ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಲ್ಲಿ ಹುಟ್ಟಿದೆ, ಅಲ್ಲಿ ಬದುಕಿದೆ...’ ಸಾವಿನಲ್ಲೂ ಸಾರ್ಥಕತೆ ಕಂಡ ಸಂಚಾರಿ ವಿಜಯ್

ನಟ ಸಂಚಾರಿ ವಿಜಯ್‌ಗೆ ಚಿತ್ರರಂಗದಿಂದ ಕಂಬನಿಯ ವಿದಾಯ; ಹುಟ್ಟೂರು ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ
Last Updated 15 ಜೂನ್ 2021, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ದೂರ ತೀರದ ಕೂಗು ನಿನಗೀಗ ಕೇಳಿದೆ ಹೋಗು, ಇಲ್ಲಿ ಹುಟ್ಟಿದೆ ಅಲ್ಲಿ ಬದುಕಿದೆ...’ ತಾನೇ ನಟಿಸಿದ ‘ನಾನು ಅವನಲ್ಲ, ಅವಳು’ ಚಿತ್ರದ ಹಾಡಿಗೆ ಓಗೊಟ್ಟಂತೆ ಮೌನವಾಗಿಯೇ ನಡೆದಿದ್ದಾರೆ ನಟ ಸಂಚಾರಿ ವಿಜಯ್‌.

ಸಾವಿನ ಆಘಾತವನ್ನು ವಿಜಯ್‌ ಕುಟುಂಬಸ್ಥರಾಗಲಿ, ಸ್ನೇಹಿತರು, ರಂಗಭೂಮಿ ಹಾಗೂ ಚಿತ್ರರಂಗದ ಸಹಕಲಾವಿದರು ಕೊನೆಯಲ್ಲಿ ಕಳೆದ ಕೆಲ ವಾರಗಳಿಂದ ಜೊತೆಯಲ್ಲಿಯೇ ಇದ್ದ ‘ಉಸಿರು’ ತಂಡದ ಸದಸ್ಯರಾಗಲಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇದಕ್ಕೆ ಸಾಕ್ಷ್ಯ ಎಂಬಂತಿತ್ತು ರವೀಂದ್ರ ಕಲಾಕ್ಷೇತ್ರದ ಆವರಣ.

ಸಾವಿನಲ್ಲೂ ಸಾರ್ಥಕತೆ ಮೆರೆದು, ಇತರರಲ್ಲಿ ತಾನು ಜೀವಿಸಿದ ಅವರ ಕಾರ್ಯ ಜನಸಮೂಹವನ್ನೇ ರವೀಂದ್ರ ಕಲಾಕ್ಷೇತ್ರದತ್ತ ಸೆಳೆದಿತ್ತು. ಪಾರ್ಥಿವ ಶರೀರವನ್ನು ಕಲಾಕ್ಷೇತ್ರಕ್ಕೆ ತರುತ್ತಿದ್ದಂತೆ ಸ್ನೇಹಿತರು ಹಾಗೂ ಕುಟುಂಬಸ್ಥರ ಕಣ್ಣೀರಿನ ಕಟ್ಟೆ ಒಡೆದಿತ್ತು. ಅಣ್ಣನನ್ನು ಕಳೆದುಕೊಂಡ ಸಿದ್ಧೇಶ್‌ ಅವರ ಸಂಕಟ, ಶಿಷ್ಯನನ್ನು ಕಳೆದುಕೊಂಡ ಮಂಗಳ ಅವರ ನೋವು ಮುಖಗವಸಿನ ಒಳಗೆ ಮುಖಭಾವನೆ ಮರೆಯಾಗಿದ್ದರೂ, ಕಣ್ಣಿನಲ್ಲೇ ಸ್ಪಷ್ಟವಾಗುತ್ತಿತ್ತು.

ಅವರು ಇವತ್ತೇ ನಗುತ್ತಿಲ್ಲ: ‘ನಾನು ಅವನಲ್ಲ, ಅವಳು’ ಚಿತ್ರದ ಸಹನಟ ಸುಂದರ್‌ ವೀಣಾ, ‘ವಿಜಯ್‌ ಜೊತೆ ನಟಿಸಿದ್ದು ದೊಡ್ಡ ಅನುಭವ. ಇವತ್ತೇ ಮೊದಲು ಅವನು ನಗದಿರುವುದನ್ನು ನೋಡುತ್ತಿದ್ದೇನೆ’ ಎಂದು ಭಾವುಕರಾದರು.

‘ನಾನು ಅವನಲ್ಲ, ಅವಳು’ ಚಿತ್ರದ ಪಾತ್ರಕ್ಕೆ ಜೀವ ತುಂಬಲು ನಮ್ಮನ್ನು ಸಂಪರ್ಕಿಸಿ ಹಲವು ಬಾರಿ ಚರ್ಚೆ ನಡೆಸಿದ್ದರು’ ಎಂದರುಸಾಮಾಜಿಕ ಹೋರಾಟಗಾರ್ತಿ ಅಕೈ ಪದ್ಮಶಾಲಿ.

ಕಲಿಯುವ ಆಸಕ್ತಿ ಇತ್ತು: ವಿಜಯ್‌ ಜೊತೆಗಿನ ಒಡನಾಟ ನೆನಪಿಸಿಕೊಂಡ ನಟ ಶಿವರಾಜ್‌ಕುಮಾರ್‌, ‘ಇಷ್ಟು ಚಿಕ್ಕ ವಯಸ್ಸಿನಲ್ಲಿ ದೂರ ಹೋಗುವುದು ನಮಗಿಂತ ಅವರ ಕುಟುಂಬಕ್ಕೇ ಹೆಚ್ಚಿನ ನೋವು ನೀಡಿರುತ್ತದೆ. ‘ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದ ಚಿತ್ರೀಕರಣದಲ್ಲಿ ಅವರನ್ನು ಹತ್ತಿರದಿಂದ ನೋಡಿದ್ದೆ. ವಿಭಿನ್ನವಾಗಿ ನಟಿಸುವ ಆಸೆ, ಕಲಿಯುವ ಆಸಕ್ತಿಯನ್ನು ಗಮನಿಸಿದ್ದೆ. ಅಂಗಾಂಗ ದಾನದಿಂದ ಅವರ ಒಟ್ಟು ವ್ಯಕ್ತಿತ್ವವೂ ತಿಳಿಯುತ್ತದೆ’ ಎಂದರು.

ಕಿಲ್ಲಿಂಗ್‌ ವೀರಪ್ಪನ್‌ ಚಿತ್ರದಲ್ಲಿ ನಟಿಸಿದ ನಟಿ ಪಾರುಲ್‌ ಯಾದವ್‌, ‘ಅವರು ತುಂಬಾ ಸರಳ ವ್ಯಕ್ತಿಯಾಗಿದ್ದರು. ತೋರಿಕೆ ಇರಲಿಲ್ಲ’ ಎಂದು ಕಣ್ಣೀರಿಟ್ಟರು.

ಸ್ನೇಹಿತನ ಕಳೆದುಕೊಂಡ ನಟ ನೀನಾಸಂ ಸತೀಶ್‌ ಅತೀವ ದುಃಖದಲ್ಲಿದ್ದರು. ‘ಇಂತಹ ಸ್ಥಿತಿ ಬರುತ್ತದೆ ಎಂದುಕೊಂಡಿರಲಿಲ್ಲ. ಹೋಟೆಲ್‌ನಲ್ಲಿ ಕೆಲಸ ಮಾಡಿ ತಮ್ಮಂದಿರನ್ನು ಓದಿಸಿ, ಊರಿನಲ್ಲಿ ಜಾತಿ ಸಮಸ್ಯೆ ಸೇರಿ ಬೇರೆ ಸಮಸ್ಯೆಯನ್ನು ಮೀರಿ ಬೆಳೆದಿದ್ದ. ಈಗ ಇಲ್ಲ ಎಂದು ನಂಬಲಾಗುತ್ತಿಲ್ಲ’ ಎಂದು ದುಃಖ ತಾಳದೆ ಕಣ್ಣೀರಾದರು.

ಸಾವಿನಲ್ಲೂ ಸಾರ್ಥಕತೆ

ನಟ ಸಂಚಾರಿ ವಿಜಯ್ ಅವರು ಯಕೃತ್ತು, ಮೂತ್ರಪಿಂಡ ಸೇರಿದಂತೆ ವಿವಿಧ ಅಂಗಾಂಗಳನ್ನು ದಾನವಾಗಿ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ಅವರಿಂದ ದಾನ ಪಡೆದ ಅಂಗಾಂಗಳನ್ನು ಗಂಭೀರ ಕಾಯಿಲೆ ಎದುರಿಸುತ್ತಿದ್ದವರಿಗೆ ಕಸಿ ಮಾಡಲಾಗಿದೆ.

ಅವರ ಮಿದುಳು ನಿಷ್ಕ್ರಿಯಗೊಂಡಿರುವುದನ್ನುಸೋಮವಾರ ಘೋಷಿಸಿದ್ದ ಅಪೋಲೊ ಆಸ್ಪತ್ರೆಯ ವೈದ್ಯರು, ಕುಟುಂಬದ ಸದಸ್ಯರಿಂದ ಅಂಗಾಂಗ ದಾನದ ಪ್ರಕ್ರಿಯೆಗೆ ಸಮ್ಮತಿ ಪಡೆದಿದ್ದರು. ಬಳಿಕ ಅಂಗಾಂಗಗಳನ್ನು ಬೇರ್ಪಡಿಸಿ, ಸರ್ಕಾರದ ಜೀವಸಾರ್ಥಕತೆ ಸಂಸ್ಥೆಯಡಿ ಹೆಸರು ನೋಂದಣಿ ಮಾಡಿದ್ದ, ಅಂಗಾಂಗ ವೈಫಲ್ಯವಾಗಿರುವವರಿಗೆ ಕಸಿ ಮಾಡಲಾಗಿದೆ.

‘ಯಕೃತ್ತು, ಎರಡು ಮೂತ್ರಪಿಂಡ, ಹೃದಯದ ಕವಾಟ ಹಾಗೂ ಕಾರ್ನಿಯಾವನ್ನು ದಾನವಾಗಿ ಪಡೆಯಲಾಗಿದೆ. ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ, ಅಂಗಾಂಗಕ್ಕೆ ಎದುರು ನೋಡುತ್ತಿದ್ದವರಿಗೆ ಕಸಿ ಮಾಡಲು ಒದಗಿಸಲಾಗುತ್ತಿದೆ. ಯಕೃತ್ತನ್ನು 50 ವರ್ಷದ ಪುರುಷನಿಗೆ ನೀಡಲಾಗಿದೆ. ಎಡ ಮೂತ್ರಪಿಂಡವು 57 ವರ್ಷದ ಪುರುಷನಿಗೆ ನೆರವಾಗಿದ್ದು, ಈ ಎರಡೂ ಕಸಿಯನ್ನು ಅಪೋಲೊ ಆಸ್ಪತ್ರೆಯಲ್ಲೇ ನಡೆಸಲಾಗಿದೆ. ಬಲ ಮೂತ್ರಪಿಂಡವನ್ನು 34 ವರ್ಷದ ಮಹಿಳೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ’ ಎಂದು ಜೀವಸಾರ್ಥಕತೆ ಸಂಸ್ಥೆಯು ತಿಳಿಸಿದೆ.

‌‘ಹೃದಯದ ಕವಾಟವನ್ನು ಜಯದೇವ ಹೃದ್ರೋಗ ಸಂಸ್ಥೆಗೆ ಹಾಗೂ ಕಾರ್ನಿಯಾವನ್ನು ಮಿಂಟೊ ಕಣ್ಣಿನ ಆಸ್ಪತ್ರೆಗೆ ನೀಡಲಾಗಿದೆ. ನೋಂದಾಯಿತ ಅರ್ಹರನ್ನು ಗುರುತಿಸಿ, 14 ದಿನಗಳಲ್ಲಿ ಕಸಿ ಮಾಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಕಾನೂನಾತ್ಮಕವಾಗಿ ನಡೆಯುತ್ತದೆ. ಸಂಚಾರಿ ವಿಜಯ್ ಅವರ ಅಂಗಾಂಗಗಳು ಏಳು ಮಂದಿಗೆ ನೆರವಾಗಲಿದೆ’ ಎಂದು ಸಂಸ್ಥೆ ಹೇಳಿದೆ.

ಪಂಚಭೂತಗಳಲ್ಲಿ ಲೀನ

ಚಿಕ್ಕಮಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌ (ಬಿ. ವಿಜಯಕುಮಾರ್‌) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಮಂಗಳವಾರ ನೆರವೇರಿತು.

ವಿಜಯ್‌ ಅವರ ಸ್ನೇಹಿತ ರಾಘವೇಂದ್ರ ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಮಧ್ಯಾಹ್ನ 3.15ಕ್ಕೆ ಅಂತ್ಯಸಂಸ್ಕಾರ ನಡೆಯಿತು. ಆಡಿ ಬೆಳೆದ ಊರಿನ ಮಣ್ಣಿನಲ್ಲಿ ವಿಜಯ್‌ ಲೀನವಾದರು.

ಅಣ್ಣ ವಿರೂಪಾಕ್ಷ ಮತ್ತು ತಮ್ಮ ಸಿದ್ದೇಶ್‌ ವಿಧಿ ವಿಧಾನ ನೆರವೇರಿಸಿದರು. ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ವಿಧಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT