ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವಿ.ವಿ ಶಿಕ್ಷಣ: ನೇಮಕಾತಿ ತೊಂದರೆ ಪರಿಹಾರಕ್ಕೆ ಕ್ರಮ

ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ
Last Updated 21 ಫೆಬ್ರುವರಿ 2022, 15:57 IST
ಅಕ್ಷರ ಗಾತ್ರ

ಬೆಂಗಳೂರು: ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದವರಿಗೆ ನೇಮಕಾತಿಯಲ್ಲಿ ತೊಂದರೆ ಆಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಗೊಂದಲ ನಿವಾರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸೋಮವಾರ ಏರ್ಪಡಿಸಿದ್ದ ಅಖಿಲ ಭಾರತ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ‘ಆನ್‌ಲೈನ್ ಡಿಜಿಟಲ್ ಕಲಿಕೆ ಮತ್ತು ಆನ್‌ಲೈನ್ ಕಲಿಕೆ ಉತ್ತೇಜಿಸಲು ನಿಯಮಾವಳಿಗಳಲ್ಲಿ ಗುಣಾತ್ಮಕ ಸುಧಾರಣೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೆಎಂಎಫ್‌ ನೇಮಕಾತಿ ವೇಳೆ ಮುಕ್ತ ವಿಶ್ವ ವಿದ್ಯಾಲಯಗಳ ಅಭ್ಯರ್ಥಿಗಳಿಗೆ ಅವಕಾಶವಿಲ್ಲ ಎಂಬ ನಿಬಂಧನೆ ವಿಧಿಸಿದ್ದನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿದ್ಯಾಶಂಕರ್ ಅವರು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯುಜಿಸಿ) ಮಾನ್ಯತೆ ಇರುವ ಮುಕ್ತ ವಿಶ್ವವಿದ್ಯಾಲಯಗಳ ಪದವಿಗಳು ಕೂಡ ಇತರ ವಿಶ್ವವಿದ್ಯಾಲಯಗಳ‌ ಪದವಿಗಳಿಗೆ ಸಮ. ಎಲ್ಲ ರೀತಿಯ ಉದ್ಯೋಗಕ್ಕೂ ಅವರಿಗೆ ಅವಕಾಶ ಲಭ್ಯವಾಗಬೇಕು. ಯಾವುದೇ ತಾರತಮ್ಯ ಆಗದಂತೆ ನಿಗಾ ವಹಿಸಲಾಗುವುದು’ ಎಂದು ತಿಳಿಸಿದರು.

‘ಮುಕ್ತ ವಿಶ್ವವಿದ್ಯಾಲಯಗಳಿಗೆ ಆನ್‌ಲೈನ್ ಶಿಕ್ಷಣ ನೀಡಲು ಅನುಮತಿ ನೀಡುವ ವಿಷಯದಲ್ಲಿ ಯುಜಿಸಿ ನಿಯಾಮವಳಿಗಳ ಬದಲಾವಣೆ ಅಗತ್ಯವಿದೆ. ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಶಿಕ್ಷಣ ನೀಡುಲು ಸಾಧ್ಯವಾಗುವಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಹೊಸ ಕೋರ್ಸ್‌ಗಳನ್ನು ಪರಿಚಯಿಸಬೇಕು’ ಎಂದು ಅವರು ಸಲಹೆ ನೀಡಿದರು.

ಕಾಲಕಾಲಕ್ಕೆ ಪಠ್ಯಕ್ರಮವನ್ನು ಪರಿಷ್ಕೃತಗೊಳಿಸುವುದು ಮುಕ್ತ ವಿಶ್ವವಿದ್ಯಾಲಯಗಳಿಗೆ ಸವಾಲಿನ ಕೆಲಸ. ಮೂಲಸೌಲಭ್ಯಗಳಿಗಾಗಿ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಆದ್ದರಿಂದ ಅಭಿವೃದ್ಧಿ ಅನುದಾನವನ್ನು ಯುಜಿಸಿ ವರ್ಷಕ್ಕೊಮ್ಮೆ ಬಿಡುಗಡೆ ಮಾಡಬೇಕು ಎಂದು ಸಚಿವರು ಹೇಳಿದರು.

ಯುಜಿಸಿ ಜಂಟಿ ಕಾರ್ಯದರ್ಶಿ ಡಾ.ಅವಿಚಲ್ ಕಪೂರ್ ಮಾತನಾಡಿ, ‘ಪಠ್ಯಕ್ರಮದ ಶೇ 20ರಷ್ಟನ್ನು ಆನ್‌ಲೈನ್ ಮೂಲಕ ಕಲಿಸಲು ಅನುಮತಿ ಇತ್ತು. ಈಗ ಇದನ್ನು ಶೇ 40ಕ್ಕೆ ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT