ಭಾನುವಾರ, ಸೆಪ್ಟೆಂಬರ್ 26, 2021
24 °C
ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಶಾಸಕರು ಹೋರಾಡಲಿ, ಇಲ್ಲವೇ ರಾಜೀನಾಮೆ ನೀಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಪಂಚಮಸಾಲಿ ಸಮುದಾಯದ 17 ಮಂದಿ ಶಾಸಕರು ಇದ್ದಾರೆ. ನಾವು ಇಲ್ಲಿ ರಸ್ತೆಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಶಾಸಕರು  ಅಧಿವೇಶನದಲ್ಲಿ ಹೋರಾಟ ಮಾಡಿ ಮೀಸಲಾತಿ ಕೊಡಿಸಬೇಕು. ನಿಮಗೆ ಆಗುವುದಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೊರನಡೆಯಿರಿ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೂಚಿಸಿದರು.

‘ನೀವು ‌ಯಾವ ಸಮುದಾಯದವರು ಎಂದು ನೋಡಿಯೇ ನಿಮಗೆ ರಾಜಕೀಯ ಪಕ್ಷಗಳು ಟಿಕೆಟ್‌ ಕೊಟ್ಟಿರುತ್ತವೆ. ಯಾವ ಸಮುದಾಯದಿಂದ ಬಂದಿದ್ದೀರೋ ಆ ಸಮುದಾಯಕ್ಕಾಗಿ ಕೆಲಸ ಮಾಡಲು ಆಗುವುದಿಲ್ಲ ಎಂದಾದರೆ ರಾಜೀನಾಮೆ ನೀಡಬೇಕು. ನಾವು ಬೇರೆಯವರನ್ನು ಶಾಸಕರನ್ನಾಗಿ ಆಯ್ಕೆ ಮಾಡುತ್ತೇವೆ’ ಎಂದು ಸ್ವಾಮೀಜಿ ಶನಿವಾರ ಇಲ್ಲಿ ಪಾದಯಾತ್ರೆಯಲ್ಲಿ ತಿಳಿಸಿದರು.

‘ಜ.14ರಿಂದ ಇಲ್ಲಿಯವರೆಗೆ 380 ಕಿ.ಮೀ ಪಾದಯಾತ್ರೆಯನ್ನು ಶಾಂತಿ, ಸಹನೆ, ಪ್ರೀತಿಯಿಂದ ಮಾಡಿದ್ದೇವೆ. ಇಂದಿನಿಂದ ಬಾರುಕೋಲು ಚಳವಳಿ ಮಾಡುವ ಮೂಲಕ ಉಗ್ರ ಸ್ವರೂಪದ ಪ್ರತಿಭಟನೆ ಆರಂಭಿಸಿದ್ದೇವೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಿದ್ದು ಸಾಕು. ಕೋಟೆನಗರಿ ಚಿತ್ರದುರ್ಗಕ್ಕೆ ತಲುಪುವ ಮೊದಲು ಮೀಸಲಾತಿ ಘೋಷಿಸಬೇಕು. ಇಲ್ಲದೇ ಇದ್ದರೆ ಅಲ್ಲಿಂದ ಬೇರೆ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಲಿಂಗಾಯತದ ಒಂದು ಉಪಪಂಗಡದಿಂದ ಬಂದಿರುವ ಮುಖ್ಯಮಂತ್ರಿ, ತಮ್ಮ ಪಂಗಡಕ್ಕೆ 2ಎ ಮೀಸಲಾತಿ ಕೊಡಿಸಿದ್ದಾರೆ. ಪಂಚಮಸಾಲಿಗಳಿಗೂ ಕೊಡಬೇಕು. ನೀವು ಒಂದು ಪಂಗಡದ ನಾಯಕರಲ್ಲ; ಸಮಸ್ತ ಲಿಂಗಾಯತರ ನಾಯಕರು’ ಎಂದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರೂ ದಾವಣಗೆರೆಯಿಂದ ಪಾದಯಾತ್ರೆಯಲ್ಲಿ ಬೆಂಗಳೂರಿನತ್ತ ಸಾಗಿದರು.

ಬಿಎಸ್‌ವೈ ಪ್ರತಿಕೃತಿ ದಹನ

ದಾವಣಗೆರೆಯ ಚನ್ನಮ್ಮ ವೃತ್ತದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಬಾರುಕೋಲು ಚಳವಳಿಯನ್ನು ಆರಂಭಿಸಲಾಯಿತು. ಮೀಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪ್ರತಿಕೃತಿಯನ್ನು ಪಂಚಮಸಾಲಿ ಸಮುದಾಯದವರು ಇದೇ ಸಂದರ್ಭದಲ್ಲಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು