ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಸ್ವಾಮೀಜಿಗಳ ಮಾತು ಕೇಳಬೇಡಿ, ಬಡ ರೈತರ ಕೇಳಿ– ಬಸವಜಯ ಮೃತ್ಯುಂಜಯ ಶ್ರೀ

ಬಡ ರೈತರ, ವಿದ್ಯಾರ್ಥಿಗಳ ಸಂಕಷ್ಟ ಆಲಿಸಿ: ಬಸವಜಯ ಮೃತ್ಯುಂಜಯ ಶ್ರೀ
Last Updated 13 ಅಕ್ಟೋಬರ್ 2022, 15:47 IST
ಅಕ್ಷರ ಗಾತ್ರ

ಬೆಂಗಳೂರು:‘ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಸರ್ಕಾರ ಯಾವುದೇ ಸ್ವಾಮೀಜಿ ಮಾತುಗಳನ್ನು ಕೇಳುವುದು ಬೇಡ. ಬಡ ರೈತರು ಮತ್ತು ವಿದ್ಯಾರ್ಥಿಗಳ ಮಾತುಗಳನ್ನು ಆಲಿಸಿ. ಅವರ ಪರಿಸ್ಥಿತಿಯನ್ನೇ ಮಾನದಂಡವನ್ನಾಗಿ ಪರಿಗಣಿಸಿ ಮೀಸಲಾತಿ ಕಲ್ಪಿಸಲಿ’ ಎಂದುಕೂಡಲಸಂಗಮದ ಪಂಚಮಸಾಲಿ ‍ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಖವಾಗಿರುವ ಸ್ವಾಮೀಜಿಗಳಿಗೆ ಬಡವರ ಕಷ್ಟಗಳು ಗೊತ್ತಾಗುವುದಿಲ್ಲ. ಹೀಗಾಗಿ, ಅವರು ಸರ್ಕಾರದ ಮೇಲೆ ಮೀಸಲಾತಿಗೆ ಒತ್ತಡ ಹಾಕುವ ಪ್ರಯತ್ನ ಮಾಡುವುದಿಲ್ಲ. ನಿಧಾನವಾಗಿಯೇ ಸರ್ಕಾರ ಮೀಸಲಾತಿ ನೀಡಲಿ ಎನ್ನುವ ಧೋರಣೆ ಅವರದ್ದು’ ಎಂದುವಚನಾನಂದ ಸ್ವಾಮೀಜಿ ಹೆಸರು ಪ್ರಸ್ತಾಪಿಸದೆಯೇ ಅಸಮಾಧಾನ ವ್ಯಕ್ತಪಡಿಸಿದರು.

‘ಸುಮಾರು 27 ವರ್ಷಗಳಿಂದ ಪಂಚಮಸಾಲಿ ಸಮಾಜ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದಿದೆ.ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡಲಾಗಿದೆ.ಮೀಸಲಾತಿ ವಿಷಯದಲ್ಲಿಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ.ಮೀಸಲಾತಿ ಏಕೆ ಕಲ್ಪಿಸುವುದಿಲ್ಲ ಎನ್ನುವುದಾದರೂ ಸರ್ಕಾರ ಸ್ಪಷ್ಟಪಡಿಸಲಿ’ ಎಂದು ಒತ್ತಾಯಿಸಿದರು.

‘ಸರ್ಕಾರ ಅ.21ರ ಒಳಗೆ ಸರ್ವಪಕ್ಷಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು.
ಇಲ್ಲದಿದ್ದರೆ, ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ 21ರಂದು ನಡೆಯಲಿರುವ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ವಿಧಾನಸೌಧ ಮುತ್ತಿಗೆಗೆ ಕರೆ ನೀಡಲಾಗುವುದು’ ಎಂದು ತಿಳಿಸಿದರು.

‘ಹುಕ್ಕೇರಿಯ ಸಮಾವೇಶದಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ. ಸರ್ಕಾರ
ಮೀಸಲಾತಿ ಬಗ್ಗೆ ತೀರ್ಮಾನ ಪ್ರಕಟಿಸದಿದ್ದರೆ ಸುಮಾರು 25 ಲಕ್ಷ ಜನರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ’ ಎಂದು ಹೇಳಿದರು.

‘ಬೇರೆ ಸಮುದಾಯದವರ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ನಾವು ಕೇಳುತ್ತಿಲ್ಲ.ಈಗಾಗಲೇ ಸರ್ಕಾರ ಲಿಂಗಾಯತ ಸಮುದಾಯದ ಕೆಲ ಉಪ ಪಂಗಡಗಳಿಗೆ 2ಎ ಮೀಸಲಾತಿ ನೀಡಿದೆ. ನಮ್ಮ ಸಹೋದರ ಪಂಗಡಗಳಿಗೆ ನೀಡಿದ ರೀತಿಯಲ್ಲೇ ಪಂಚಮಸಾಲಿ ಸಮುದಾಯಕ್ಕೂ ಮೀಸಲಾತಿನೀಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT