ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮೀಸಲಾತಿ: ಅಮಿತ್ ಶಾ ಮಧ್ಯಸ್ಥಿಕೆಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ

Last Updated 28 ಜನವರಿ 2023, 11:17 IST
ಅಕ್ಷರ ಗಾತ್ರ

ಬೆಂಗಳೂರು: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರಕುವ ತನಕ ಹೋರಾಟ ಕೈಬಿಡುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಇದರ ಮಧ್ಯಸ್ಥಿಕೆ ವಹಿಸಬೇಕು’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ 15 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತಾಯಿ ಮೇಲೆ ಆಣೆ ಮಾಡಿ ಈಗ ಮರೆತಿದ್ದಾರೆ. ಆದ್ದರಿಂದ ಅವರ ಮೇಲಿನ ವಿಶ್ವಾಸ ಸಂಪೂರ್ಣವಾಗಿ ಹೋಗಿದೆ. ಜ.17ರಂದೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರಿಗೆ ಪತ್ರ ಬರೆದಿದ್ದೇನೆ’ ಎಂದರು.

‘ನಾನು ಪತ್ರ ಬರೆದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಅದರಲ್ಲೂ ಪಂಚಮಸಾಲಿ ಸಮುದಾಯ ಹೆಚ್ಚಿರುವ ಭಾಗಗಳಿಗೇ ಅಮಿತ್ ಶಾ ಭೇಟಿ ನೀಡಿದ್ದಾರೆ. ಪಂಚಮಸಾಲಿ ಸಮುದಾಯ ಬೇಡಿಕೆ ಬಗ್ಗೆ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ನಾವು ಬರೆದಿರುವ ಪತ್ರದ ಬಗ್ಗೆ ಈಗ ಕೇಂದ್ರ ಮಟ್ಟದಲ್ಲಿ ಚರ್ಚೆಗಳು ಶುರುವಾಗಿವೆ. ಬಿಜೆಪಿಗೆ ಈ ಸಮುದಾಯದ ಶೇ 80ರಷ್ಟು ಜನ ಬೆಂಬಲ ನೀಡಿದ್ದಾರೆ. ನಮ್ಮ ಹೋರಾಟದ ತೀವ್ರತೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದ್ದರಿಂದ ನಾನೇ ಪತ್ರ ಬರೆದು ಮನವರಿಕೆ ಮಾಡಿಸಿದ್ದೇನೆ. ನಿರ್ಲಕ್ಷ್ಯ ವಹಿಸಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವ ಬಗ್ಗೆಯೂ ವಿವರಿಸಿದ್ದೇನೆ’ ಎಂದು ಹೇಳಿದರು.

‘2ಎ ಮೀಸಲಾತಿಯೇ ಬೆಕೆಂದಿಲ್ಲ. ಅದಕ್ಕೆ ಸರಿಸಮಾನವಾದ ಸೌಲಭ್ಯಗಳು ದೊರಕುವ ಯಾವುದೇ ಮೀಸಲಾತಿಯಾದರೂ ಒಪ್ಪಿಕೊಳ್ಳುತ್ತೇವೆ. ಆದರೆ, ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು. 2022ರ ಡಿಸೆಂಬರ್ 29ರಂದು ಸರ್ಕಾರ 2 ‘ಡಿ’ ಮೀಸಲಾತಿ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅದನ್ನು ಸ್ಪಷ್ಟಪಡಿಸುವ ಗೋಜಿಗೂ ಸರ್ಕಾರ ಹೋಗುತ್ತಿಲ್ಲ. ಆದ್ದರಿಂದ ಅಮಿತ್ ಶಾ ಅವರೇ ಮಧ್ಯಸ್ಥಿಕೆ ವಹಿಸಬೇಕು’ ಎಂದು ಮನವಿ ಮಾಡಿದರು.

‘15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದಿಂದ ಉತ್ತರ ಬಂದಿಲ್ಲ. ಮುಖ್ಯಮಂತ್ರಿ ಜತೆ ಮತ್ತೆ ಮಾತುಕತೆಗೆ ಹೋಗುವುದಿಲ್ಲ. ಮೀಸಲಾತಿ ಸಿಗುವ ತನಕ ಸತ್ಯಾಗ್ರಹ ನಿಲ್ಲಿಸುವುದಿಲ್ಲ. ಕೇಂದ್ರ ಸರ್ಕಾರದ ಮೂಲಕವೇ ನ್ಯಾಯ ಸಿಗಬೇಕು. ಸ್ಪಂದನ ದೊರಕುವ ವಿಶ್ವಾಸ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT