ಗುರುವಾರ , ಅಕ್ಟೋಬರ್ 28, 2021
18 °C
ಹಲಸೂರು ಕೆರೆ ಮಾಲಿನ್ಯ: ಎನ್‌ಜಿಟಿ ಸಮಿತಿ ಶಿಫಾರಸು

ಹಲಸೂರು ಕೆರೆ ಮಾಲಿನ್ಯ: ₹23 ಕೋಟಿ ಪರಿಹಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರಿನ ಹಲಸೂರು ಕೆರೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಜಲಮಂಡಳಿ ಮತ್ತು ಮದ್ರಾಸ್‌ ಎಂಜಿನಿಯರಿಂಗ್ ಗ್ರೂಪ್‌ನಿಂದ (ಎಂಇಜಿ) ಪರಿಸರ ನಷ್ಟದ ಪರಿಹಾರವಾಗಿ ₹ 23.71 ಕೋಟಿ ಪಡೆಯುವಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನೇಮಿಸಿದ್ದ ಜಂಟಿ ಸಮಿತಿ ಶಿಫಾರಸು ಮಾಡಿದೆ.

ಕೆರೆಯ ಸ್ವಚ್ಛತೆ ಮತ್ತು ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಸಮಿತಿಯು ಈ ಹಿಂದೆ (2020ರ ಆಗಸ್ಟ್‌ 10ರಂದು) ನೀಡಿದ್ದ ಶಿಫಾರಸುಗಳು ಪಾಲನೆ ಆಗುತ್ತಿವೆಯೋ,ಇಲ್ಲವೋ ಎಂಬುದನ್ನು ಮತ್ತೆ ಪರಿಶೀಲಿಸಿರುವ ಜಂಟಿ ಸಮಿತಿಯು ಎನ್‌ಜಿಟಿಗೆ ವರದಿ ಸಲ್ಲಿಸಿದೆ.

ಹಿಂದಿನ ಶಿಫಾರಸುಗಳನ್ನು ಬಿಬಿಎಂಪಿ, ಜಲಮಂಡಳಿ ಮತ್ತು ಎಂಇಜಿಗಳು ಭಾಗಶಃ ಜಾರಿಗೊಳಿಸಿವೆ. ನೀರಿನ ಗುಣಮಟ್ಟದಲ್ಲಿ ಸುಧಾರಣೆಯಾಗಿಲ್ಲ. ಹೀಗಾಗಿ ಈ ಪ್ರಾಧಿಕಾರಗಳಿಂದ ಪರಿಹಾರ ಪಡೆಯಬಹುದು ಎಂದು ಸಮಿತಿ ತಿಳಿಸಿದೆ.

ಟ್ಯಾನರಿ ರಸ್ತೆಯಲ್ಲಿ ನಡೆಯುತ್ತಿರುವ ಕಸಾಯಿಖಾನೆ ಹಾಗೂ ಕಲುಷಿತ ನೀರಿನ ಶುದ್ಧೀಕರಣ ಘಟಕದ ಕಾರ್ಯಾಚರಣೆಯಲ್ಲಿ ಸರಿಯಾದ ಮಾನದಂಡಗಳನ್ನು ಅನುಸರಿಸದ ಕಾರಣಕ್ಕೆ ಬಿಬಿಎಂಪಿಯಿಂದ ₹17.83 ಕೋಟಿ, ಹಲಸೂರು ಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 2 ಎಂಎಲ್‌ಡಿ ಕಲುಷಿತ ನೀರಿನ ಶುದ್ಧೀಕರಣ ಘಟಕದಲ್ಲಿ (ಎಸ್‌ಟಿಪಿ) ಸೂಕ್ತ ಮಾನದಂಡಗಳನ್ನು ಪಾಲಿಸದ ಕಾರಣಕ್ಕೆ ಜಲಮಂಡಳಿಯಿಂದ ₹ 2.94 ಕೋಟಿ ಹಾಗೂ 100 ಕೆಎಲ್‌ಡಿ ಎಸ್‌ಟಿಪಿಯಲ್ಲೂ ನಿಗದಿತ ಮಾನದಂಡಗಳನ್ನು ಪಾಲಿಸದ ಕಾರಣಕ್ಕೆ ಎಂಇಜಿಯಿಂದ ₹ 2.94 ಕೋಟಿ ಪರಿಹಾರ ಪಡೆಯಬಹುದು ಎಂದು ಸಮಿತಿ ಶಿಫಾರಸು ಮಾಡಿದೆ.

ಒಳಚರಂಡಿಯ ನೀರು ಹಲಸೂರು ಕೆರೆ ಸೇರುತ್ತಿರುವುದರಿಂದ ನೀರು ಕಲುಷಿತಗೊಂಡು, ಗುಣಮಟ್ಟ ಕುಸಿದಿತ್ತು. ಈ ಕಾರಣದಿಂದ ಎನ್‌ಜಿಟಿ ಸ್ವಯಂ ಪ್ರೇರಣೆಯಿಂದ ವಿಚಾರಣೆ ಕೈಗೆತ್ತಿಕೊಂಡು, ಪರಿಶೀಲನೆಗಾಗಿ ಜಂಟಿ ಸಮಿತಿ ರಚಿಸಿತ್ತು.

ಈ ಜಂಟಿ ಸಮಿತಿಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಮತ್ತು ರಾಜ್ಯ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು