ಗುರುವಾರ , ಆಗಸ್ಟ್ 5, 2021
21 °C
ಎಂ.ಬಿ. ಪಾಟೀಲ, ಜನಾರ್ದನ ಪೂಜಾರಿ ಭೇಟಿ: ಚೇತರಿಕೆಗೆ ಪ್ರಾರ್ಥನೆ

ಆಸ್ಕರ್‌ ಫರ್ನಾಂಡಿಸ್‌ಗೆ ಚಿಕಿತ್ಸೆ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್‌ ಫರ್ನಾಂಡಿಸ್‌ ಅವರಿಗೆ ಇಲ್ಲಿನ ಯೇನೆಪೋಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮಿದುಳಿನಲ್ಲಿ ರಕ್ತಸ್ರಾವವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

‘ಆಸ್ಕರ್‌ ಫರ್ನಾಂಡಿಸ್‌ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮಣಿಪಾಲ ಕೆಎಂಸಿ ವೈದ್ಯರು ಸೇರಿದಂತೆ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವ ಎಂ.ಬಿ.ಪಾಟೀಲ ಅವರು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಜೊತೆಗೆ ಚರ್ಚಿಸಿದರು.

‘ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಅಗತ್ಯ ಬಿದ್ದರೆ, ಟೆಲಿಮೆಡಿಸಿನ್ ಮೂಲಕ ಅತ್ಯುತ್ತಮ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ತಜ್ಞ ವೈದ್ಯರ ಜೊತೆಗೆ ಮಾತುಕತೆ ನಡೆಯುತ್ತಿದೆ’ ಎಂದು ಎಂ.ಬಿ.ಪಾಟೀಲ ತಿಳಿಸಿದರು.

‘ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ಅವರೂ ಆಸ್ಕರ್ ಕುಟುಂಬ ಸದಸ್ಯರ ಜೊತೆ ಚರ್ಚಿಸಿದ್ದಾರೆ. ಪೇಜಾವರ ಸ್ವಾಮೀಜಿ ಕೂಡ ಆರೋಗ್ಯ ವಿಚಾರಿಸಿದ್ದಾರೆ. ಆಸ್ಕರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನನ್ನ ತಂದೆ ಉಪಾಧ್ಯಕ್ಷರಾಗಿದ್ದರು. ನನ್ನ ಮೇಲೂ ಆಸ್ಕರ್ ಅವರಿಗೆ ವಿಶೇಷ ಪ್ರೀತಿ ಇದೆ’ ಎಂದು ಹೇಳಿದರು.

ಅನಾರೋಗ್ಯದ ಮಧ್ಯೆಯೂ ಆಸ್ಕರ್‌ ಅವರ ಆರೋಗ್ಯ ವಿಚಾರಿಸಲು ಬಂದಿದ್ದ ಜನಾರ್ದನ ಪೂಜಾರಿ ಮಾತನಾಡಿ, ‘ಆಸ್ಕರ್ ಆರೋಗ್ಯವಾಗಿ ಬರುತ್ತಾರೆ. ದೇವರು ಅವರಿಗೆ ಸಹಾಯ ಮಾಡುತ್ತಾರೆ’ ಎಂದು ಗದದ್ಗಿತರಾದರು.

ಆಸ್ಕರ್‌ ಫರ್ನಾಂಡಿಸ್‌ ಅವರ ಆರೋಗ್ಯ ಚೇತರಿಕೆಗಾಗಿ ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ಆಶಿತ್ ಪಿರೇರಾ ನೇತೃತ್ವದಲ್ಲಿ ಚರ್ಚ್, ದರ್ಗಾ ಹಾಗೂ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು