ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಗ್ರ ಉನ್ನತ ಶಿಕ್ಷಣದ ಗುಣಮಟ್ಟ ವರ್ಧನೆಗೆ ಅವಕಾಶ’

‘ಕರ್ನಾಟಕ ಎಲ್‌ಎಂಎಸ್‌’ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ
Last Updated 30 ನವೆಂಬರ್ 2020, 10:05 IST
ಅಕ್ಷರ ಗಾತ್ರ

ಬೆಂಗಳೂರು: ‘ಡಿಜಿಟಲ್ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ನಾಟಕ ಎಲ್ಎಂಎಸ್ (ಕಲಿಕಾ ನಿರ್ವಹಣಾ ವ್ಯವಸ್ಥೆ) ಕಾರ್ಯಕ್ರಮದಿಂದ ಸಮಗ್ರ ಉನ್ನತ ಶಿಕ್ಷಣದ ಗುಣಮಟ್ಟ ಹಾಗೂ ಸಾಮಾನ್ಯ ಪ್ರವೇಶಾತಿ ಅನುಪಾತಗಳು ವರ್ಧಿಸಲಿವೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಇಲಾಖೆ ರೂಪಿಸಿರುವ ‘ಕರ್ನಾಟಕ ಎಲ್‌ಎಂಎಸ್’ ಕಾರ್ಯಕ್ರಮವನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಎಂಎಸ್‌ ವ್ಯವಸ್ಥೆಯಡಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆಗೆ ಅವಕಾಶ ದೊರೆಯುವುದಲ್ಲದೆ, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 87 ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳು ಮತ್ತು 14 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ ಹಾಗೂ ಶಿಕ್ಷಕರ ನಿರಂತರ ಮೌಲ್ಯಮಾಪನ ನಡೆಯುವ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ’ ಎಂದೂ ಅವರು ಅಭಿಪ್ರಾಯಪಟ್ಟರು.

‘ಈ ಕ್ರಮದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳ ಹಾಗೂ ಸುಮಾರು 24 ಸಾವಿರ ಅಧ್ಯಾಪಕರ ಬೋಧನೆ ಮತ್ತು ಕಲಿಕೆಗಳಲ್ಲಿ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಡಿಜಿಟಲ್ ಕಲಿಕೆ ಯೋಜನೆಯನ್ನು ₹ 34.14 ಕೋಟಿ ವೆಚ್ಚದಲ್ಲಿ ಎರಡು ರೀತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.

‘ಮೊದಲನೆಯದಾಗಿ, ಎಲ್ಎಂಎಸ್‌ ಆಧಾರಿತ ಡಿಜಿಟಲ್ ಕಲಿಕೆಯ ಅನುಷ್ಠಾನ. ಎರಡನೆಯದಾಗಿ 2,500 ಐಸಿಟಿ ಆಧಾರಿತ ತರಗತಿಗಳ ಸ್ಥಾಪನೆ ಮಾಡಲಾಗುತ್ತದೆ. ಅಪೇಕ್ಷಿತ ಸಮಯ ಹಾಗೂ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಕರ ಸಾಮಗ್ರಿ ದೊರೆಯಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಮಾಹಿತಿ ಆಧರಿಸಿ ವಿಶ್ಲೇಷಿಸುವುದು. ಬೋಧನೆ, ಕಲಿಕೆ, ನಿರಂತರ ಪರೀಕ್ಷೆ ಮತ್ತು ತಿದ್ದುಪಡಿ ಕ್ರಮಗಳ ಮೂಲಕ ಬೋಧನೆ-ಕಲಿಕೆಗಳು ಪರಿಷ್ಕರಿಸಲು ಅವಕಾಶವಿದ್ದು, ಶಿಕ್ಷಣಕ್ಕೆ ಪೂರ್ಣತೆ ದೊರೆಯಲಿದೆ’ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಕರ್ನಾಟಕ ಎಲ್‌ಎಂಎಸ್‌ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ವಿವರಿಸಿದರು.

‘ಈ ವ್ಯವಸ್ಥೆಯಡಿ ವಿದ್ಯಾರ್ಥಿಗಳು ಯಾವ ಸಮಯದಲ್ಲಾದರೂ, ಎಲ್ಲೇ ಇದ್ದರೂ, ಆನ್‌ಲೈಲ್‌ನಲ್ಲಿ, ಆಫ್‌ಲೈನ್‌ನಲ್ಲಿ ತಮ್ಮ ಕಲಿಕೆಯ ಪಠ್ಯಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಪ್ರತಿ ವಿದ್ಯಾರ್ಥಿಯ ಮೌಲ್ಯಮಾಪನದ ಮಾಹಿತಿ ಇದರಲ್ಲಿ ಲಭ್ಯವಿದೆ’ ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿಯ ಸದಸ್ಯ ಪ್ರೊ. ಎಂ.ಕೆ. ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT