವೇಳೆಯನ್ನು ಸದ್ಬಳಕೆ ಮಾಡಿಕೊಂಡ ಬೆರಳೆಣಿಕೆಯಷ್ಟು ಮಂದಿಯೂ ಶಾಲೆ–ಕಾಲೇಜುಗಳಲ್ಲಿ ಇದ್ದಾರೆ ಎಂಬ ಅರಿವಿನಲ್ಲೇ ಬೋಧನೆ ಮತ್ತು ಕಲಿಕೆಯ ಮೌಲ್ಯಮಾಪನದ ಅಗತ್ಯವನ್ನೂ ಸರ್ಕಾರ ಮನಗಾಣಬೇಕಾಗಿದೆ. ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ, ಸಮನ್ವಯದಿಂದಷ್ಟೇ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಅದಕ್ಕೆ ಆನ್‌ಲೈನ್‌ ಕಾಲದ ಶಿಕ್ಷಣ ವ್ಯವಸ್ಥೆಯ ಮೌಲ್ಯಮಾಪನದೊಂದಿಗೇ ಮುನ್ನಡೆಯುವುದು ಅತ್ಯಗತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು