ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹25 ಲಕ್ಷ ಪರಿಹಾರ: ಎಚ್‌ಡಿಕೆ ಆಗ್ರಹ

Last Updated 20 ಮಾರ್ಚ್ 2022, 9:56 IST
ಅಕ್ಷರ ಗಾತ್ರ

ಬೆಂಗಳೂರು: ಪಾವಗಡ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಬಸ್‌ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಖಾಸಗಿ ಬಸ್‌ ದುರಂತದಲ್ಲಿ ಅಸುನೀಗಿದವರಿಗೆ ರಾಜ್ಯ ಸರಕಾರ ಕನಿಷ್ಠ ₹25 ಲಕ್ಷ ಪರಿಹಾರ ನೀಡಬೇಕು. ₹5 ಲಕ್ಷ ರೂ. ಕೊಟ್ಟು ಕೈತೊಳೆದುಕೊಳ್ಳುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

‘ಈ ದುರಂತಕ್ಕೆ ಸಾರಿಗೆ ಇಲಾಖೆಯ ಕರ್ತವ್ಯಲೋಪ ಮತ್ತು ದಿವ್ಯನಿರ್ಲಕ್ಷ್ಯವೇ ಕಾರಣ. ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿದ್ದ ವಿದ್ಯಾರ್ಥಿಗಳ ಜೀವಗಳು ಬಲಿಯಾಗಿವೆ. ಮುಖ್ಯಮಂತ್ರಿಗಳು ಈ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮೊತ್ತದ ಪರಿಹಾರ ಘೋಷಣೆ ಮಾಡಬೇಕು. ಮೃತ ಕಟುಂಬಗಳ ಜೀವನೋಪಾಯಕ್ಕೆ ನೆರವು ನೀಡಬೇಕು’ ಎಂದು ಎಚ್‌ಡಿಕೆ ಒತ್ತಾಯಿಸಿದ್ದಾರೆ.

‘ಗಾಯಾಳುಗಳನ್ನು ಬೆಂಗಳೂರು, ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಿಗೆ ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ವರದಿಗಳು ಬೆಳಗ್ಗೆಯಿಂದಲೂ ಮಾಧ್ಯಮಗಳಲ್ಲಿ ಬರುತ್ತಿವೆ. ಸರ್ಕಾರ ಕೂಡಲೇ ತುರ್ತು ಗಮನ ಹರಿಸಿ, ಓರ್ವ ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸಬೇಕು. ಎಲ್ಲರಿಗೂ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಕೊಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಬಸ್ಸಿನೊಳಗೆ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಟಾಪ್‌ ತುಂಬಾ ಜನ ಕೂತಿದ್ದರು. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜನ ಹೆಚ್ಚಿದ್ದರೂ ಈ ಮಾರ್ಗದಲ್ಲಿ ಬಸ್‌ʼಗಳ ಸಂಚಾರ ಸರಿಯಾಗಿಲ್ಲ, ಏಕೆ? ಅಧಿಕಾರಿಗಳ ಉಪೇಕ್ಷೆ ಖಂಡನೀಯ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪಾವಗಡ ಗಡಿ ತಾಲೂಕು. ಹಿಂದುಳಿದ ಪ್ರದೇಶವೂ ಹೌದು. ಈ ಭಾಗದ ಜನರು ಸೂಕ್ತ ಸಾರಿಗೆ ಸೌಕರ್ಯ ಇಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಶೇ.25ರಷ್ಟು ಗ್ರಾಮಗಳಿಗೆ ಬಸ್‌ ಸಂಪರ್ಕವೇ ಇಲ್ಲ ಎನ್ನುವ ಮಾಹಿತಿ ಇದೆ. ಸರಕಾರ ಕೂಡಲೇ ಈ ಎಲ್ಲ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಪರ್ಕ ಕಲ್ಪಿಸಬೇಕು’ ಎಂದು ಟ್ವೀಟಿಸಿದ್ದಾರೆ.

‘ಈ ದುರಂತಕ್ಕೆ ಆರ್‌ಟಿಓ ಅಧಿಕಾರಿಗಳ ನಿರ್ಲಕ್ಷ್ಯದ ಜತೆಗೆ ಪಾವಗಡದಲ್ಲಿ ಬಸ್‌ ಡಿಪೋ ಇದ್ದರೂ ಸೂಕ್ತ ಬಸ್‌ ವ್ಯವಸ್ಥೆ ಮಾಡದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಉಪೇಕ್ಷೆಯೂ ಎದ್ದು ಕಾಣುತ್ತದೆ. ಸರಕಾರ ಸೂಕ್ತ ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT