ಶನಿವಾರ, ಏಪ್ರಿಲ್ 1, 2023
32 °C
ಹರಜಾತ್ರೆಯಲ್ಲಿ ರುದ್ರಾಕ್ಷಿ ತುಲಾಭಾರವನ್ನೂ ನಿರಾಕರಿಸಿದ ಸ್ವಾಮೀಜಿ

ಮೀಸಲಾತಿ ಸಿಗುವವರೆಗೆ ಸಿಂಹಾಸನದಲ್ಲಿ ಕೂರುವುದಿಲ್ಲ: ವಚನಾನಂದಶ್ರೀ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬೆಳ್ಳಿ ಸಿಂಹಾಸನದಲ್ಲಿ ಕೂರುವುದಿಲ್ಲ’ ಎಂದು ಪೀಠಾಧಿಪತಿ ವಚನಾನಂದ ಸ್ವಾಮೀಜಿ ಪ್ರಕಟಿಸಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇತ್ರದಲ್ಲಿ ಭಾನುವಾರ ನಡೆದ ಹರಜಾತ್ರೆ ಹಾಗೂ ‘ಪಂಚಮ ಪೀಠಾರೋಹಣ’ ಸಮಾರಂಭದಲ್ಲಿ ಅವರು ಸಿಂಹಾಸನದಲ್ಲಿ ಕೂರಲು ನಿರಾಕರಿಸಿದರು.

‘ಸಮುದಾಯಕ್ಕೆ ಮೀಸಲಾತಿ ಸಿಗುವಂತೆ ಮಾಡಿ ಜನರ ಹೃದಯ ಸಿಂಹಾಸನದಲ್ಲಿ ಕೂರಲು ಇಚ್ಛೆ ಪಡುತ್ತೇನೆ. ಪಂಚಮ ಪೀಠಾರೋಹಣ ಮಾಡುವುದಿಲ್ಲ’ ಎಂದು ಹೇಳಿದರು.

ರುದ್ರಾಕ್ಷಿ ತುಲಾಭಾರವನ್ನೂ ಬೇಡವೆಂದರು. ಮೀಸಲಾತಿ ಪಡೆದ ಮೇಲೆಯೇ ತುಲಾಭಾರ ಮಾಡಿಸಿಕೊಳ್ಳುವುದಾಗಿ ತಿಳಿಸಿದರು.

ಬೆಳ್ಳಿ ಸಿಂಹಾಸನದ ಮೇಲೆ ಕೂರದ ವಚನಾನಂದ ಸ್ವಾಮೀಜಿಗೆ ಇಳಕಲ್ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಶಿವಯೋಗಿ ಸ್ವಾಮೀಜಿ ಕೇವಲ ರುದ್ರಾಕ್ಷಿ ಪೇಟ ತೊಡಿಸಿದರು.

‘ಮೀಸಲಾತಿ ವಿಚಾರವಾಗಿ ನಾವೆಲ್ಲ ನಿಮ್ಮ ಜತೆ ಇದ್ದೇವೆ. ನೀವು ಪೀಠಾರೋಹಣ ತಿರಸ್ಕರಿಸಬಾರದು. ಪೀಠಾರೋಹಣ ಮಾಡಿ ಜನರ ಪ್ರೀತಿಗೆ ಪಾತ್ರರಾಗಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದರು.

‘ಪ್ರಾಣ ಬಿಟ್ಟೇವು ಮೀಸಲಾತಿ ಬಿಡೆವು ಎಂಬುದು ಇತ್ತೀಚೆಗೆ ಎಲ್ಲರ ಸ್ಲೋಗನ್ ಆಗಿದೆ. ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಸರ್ಕಾರ ಏನು ಮಾಡುತ್ತದೆ ಎಂಬುದು ಗೊತ್ತಿಲ್ಲ. ಸಮಾಧಾನವಾಗಿ ಇದ್ದರೆ ಸರ್ಕಾರ ನ್ಯಾಯ ಕೊಡುತ್ತದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ವೀರಶೈವ ಮಹಾಸಭಾವು ಉಪಜಾತಿಗಳಿಂದಾಗಿ ಒಡೆಯುತ್ತಾ ಹೋಗುತ್ತಿದೆ. ಒಂದೊಂದು ಉಪಜಾತಿಗೆ ಒಬ್ಬೊಬ್ಬರು ಸ್ವಾಮೀಜಿಯಾಗಿ, ಅವರು ಒಗ್ಗಟ್ಟಾಗದೇ ಇರುವುದು ಸಮಸ್ಯೆಯಾಗಿದೆ’ ಎಂದು ಶಾಮನೂರು ಶಿವಶಂಕರಪ್ಪ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು