ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮೀಸಲಾತಿ ಹೋರಾಟ ತಾತ್ಕಾಲಿಕವಾಗಿ ಸ್ಥಗಿತ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

Last Updated 17 ಮಾರ್ಚ್ 2021, 6:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಭರವಸೆಯನ್ನು ನಂಬಿ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಆರು ತಿಂಗಳ ಅವಧಿಯವರೆಗೆ ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಳಿಸಲಾಗಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರ ಆರು ತಿಂಗಳ ಕಾಲಾವಕಾಶ ಕೇಳಿದೆ. ಅದರಂತೆ ಮಾರ್ಚ್‌ 15ರಂದು ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೆಪ್ಟೆಂಬರ್‌ 15ರವರೆಗೂ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗುವುದು. ಆ ಬಳಿಕ ಮತ್ತೆ ಹೋರಾಟ ಆರಂಭವಾಗಲಿದೆ" ಎಂದರು.

ಸಂಕ್ರಾಂತಿಯಂದು ಕೂಡಲ ಸಂಗಮದಲ್ಲಿ ಆರಂಭವಾದ ಪಾದಯಾತ್ರೆ ಬೆಂಗಳೂರಿನವರೆಗೂ ಯಶಸ್ವಿಯಾಗಿ ನಡೆಯಿತು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಬೃಹತ್‌ ಹಕ್ಕೊತ್ತಾಯ ಸಮಾವೇಶವನ್ನೂ ನಡೆಸಲಾಗಿದೆ. ಆ ಬಳಿಕ 23 ದಿನಗಳ ಧರಣಿ ಸತ್ಯಾಗ್ರಹವೂ ನಡೆದಿದೆ. ಈಗ ಹೋರಾಟಕ್ಕೆ ಮೊದಲ ಹಂತದ ಯಶಸ್ಸು ದೊರಕಿದೆ ಎಂದು ಹೇಳಿದರು.

"ಸಂವಿಧಾನದ ಚೌಕಟ್ಟಿನಲ್ಲಿ ಕಾನೂನುಬದ್ಧವಾಗಿ ಮೀಸಲಾತಿ ಕಲ್ಪಿಸಬೇಕಾದರೆ ಆರು ತಿಂಗಳ ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವೂ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಕುರಿತು ವಿಧಾನಮಂಡಲದಲ್ಲೇ ಭರವಸೆ ನೀಡುವಂತೆ ಒತ್ತಾಯಿಸಿದ್ದೆವು. ಅದರಂತೆ ಸರ್ಕಾರ ವಿಧಾನಮಂಡಲದಲ್ಲೇ ಭರವಸೆ ನೀಡಿದೆ. ಅದನ್ನು ನಂಬಿ ತಾತ್ಕಾಲಿಕವಾಗಿ ಹೋರಾಟ ಸ್ಥಗಿತಗೊಳಿಸಿದ್ದೇವೆ" ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಂಚಮಸಾಲಿ ಸಮುದಾಯದವರೇ ಆಗಿರುವ ಸಚಿವ ಸಿ.ಸಿ. ಪಾಟೀಲ ಸೇರಿದಂತೆ ಹಲವರು ಸರ್ಕಾರದ ಪರವಾಗಿ ಖುದ್ದಾಗಿ ಭರವಸೆ ನೀಡಿದ್ದಾರೆ. ಎಲ್ಲರ ಮಾತುಗಳ ಮೇಲೂ ಭರವಸೆ ಇಟ್ಟು, ತೀರ್ಮಾನಕ್ಕೆ ಬರಲಾಗಿದೆ. ಆರು ತಿಂಗಳ ಒಳಗಾಗಿ ಮೀಸಲಾತಿ ದೊರಕದಿದ್ದರೆ ಆದೇಶ ಹೊರಬೀಳುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.

ಮಾ.23ರಂದು ಬೆಂಗಳೂರಿನಿಂದ ವಾಪಸು ಹೊರಡಲಾಗುವುದು. ಮೀಸಲಾತಿ ಹೋರಾಟದ ಪಾದಯಾತ್ರೆ ಸಾಗಿಬಂದ ಮಾರ್ಗವಾಗಿಯೇ ಶರಣು ಶರಣಾರ್ಥಿ ಯಾತ್ರೆ ಮೂಲಕ ತೆರಳಲಾಗುವುದು. ಏಪ್ರಿಲ್‌ 11ಕ್ಕೆ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ತಲುಪಲಾಗುವುದು ಎಂದು ಸ್ವಾಮೀಜಿ ಪ್ರಕಟಿಸಿದರು.

ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸೆಪ್ಟೆಂಬರ್‌ 15ರೊಳಗೆ ಮೀಸಲಾತಿ ದೊರಕದಿದ್ದರೆ ಮತ್ತೆ ಬೆಂಗಳೂರಿನಲ್ಲಿ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು ಎಂದರು.

ಹೋರಾಟ ನಿಲ್ಲಿಸಲು ಕೆಲವರು ಯತ್ನಿಸಿದ್ದರು. ಆದರೆ, ಯಾರಿಗೂ ಅದರಲ್ಲಿ ಯಶಸ್ಸು ಸಿಗಲಿಲ್ಲ. ಪಂಚಮಸಾಲಿ ಸಮುದಾಯದ ಕೂಗನ್ನು ಸರ್ಕಾರಕ್ಕೆ ತಲುಪಿಸಲು ಕಾರಣವಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಮುದಾಯ ಕೃತಜ್ಞತೆ ಸಲ್ಲಿಸುತ್ತದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಹೋರಾಟಕ್ಕೆ ತ್ವರಿತವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಎ.ಬಿ. ಪಾಟೀಲ, ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ನಾನಾಗೌಡ ಬಿರಾದಾರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ವಚನಾನಂದ ಸ್ವಾಮೀಜಿ ಸೆಲೆಬ್ರಿಟಿ

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮೀಸಲಾತಿ ಹೋರಾಟದಿಂದ ಹಿಂದೆ ಸರಿದು ಮತ್ತೆ ಕಾಣಿಸಿಕೊಂಡಿರುವ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ʼನಮ್ಮ ಪಾದಯಾತ್ರೆ ಹರಿಹರ ತಲುಪಿದಾಗ ಅವರು (ವಚನಾನಂದ ಸ್ವಾಮೀಜಿ) ಬಂದರು. ನಾವು ಸ್ವಾಗತಿಸಿದೆವು. ಬೆಂಗಳೂರಿನಲ್ಲಿ ಸಮಾವೇಶ ಮುಗಿದ ತಕ್ಷಣ ಹೋದರು. ಈಗ ಮತ್ತೆ ಕಾಣಿಸಿಕೊಂಡಿದ್ದಾರೆ. ಅವರು ಸೆಲೆಬ್ರಿಟಿ ಬರುತ್ತಾರೆ, ಹೋಗುತ್ತಾರೆ. ನಮ್ಮ ಹೋರಾಟ ನಿರಂತರʼ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT