ಸೋಮವಾರ, ಆಗಸ್ಟ್ 8, 2022
23 °C

ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲ ಮಾಡಿಲ್ಲ: ಸಚಿವ ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಉದ್ಧವ್‌ ಠಾಕ್ರೆ ಮತ್ತು ಏಕನಾಥ ಶಿಂಧೆ ನಡುವಿನ ಭಿನ್ನಾಭಿಪ್ರಾಯದಿಂದ ಶಿವಸೇನೆ ಇಬ್ಬಾಗವಾಗಿದೆ. ಇದರಲ್ಲಿ ಬಿಜೆಪಿ ಕೈವಾಡ ಇಲ್ಲ, ಬಿಜೆಪಿ ಆಪರೇಷನ್ ಕಮಲ ಮಾಡಿಲ್ಲ. 50 ಶಾಸಕರಿಗೆ ಆಪರೇಷನ್ ಕಮಲ ಮಾಡಲು ಸಾಧ್ಯವೇ? ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು. 

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಸೇರಿ ಸರ್ಕಾರ ಮಾಡಿದಾಗಲೇ ಗೊತ್ತಾಗಿತ್ತು, ಈ ಸರ್ಕಾರ ಬಹಳ‌ ದಿನ ನಡೆಯೋದಿಲ್ಲ‌ ಎಂಬುದು. ಮೂರು ಪಕ್ಷಗಳು ಸೇರಿ ಸರ್ಕಾರ ಮಾಡಿದ್ದೇ ದೊಡ್ಡ ತಪ್ಪಾಗಿತ್ತು. ಆ ಸರ್ಕಾರ ಇಲ್ಲಿಯ ವರೆಗೂ ನಡೆದಿದ್ದೇ ದೊಡ್ಡ ವಿಷಯ ಎಂದರು. 

ಮಹಾರಾಷ್ಟ್ರ ಸರ್ಕಾರದಲ್ಲಿ ಒಬ್ಬರ ಬಳಿ ಸ್ಟೇರಿಂಗ್, ಒಬ್ಬರ ಬಳಿ ಬ್ರೇಕ್, ಒಬ್ಬರ ಬಳಿ ಎಕ್ಸಲೇಟರ್ ಎಂಬಂತಾಗಿತ್ತು.  ಮೂರು ಪಕ್ಷಗಳು ಚುನಾವಣೆಗೆ ಹೋಗಿದ್ದ ವೇಳೆ ಅವರ ಸಿದ್ಧಾಂತಗಳು, ಪ್ರಣಾಳಿಕೆಗಳು ಬೇರೆ ಬೇರೆ ಆಗಿದ್ದವು. ಹಾಗಾಗಿ ಅವರೆಲ್ಲ ಸೇರಿ ಸರ್ಕಾರ ನಡೆಸಿದ್ದೇ ತಪ್ಪಾಗಿತ್ತು ಎಂದು ಹೇಳಿದರು.

ಬಿಜೆಪಿಯಿಂದ ಪ್ರತಿಯೊಬ್ಬರಿಗೆ ₹ 50 ಕೋಟಿ ನೀಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಆರೋಪ ಸತ್ಯಕ್ಕೆ ದೂರವಾಗಿದೆ. ಮಹಾರಾಷ್ಟ್ರದಲ್ಲಿ ಮುಂದೆ ಏನು ಮಾಡಬೇಕು ಎಂಬುದು ರಾಜ್ಯ ಹಾಗೂ ರಾಷ್ಟ್ರ ನಾಯಕರು ತೀರ್ಮಾನಿಸುತ್ತಾರೆ ಎಂದರು.

ತಪ್ಪೇನಿಲ್ಲ:

ಮುಂದಿನ ಮುಖ್ಯಮಂತ್ರಿ ನಾನೇ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ, ಅವರು ಕನಸು ಕಾಣೋದರಲ್ಲಿ ತಪ್ಪೇನಿಲ್ಲ. ರಾಜಕಾರಣ ಮಾಡುವವರು ಕನಸು ಕಾಣಲಿ, ದೇವರು ಅವರಿಗೆ ಒಳ್ಳೇದು ಮಾಡಲಿ ಎಂದರು.

ವೈಯಕ್ತಿಕ ವಿಚಾರ:

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಉಮೇಶ ಕತ್ತಿ ಅವರು ಒಂಬತ್ತು ಬಾರಿ ಚುನಾಯಿತರಾಗಿದ್ದಾರೆ. ಅವರಿಗೆ ಅನುಭವ ಇದೆ, ಅದು ಅವರ ವೈಯಕ್ತಿಕ ವಿಚಾರ. ಇದು ಪಕ್ಷದ್ದಾಗಲಿ ಅಥವಾ ಸರ್ಕಾರದ್ದಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು