ಶುಕ್ರವಾರ, ಜೂನ್ 25, 2021
22 °C
ಖರೀದಿ ಸ್ಥಗಿತ

ಭತ್ತ ಬೆಳೆಗಾರರು ಅತಂತ್ರ: ಕಡಿಮೆ ಬೆಲೆಗೆ ಕೇಳುತ್ತಿರುವ ದಲ್ಲಾಳಿಗಳು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರವು ಭತ್ತ ಖರೀದಿ ಕೇಂದ್ರಗಳನ್ನು ಹಠಾತ್‌ ಬಂದ್‌ ಮಾಡಿರುವುದರಿಂದ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಭತ್ತ ಬೆಳೆಗಾರರು ಅತಂತ್ರರಾಗಿದ್ದಾರೆ.

ರಾಜ್ಯದಲ್ಲಿ ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳದ ಪಾಲು ಹೆಚ್ಚಿದೆ. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 1.34 ಲಕ್ಷ ಎಕರೆ, ರಾಯಚೂರಿನಲ್ಲಿ 2.30 ಲಕ್ಷ ಎಕರೆ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 82 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಎಕರೆಗೆ ಸರಾಸರಿ 25 ಕ್ವಿಂಟಾಲ್‌ ಭತ್ತ ಲೆಕ್ಕಕ್ಕೆ ತೆಗೆದುಕೊಂಡರೂ ಅದರ ಒಟ್ಟು ಮೌಲ್ಯ ₹ 2,000 ಕೋಟಿಗೂ ಅಧಿಕವಾಗುತ್ತದೆ.

ಮೇ 5ರಿಂದ ಸರ್ಕಾರಿ ಕೇಂದ್ರಗಳಲ್ಲಿ ಏಕಾಏಕಿ ಖರೀದಿ ಬಂದ್‌ ಮಾಡಿರುವುದರಿಂದ ರೈತರು ಭತ್ತ ಮಾರಾಟ ಮಾಡಲು
ಆಗದೆ ಕಂಗಾಲಾಗಿದ್ದಾರೆ. ದಲ್ಲಾಳಿಗಳು ಅತಿ ಕಡಿಮೆ ಬೆಲೆಗೆ ಭತ್ತ ಕೇಳುತ್ತಿದ್ದಾರೆ.

‘ದುಂಡು ರೋಗದಿಂದ ಮುಂಗಾರಿನಲ್ಲಿ ಶೇ 40ರಷ್ಟು ಬೆಳೆ ಹಾಳಾಗಿತ್ತು. ಈ ಸಲ ಸಕಾಲಕ್ಕೆ ಸಮರ್ಪಕವಾಗಿ ನೀರು ಹರಿಸಲಿಲ್ಲ. ಶೇ 70ರಷ್ಟು ಬೆಳೆ ಕೈಸೇರಿದೆ. ಈ ನಡುವೆ ಖರೀದಿ ಕೇಂದ್ರಗಳನ್ನು ಬಂದ್‌ ಮಾಡಿರುವುದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ತಿಳಿಸಿದ್ದಾರೆ.

‘ಪ್ರತಿ ಕ್ವಿಂಟಾಲ್‌ ಭತ್ತಕ್ಕೆ ಸರ್ಕಾರ ₹ 1,886 ಬೆಂಬಲ ಬೆಲೆ ಘೋಷಿಸಿದೆ. ಖರೀದಿ ಕೇಂದ್ರ ತೆರೆಯದ ಕಾರಣ ದಲ್ಲಾಳಿಗಳು ₹1,400ಕ್ಕಿಂತ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಮಿಲ್‌ನವರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಮೊದಲೇ ಸಂಕಷ್ಟದಲ್ಲಿರುವ ರೈತರನ್ನು ಸರ್ಕಾರವೇ ಸಂಕಷ್ಟಕ್ಕೆ ದೂಡಿದಂತಾಗಿದೆ. ಕೂಡಲೇ ಖರೀದಿ ಕೇಂದ್ರ ಆರಂಭಿಸಿ, ಸರ್ಕಾರ ರೈತರ ನೆರವಿಗೆ ಬರಬೇಕು’ ಎಂದು ಹಕ್ಕೊತ್ತಾಯ ಮಾಡಿದ್ದಾರೆ.

‘ಕೋವಿಡ್‌ ಸಂಕಷ್ಟದ ಕಾಲದಲ್ಲಿ ತೆಲಂಗಾಣ ಸರ್ಕಾರವು ರೈತರ ಎಲ್ಲ ರೀತಿಯ ಉತ್ಪನ್ನಗಳ ಖರೀದಿಗೆ
₹ 32,000 ಕೋಟಿ ತೆಗೆದಿರಿಸಿ ಅವರ ನೆರವಿಗೆ ಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದ್ದಾರೆ.

*
ಸರ್ಕಾರದ ಬಳಿ ದುಡ್ಡಿಲ್ಲ. ಕೋವಿಡ್‌ ಕಾರಣದಿಂದ ಸದ್ಯ ಭತ್ತ ಖರೀದಿ ಕೇಂದ್ರ ಬಂದ್‌ ಮಾಡಲಾಗಿದೆ. ಪರಿಸ್ಥಿತಿ ಸಹಜವಾದ ನಂತರ ತೆರೆಯಲಾಗುವುದು.
–ಉಮೇಶ ಕತ್ತಿ, ಸಚಿವ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು