ಶುಕ್ರವಾರ, ಆಗಸ್ಟ್ 12, 2022
22 °C

‘ಕುಲಪತಿ ಹುದ್ದೆಗೆ ಕಳಂಕಿತರು ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶುದ್ಧ ಚಾರಿತ್ರ್ಯವಿರುವ ವ್ಯಕ್ತಿ ಮಾತ್ರ ಕುಲಪತಿಯಾಗಲು ಯೋಗ್ಯ. ಯಾವುದೇ ಅಪವಾದ ಹೊತ್ತುಕೊಂಡವರು ಕುಲಪತಿ ಸ್ಥಾನ ಅಲಂಕರಿಸಲು ಸಾಧ್ಯವಿಲ್ಲ. ನಾನು ಸಚಿವ ಸ್ಥಾನದಲ್ಲಿರುವವರೆಗೆ ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸಚಿವ ಕೆ.ಸುಧಾಕರ್ ತಿಳಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ರಜತ ಮಹೋತ್ಸವದ ಸಮಾರೋಪ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಲಪತಿ ಸ್ಥಾನಕ್ಕೆ ಉತ್ತಮ ಸಂಸ್ಕಾರ ಹಾಗೂ ಶೈಕ್ಷಣಿಕ ಅರ್ಹತೆ ಇರುವವರನ್ನು ಆಯ್ಕೆ ಮಾಡುವಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಇದೆ. ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಯೋಗ್ಯರನ್ನು ನೇಮಿಸುವ ಕುರಿತು ರಾಜ್ಯಪಾಲರ ಜೊತೆ ಚರ್ಚಿಸುತ್ತೇನೆ’ ಎಂದು ಹೇಳಿದರು.

ಆಯುರ್ವೇದದಲ್ಲಿ ಸಂಶೋಧನೆ ನಡೆಯಲಿ: ‘ವೈದ್ಯಕೀಯ ಕಾಲೇಜುಗಳನ್ನು ಸಂಶೋಧನಾ ಸಂಸ್ಥೆಗಳೆಂದೂ ಕರೆಯುತ್ತೇವೆ. ಆದರೆ, ಎಷ್ಟು ಪ್ರಮಾಣದ ಸಂಶೋಧನೆಗಳು ನಡೆಯುತ್ತಿವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಆಯುರ್ವೇದದಲ್ಲೂ ಹೆಚ್ಚು ಸಂಶೋಧನೆಗಳು ನಡೆಯಬೇಕು’ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದಾಮಿನಿ ಕೆ.ಗೌಡ, ಶಿವಾನಿ ಪೃಥ್ವಿ, ಹರ್ಷಿತಾ ಟಾಟರ್, ಪ್ರೀತಿ, ಅಂಜನಾಕ್ಷಿ, ತೇಜಸ್ವಿನಿ, ಬಿ.ಆರ್.ಅನುಷಾ, ಕಾರ್ತಿಕ್ ಅಡಿಗ ಸೇರಿದಂತೆ 10 ವಿದ್ಯಾರ್ಥಿಗಳಿಗೆ ನಗದು, ಪ್ರಮಾಣ ಪತ್ರ ಹಾಗೂ ಫಲಕ ಸಹಿತ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಶ್ವವಿದ್ಯಾಲಯ ಹೊರತಂದಿರುವ ಸಂಶೋಧನಾ ವರದಿಗಳು ಹಾಗೂ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಭಿವೃದ್ಧಿ ಪಡಿಸಿರುವ ‘ವಿದ್ಯಾರ್ಥಿಮಿತ್ರ’ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು