ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Update Karnataka: 5 ದಿನಗಳಲ್ಲಿ 4,231 ಪ್ರಕರಣ

Last Updated 14 ಮಾರ್ಚ್ 2021, 21:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದ್ದು, ಭಾನುವಾರ 934 ಪ್ರಕರಣಗಳು ವರದಿಯಾಗಿವೆ. ಎರಡು ತಿಂಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ.

ಎರಡು ವಾರಗಳಿಂದ ಪ್ರತಿನಿತ್ಯ 500ಕ್ಕೂ ಅಧಿಕ ಪ್ರಕರಣಗಳು ದೃಢಪಡುತ್ತಿದ್ದು, 48 ಗಂಟೆಗಳ ಅವಧಿಯಲ್ಲಿ 1,855 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಐದು ದಿನಗಳ ಅವಧಿಯಲ್ಲಿ 4,231 ಪ್ರಕರಣಗಳು ವರದಿಯಾಗಿವೆ. ಈ ತಿಂಗಳು 9,021 ಮಂದಿ ಕೊರೊನಾ ಸೋಂಕಿತರಾಗಿರುವುದು ಪರೀಕ್ಷಾ ವರದಿಯಿಂದ ಖಚಿತಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 644 ಪ್ರಕರಣಗಳು ದೃಢಪಟ್ಟಿವೆ.

ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಮೂವರು ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,390ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 609 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 9.39 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, 8,364 ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 125 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಒಂದು ದಿನದ ಅವಧಿಯಲ್ಲಿ 73 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈವರೆಗೆ 1.97 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

ಬೆಂಗಳೂರಿನಲ್ಲಿ ಹೆಚ್ಚಳ: ಬ್ರಿಟನ್‌ನಿಂದ ಇಲ್ಲಿಗೆ ಭಾನುವಾರ 257 ಮಂದಿ ಬಂದಿದ್ದಾರೆ. ಕಳೆದ ನ.25ರ ಬಳಿಕ ಬಂದವರ ಸಂಖ್ಯೆ 14,383ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, 628 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈವರೆಗೆ ಸೋಂಕಿತರ ಸಂಖ್ಯೆ 4.11 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 31 ಪ್ರಕರಣಗಳು ದೃಢಪಟ್ಟಿವೆ. ಅಲ್ಲಿ ಕೋವಿಡ್ ಪೀಡಿತ
ರಾದವರ ಒಟ್ಟು ಸಂಖ್ಯೆ 54,445ಕ್ಕೆ ತಲುಪಿದೆ. ಕಲಬುರ್ಗಿಯಲ್ಲಿ 43, ದಕ್ಷಿಣ ಕನ್ನಡದಲ್ಲಿ 40, ಬೆಳಗಾವಿಯಲ್ಲಿ 27, ಧಾರವಾಡದಲ್ಲಿ 20 ಪ್ರಕರಣಗಳು ಹೊಸದಾಗಿ ವರದಿ‌ಯಾಗಿವೆ.

ಒಂದೇ ಕುಟುಂಬದ 16 ಮಂದಿಗೆ ಕೋವಿಡ್ ದೃಢ

ರಾಯಬಾಗ (ಬೆಳಗಾವಿ): ತಾಲ್ಲೂಕಿನ ಬಾವನಸೌಂದತ್ತಿಯಲ್ಲಿ ಒಂದೇ ಕುಟುಂಬದ 16 ಮಂದಿಗೆ ಕೋವಿಡ್–19 ಶನಿವಾರ ದೃಢಪಟ್ಟಿದೆ.

‘ಆ ಕುಟುಂಬದ ವೃದ್ಧರೊಬ್ಬರು ಕೋವಿಡ್–19 ಕಾರಣದಿಂದ ಈಚೆಗೆ ನಿಧನರಾಗಿದ್ದರು. ಹೀಗಾಗಿ, ಕುಟುಂಬದವರನ್ನು ಆರೋಗ್ಯ ಇಲಾಖೆಯವರು ತಪಾಸಣೆಗೆ ಒಳಪಡಿಸಿದ್ದರು. ಅವರಲ್ಲಿ 16 ಮಂದಿಗೆ ಸೋಂಕು ದೃಢಪಟ್ಟಿದೆ. ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಇತರ ಒಟ್ಟು 415 ಮಂದಿಯನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ವರದಿ ಇನ್ನೂ ಬಂದಿಲ್ಲ’ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್. ರಂಗಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ಕುಟುಂಬದಲ್ಲಿ ಒಟ್ಟು 45 ಮಂದಿ ಇದ್ದಾರೆ. ಉಳಿದ ಎಲ್ಲರಿಂದಲೂ ಗಂಟಲಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯನ್ನು ನಿರೀಕ್ಷಿಸಲಾಗಿದೆ. ಆ ಮನೆಯ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT