ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ ಮಹಾಕವಿ ರಸ್ತೆ: ಹೆಸರು ಬದಲಿಸದಂತೆ ಪ್ರಮುಖರ ಆಗ್ರಹ

ಮರುನಾಮಕರಣ ಮಾಡದಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಮುಖರ ಆಗ್ರಹ
Last Updated 11 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆಯಲ್ಲಿ ಇರುವ ಪಂಪ ಮಹಾಕವಿ ರಸ್ತೆಯ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಸ್ತೆ ಎಂದು ಬದಲಾಯಿಸುವ ಪ್ರಸ್ತಾವಕ್ಕೆಸಾಹಿತ್ಯ ವಲಯದ ಪ್ರಮುಖರಿಂದ ಆಕ್ಷೇಪ ವ್ಯಕ್ತವಾಗಿದೆ.

ರಸ್ತೆಯ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಲು ಕಸಾಪ ಸಜ್ಜಾಗುತ್ತಿದೆ. ಪರಿಷತ್ತಿನ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲೂ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಮಿಂಟೋ ಕಣ್ಣಿನ ಆಸ್ಪತ್ರೆ ವೃತ್ತದಿಂದ ನ್ಯಾಷನಲ್ ಕಾಲೇಜುವರೆಗಿನ ರಸ್ತೆಯನ್ನು ಪಂಪ ಮಹಾಕವಿ ರಸ್ತೆ ಎಂದು ಗುರುತಿಸಲಾಗಿದೆ. ಈ ರಸ್ತೆಯಲ್ಲಿಕಸಾಪ ಕೇಂದ್ರ ಕಚೇರಿ ಎದುರಿನ ಅರ್ಧ ಕಿ.ಮೀ (ಮಿಂಟೋ ಕಣ್ಣಿನ ಆಸ್ಪತ್ರೆಯಿಂದ ಮಕ್ಕಳ ಕೂಟದವರೆಗೆ) ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ರಸ್ತೆ ಎಂದು ಮರುನಾಮಕರಣ ಮಾಡುವಂತೆ ಪ್ರಸ್ತಾವ ಸಲ್ಲಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಬಗ್ಗೆಇತ್ತೀಚೆಗೆ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡು, ಹೆಸರು ಬದಲಾವಣೆ ಹಾಗೂ ರಸ್ತೆಯನ್ನು ಕನ್ನಡಮಯವಾಗಿಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಕಸಾ‍ಪ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು,ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ,ರಾಜೇಂದ್ರ ಚೆನ್ನಿ,ವಿಜಯಾ,ಬಂಜಗೆರೆ ಜಯಪ್ರಕಾಶ್, ಡಾ.ವಸುಂಧರಾ ಭೂಪತಿ,ಕೆ.ಎಸ್.ವಿಮಲಾ ಹಾಗೂಬಿ.ಶ್ರೀಪಾದ ಭಟ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಸಾಹಿತ್ಯ ಪರಿಷತ್ತಿಗೆ ಒಂದು ಐತಿಹಾಸಿಕ ಪರಂಪರೆಇರುವಂತೆಯೇ, ಪರಿಷತ್ತಿನ ಮುಂದಿನ ರಸ್ತೆ ಪಂಪ ಮಹಾಕವಿ ರಸ್ತೆಗೂ ಒಂದು ಐತಿಹಾಸಿಕ ಮಹತ್ವವಿದೆ. ಪಂಪ ಮಹಾಕವಿ ಕನ್ನಡದ ಆದಿಕವಿ.ಪಂಪನ ಹೆಸರಿನ ರಸ್ತೆಯ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಪ್ರವೇಶಿಸುವುದು, ಕವಿ ಪರಂಪರೆಯ ಮಾರ್ಗದಲ್ಲಿ ನಡೆದು, ಸಾಹಿತ್ಯ ಪರಿಷತ್ತೆಂಬ ಕನ್ನಡದ ಸಾಕ್ಷಿ ಪ್ರಜ್ಞೆಯ ಪ್ರತೀಕದಂತಿರುವ ವರ್ತಮಾನದ ಅರಿವಿನ ದೇಗುಲವನ್ನು ಪ್ರವೇಶಿಸಿದಂತೆ’ ಎಂದು ತಿಳಿಸಿದ್ದಾರೆ.

‘ಈಗಿನ ಅಧ್ಯಕ್ಷರು ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಾಯಿಸಿ, ಸಾಹಿತ್ಯ ಪರಿಷತ್ತಿನ ರಸ್ತೆ ಎಂದು ನಾಮಕರಣ ಮಾಡಲು ಮುಂದಾಗಿರುವುದು ಸಾಹಿತ್ಯದ ತಿಳಿವಳಿಕೆ ಇಲ್ಲದ ಅಪದ್ಧ ನಡೆ. ಹೆಸರು ಬದಲಾಯಿಸಿದರೆ ಅದು ನಮ್ಮ ಆದಿಕವಿಗೆ, ಸಾಹಿತ್ಯ ಪರಂಪರೆಗೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಾಡಿದ ಮಹಾ ದ್ರೋಹವಾಗುತ್ತದೆ. ಆದ್ದರಿಂದ ಅಧ್ಯಕ್ಷರು ಇಂತಹ ವಿವೇಕಶೂನ್ಯ ಕಾರ್ಯಕ್ಕೆ ಮುಂದಾಗಬಾರದು’ ಎಂದು ಆಗ್ರಹಿಸಿದ್ದಾರೆ.

‘ಯಾವುದೇ ಕಾರಣಕ್ಕೂ ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ಬೇಡ. ಪಂಪ ಕನ್ನಡದ ಅಸ್ಮಿತೆಯ ಸಂಕೇತ’ ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT