ಬೆಂಗಳೂರು: ಪಂಚಮಸಾಲಿ ಸಮು ದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ, ರಾಜಧಾನಿಯಲ್ಲಿ ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವ ದಲ್ಲಿ ಶನಿವಾರದಿಂದ ಮತ್ತೊಂದು ಸುತ್ತಿನ ಹೋರಾಟ ಆರಂಭವಾಗಿದೆ.
ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದ ಪ್ರತಿಭಟನಕಾರರು ಅಲ್ಲಿಂದ ಶನಿವಾರ ಬೆಂಗಳೂರಿಗೆ ಬಂದರು. ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
‘ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಪಂಚಮಸಾಲಿ ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿದ್ದೇವೆ. ಅಂತಿಮ ಆದೇಶ ಬರುವ ತನಕ ಸ್ವಾತಂತ್ರ್ಯ ಉದ್ಯಾನ ಬಿಟ್ಟು ಎಲ್ಲಿಗೂ ಕದಲುವುದಿಲ್ಲ’ ಎಂದು ಸ್ವಾಮೀಜಿ ಘೋಷಿಸಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲಿದ್ದ ನಂಬಿಕೆ ಈಗ ಉಳಿದಿಲ್ಲ. 2ಎ ಮೀಸಲು ಕೊಡುತ್ತೇನೆ ಎಂದು ಮುಖ್ಯಮಂತ್ರಿ ಆಣೆ ಮಾಡಿಯೂ ಮೋಸ ಮಾಡಿದ್ದಾರೆ. ರಾಜಧಾನಿಯಲ್ಲಿ ಈ ಹಿಂದೆಯೇ 10 ಲಕ್ಷ ಜನರನ್ನು ಸೇರಿಸಿ ಪಾದಯಾತ್ರೆ ನಡೆಸಲಾಗಿತ್ತು. ಆಗಲೇ ಸರ್ಕಾರದ ಮನಸ್ಸು ಕರಗಬೇಕಿತ್ತು’ ಎಂದು ಹೇಳಿ ದರು.
‘ಪೀಠವನ್ನು ಬಿಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿದ್ದೇನೆ. ಸುದೀರ್ಘ ವಾದ ಹೋರಾಟ ಯಾರೂ ನಡೆಸಿಲ್ಲ. ಇದು ಕಣ್ಣಿಲ್ಲದ ರಾಜ್ಯ ಸರ್ಕಾರ’ ಎಂದು ದೂರಿದರು.
‘ಬಿಜೆಪಿ ನೇತೃತ್ವದ ಸರ್ಕಾರ ಪಂಚಮಸಾಲಿ ಸಮುದಾಯವನ್ನು ಮತಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಸಮುದಾಯದ ಪರವಾಗಿ ಕೆಲಸ ಮಾಡುತ್ತಿಲ್ಲ. ಸಮುದಾಯದ ಜನರು ಅಧಿಕಾರ, ಹಣ ಕೇಳುತ್ತಿಲ್ಲ. ಮೀಸಲಾತಿ ಮಾತ್ರ ಕೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ 2ಎ ಮೀಸಲಾತಿ ಕಲ್ಪಿಸುತ್ತೇವೆಂದು ಈ ಸರ್ಕಾರವೇ ಸಮುದಾಯಕ್ಕೆ ಭರವಸೆ ನೀಡಿತ್ತು. ಅದರಂತೆ ನಡೆದುಕೊಳ್ಳಬೇಕು. ಕೊಟ್ಟ ಮಾತು ತಪ್ಪುವುದು ಬೇಡ’ ಎಂದು ಸ್ವಾಮೀಜಿ ಆಗ್ರಹಿಸಿದರು.
‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರೂ ಸಮುದಾಯದ ಕೈಹಿಡಿಯಲಿಲ್ಲ. ನೀವೂ (ಬಸವರಾಜ ಬೊಮ್ಮಾಯಿ) ಮುಖ್ಯಮಂತ್ರಿಯಾಗಿ 18 ತಿಂಗಳು ಕಳೆದಿದೆ. ಪದೇ ಪದೇ ಸುಳ್ಳು ಹೇಳಿಕೊಂಡು ಸಮುದಾಯದ ಮುಖಂಡರ ದಾರಿ ತಪ್ಪಿಸುತ್ತಿದ್ದೀರಿ. ಬೆಳಗಾವಿಗೆ ಪ್ರತಿಭ ಟನೆಗೆ ತೆರಳಿದ್ದಾಗಲೂ ಸುಳ್ಳು ಹೇಳಿ ದಾರಿ ತಪ್ಪಿಸಲಾಯಿತು’ ಎಂದು ಆಕ್ರೋಶ ಹೊರಹಾಕಿದರು.
‘ಸಾಕಷ್ಟು ಗಡುವುಗಳು ಮುಕ್ತಾಯ ವಾಗಿವೆ. ಅಂತಿಮ ಆದೇಶದ ಬರುವ ತನಕ ಏಕಾಂಗಿ ಹೋರಾಟ ನಡೆಸುತ್ತೇನೆ’ ಎಂದು ಹೇಳಿದರು.
ಜತೆಗಿರುವವರನ್ನು ಸ್ವಾಮೀಜಿ ಪ್ರಶ್ನಿಸಲಿ: ಬೊಮ್ಮಾಯಿ
ಜಾತಿ ರಾಜಕಾರಣದಲ್ಲಿ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆ ಪಕ್ಷದವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂದು ಸ್ವಾಮೀಜಿ ಅವರು ತಮ್ಮ ಅಕ್ಕಪಕ್ಕ ಇರುವವರಿಗೆ ಪ್ರಶ್ನೆ ಕೇಳಬೇಕು. ಈ ರೀತಿಯ ವಿಷಮ ವಾತಾವರಣ ಸೃಷ್ಟಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ವೈಯಕ್ತಿಕ ನಿಂದನೆ ಮಾಡುವುದು ಕರ್ನಾಟಕದ ರಾಜಕೀಯ ಸಂಸ್ಕೃತಿಯಲ್ಲ. ವಿಷಯಾಧಾರಿತ ಭಿನ್ನಾಭಿಪ್ರಾಯ ಇರಬೇಕು. ವೈಯಕ್ತಿಕವಾಗಿ ಮಾತನಾಡುವುದು ಸಲ್ಲದು, ಅದಕ್ಕೆ ಹೊರತಾಗಿ ಮಾತನಾಡುವುದು ಅವರ ಸಂಸ್ಕೃತಿ ತೋರಿಸುತ್ತದೆ. ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ವಾಗುವ ರೀತಿ ಮಾತನಾಡುವವರ ವಿರುದ್ಧ ಪಕ್ಷ ಸರಿಯಾದ ನಿರ್ಧಾರ ಕೈಗೊಳ್ಳಲಿದೆ ಎಂದರು.
‘ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ. ವಿಜಯಾನಂದ ಕಾಶಪ್ಪನವರ ಶಾಸಕರಿದ್ದರು, ಅವರ ತಂದೆ ಸಚಿವರಿದ್ದಾಗ ಕಾಂಗ್ರೆಸ್ ಯಾಕೆ ಮಾಡಿಲ್ಲ? 2016ರಲ್ಲಿ ಅವರದೇ ಸರ್ಕಾರ ಇತ್ತು, ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದರು. ಪಂಚಮಸಾಲಿ ಸಮುದಾಯದವರ ಬೇಡಿಕೆಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ನೇತೃತ್ವ ಸಮಿತಿ ತಿರಸ್ಕರಿಸಿತು. 2ಎ ನೀಡಲಾಗುವುದಿಲ್ಲ, 3ಬಿನಲ್ಲೇ ಇರಬೇಕು ಎಂಬ ಆದೇಶವಾಗಿತ್ತು. ಈಗ ಅವರಿಗೆ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.