ಶುಕ್ರವಾರ, ಜೂನ್ 25, 2021
21 °C
ಸಿಲಿಂಡರ್‌ ಸರಬರಾಜಿಗೆ ಸಂಸದರಿಂದ ಹಣ ಪಡೆದಿಲ್ಲ; ಉಪ ವಿಭಾಗಾಧಿಕಾರಿ ಹೇಳಿಕೆ

ಸುಮಲತಾ ಸ್ವಂತ ಹಣದಲ್ಲಿ ಆಮ್ಲಜನಕ: ಕೋವಿಡ್‌ ಕುರಿತ ಸಭೆಯಲ್ಲಿ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಸಂಸದೆ ಸುಮಲತಾ ಅವರು ಸ್ವಂತ ಹಣದಲ್ಲಿ ಜಿಲ್ಲೆಗೆ ನಿತ್ಯ 2 ಕಿಲೋ ಲೀಟರ್‌ ಆಮ್ಲಜನಕ ಪೂರೈಸುತ್ತಿದ್ದಾರೆ ಎಂಬ ವಿಷಯ ಗುರುವಾರ ಜಿ.ಪಂ ಸಭಾಂಗಣದಲ್ಲಿ ನಡೆದ ಕೋವಿಡ್‌ ಕುರಿತ ಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು.

ವಿಷಯ ಪ್ರಸ್ತಾಪಿಸಿದ ಶ್ರೀರಂಗಪಟ್ಟಣ ಶಾಸಕ ಶ್ರೀಕಂಠಯ್ಯ, ನಮಗೆ ಯಾರಿಗೂ ಆಮ್ಲಜನಕ ಸಿಲಿಂಡರ್‌ ದೊರೆಯುತ್ತಿಲ್ಲ. ಸಂಸದರು ತಮ್ಮ ಸ್ವಂತ ಹಣದಲ್ಲಿ ಜಿಲ್ಲೆಗೆ ಸಿಲಿಂಡರ್‌ ಒದಗಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ವರದಿ ಬರುತ್ತಿದೆ, ಸಂಸದರಿಗೆ ಮಾತ್ರ ಹೇಗೆ ಜಂಬೋ ಸಿಲಿಂಡರ್‌ ದೊರೆಯುತ್ತಿವೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಿದ ಪಾಂಡವಪುರ ಉಪ ವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಸರ್ಕಾರಿ ಕೋಟದಿಂದ ಆಮ್ಲಜನಕ ಜಂಬೋ ಸಿಲಿಂಡರ್‌ ಸರಬರಾಜಾಗಿದ್ದು ಸಂಸದರಿಂದ ಹಣ ಪಡೆದಿಲ್ಲ ಎಂದು ಉತ್ತರಿಸಿದರು.

ಇದಕ್ಕೆ ಜೆಡಿಎಸ್‌ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ‘2 ತಿಂಗಳ ನಂತರ ಜಿಲ್ಲೆಗೆ ಬಂದಿರುವ ಸಂಸದರು ಜನರ ದಿಕ್ಕು ತಪ್ಪಿಸುತ್ತಿದ್ಧಾರೆ. ಸ್ವಂತ ಹಣದಲ್ಲಿ ಸಿಲಿಂಡರ್‌ ನೀಡಿರುವುದಾಗಿ ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾರೆ. ಸಂಕಷ್ಟ ಸಮಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸಭೆಯಿಂದ ಹೊರ ನಡೆದ ಸಂಸದೆ: ಸಭೆಯಲ್ಲಿ ವಾಗ್ವಾಗ ಹೆಚ್ಚಾಗುತ್ತಿದ್ದಂತೆ ಸಂಸದೆ ಸುಮತಲಾ ಸಭೆಯಿಂದ ಹೊರನಡೆದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೋವಿಡ್‌ ಸಂದರ್ಭದಲ್ಲಿ ಶಾಸಕರು ರಾಜಕಾರಣ ಮಾಡುತ್ತಿರುವುದಕ್ಕೆ ನನ್ನ ರಕ್ತ ಕುದಿಯುತ್ತಿದೆ. ಇದಕ್ಕಾಗಿಯೇ ಕೆಡಿಪಿ ಸಭೆಗಳಿಗೆ ಬರಲು ನನಗೆ ಇಷ್ಟವಾಗುವುದಿಲ್ಲ. ನಾನು ಆಮ್ಲಜನಕ ತರುತ್ತಿರುವುದಕ್ಕೆ ಜನರು ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಲೂ ಬಿಡದೆ ದಬ್ಬಾಳಿಕೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅವರ ಪಕ್ಷದಲ್ಲಿ ಎಂ.ಪಿಗಳಿದ್ದಾರೆ, ಮಾಜಿ ಪ್ರಧಾನಿ ಇದ್ದಾರೆ. ಪ್ರಧಾನಿ ಮೋದಿ ಅವರಿಗೆ ಕರೆ ಮಾಡುವಷ್ಟು ಪ್ರಭಾವಿಗಳು ಅವರು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಆಮ್ಲಜನಕ ತರಿಸಿಕೊಳ್ಳಬಹುದು. ಕೋವಿಡ್‌ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಿರುವುದಕ್ಕೆ ನನಗೆ ಬೇಸರವಾಗಿದೆ’ ಎಂದರು.

*****

ನಿತ್ಯ 2 ಕೆ.ಎಲ್‌ ಆಮ್ಲಜನಕ ಪೂರೈಕೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಪಾವತಿಸುವುದಾಗಿ ಸಂಸದರು ತಿಳಿಸಿದ್ದಾರೆ

– ಎಸ್‌.ಅಶ್ವಥಿ, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು