ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂಗಳ ಮೇಲಿನ ವಿಶ್ವಾಸ ಕಡಿಮೆಯಾಗಿದೆ: ಸಿದ್ದರಾಮಯ್ಯ

ಚುನಾವಣಾ ವ್ಯವಸ್ಥೆ ಕೆಡಲು ನಾವೆಲ್ಲರೂ ಕಾರಣರು, ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ: ಸಿದ್ದರಾಮಯ್ಯ
Last Updated 30 ಮಾರ್ಚ್ 2022, 20:01 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಸುಮಾರು 19 ಲಕ್ಷ ಇವಿಎಂಗಳು ನಾಪತ್ತೆಯಾಗಿದೆ. ಇದಕ್ಕೆ ಹೊಣೆ ಯಾರು? ಇದೇ ಕಾರಣಕ್ಕೆ ಜನರಿಗೆ ಇವಿಎಂಗಳ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಚುನಾವಣಾ ವ್ಯವಸ್ಥೆ ಕುರಿತುವಿಧಾನಸಭೆಯಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂತಹ ವ್ಯವಸ್ಥೆ ಸರಿ ಇಲ್ಲ ಎಂಬ ಕಾರಣಕ್ಕೆ ಜರ್ಮನಿಯಂತಹ ಮುಂದುವರಿದ ರಾಷ್ಟ್ರವೇ ಇವಿಎಂ ಬಿಟ್ಟು, ಮತಪತ್ರಗಳ ವ್ಯವಸ್ಥೆಗೆ ಮರಳಿವೆ ಎಂದು ತಿಳಿಸಿದರು.

‘ಒಮ್ಮೆ ನನ್ನ ಬಳಿ ಒಬ್ಬ ತಂತ್ರಜ್ಞ ಬಂದು ಇವಿಎಂಗಳನ್ನು ಹೇಗೆ ದುರ್ಬಳಕೆ ಮಾಡಬಹುದು ಎಂದು ಪ್ರಾತ್ಯಕ್ಷಿಕೆ ತೋರಿಸಿದ. ಆದರೆ ನನಗೆ ತಂತ್ರಜ್ಞಾನದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ‘ಸರಿ ಬಿಡಪ್ಪಾ’ ಅಂತ ಹೇಳಿ ಕಳುಹಿಸಿದೆ. ಆದರೆ, ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲು ಒಂದು ಅವಕಾಶ ಇದ್ದೇ ಇರುತ್ತದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ವ್ಯವಸ್ಥೆ ಕೆಡಲು ನಾವೆಲ್ಲರೂ ಕಾರಣರು: ‘ಚುನಾವಣೆ ವ್ಯವಸ್ಥೆ ಕೆಡಲು ನಾವೆಲ್ಲರೂ ಕಾರಣರು. ಇದರಲ್ಲಿ ಸರ್ಕಾರ, ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮ ಎಲ್ಲವೂ ಸೇರಿವೆ. ಈಗಎಲ್ಲರೂ ಸೇರಿಯೇ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಶಾಸಕರು ಮಾತ್ರವಲ್ಲ ಜನರಲ್ಲೂ ಜಾಗೃತಿ ಬರಬೇಕು. ಇಲ್ಲವಾದರೆ ಬದಲಾವಣೆ ಸಾಧ್ಯವಿಲ್ಲ. ಚುನಾವಣಾ ವ್ಯವಸ್ಥೆಯ ಮೇಲೆ ಹಣ, ಜಾತಿ ತೋಳ್ಬಲ ಮತ್ತು ಮಾಫಿಯಾಗಳ ಹಿಡಿತ ಸಾಧಿಸಿವೆ’ ಎಂದು ಅವರು ಹೇಳಿದರು.

‘ಪಕ್ಷಾಂತರ ನಿಷೇಧ ಕಾಯ್ದೆ ಬಂದರೂ, ಇತ್ತೀಚಿನ ವರ್ಷಗಳಲ್ಲಿ ‘ಆಪರೇಷನ್‌’ಗಳನ್ನು ನಡೆಸಿ ಚುನಾಯಿತ ಸರ್ಕಾರಗಳನ್ನು ಬದಲಿಸುತ್ತಾರೆ. ಈ ಬಗ್ಗೆ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ? ನಾವೂ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ನಾವ್ಯಾರೂ ವ್ಯವಸ್ಥೆಗಿಂತ ಅತೀತರಲ್ಲ. ವ್ಯವಸ್ಥೆಯ ಭಾಗವಾಗಿದ್ದೇವೆ. ಆತ್ಮಾವಲೋಕನ ಮಾಡಿಕೊಂಡು ಶುದ್ಧೀಕರಣ ಮಾಡಿಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

‘ಆಂತರಿಕ ಚುನಾವಣೆ ನಡೆಸದಿದ್ದರೆ ಮಾನ್ಯತೆ ರದ್ದು ಮಾಡಿ’

ರಾಜಕೀಯ ಪಕ್ಷಗಳ ಒಳಗೆ ಆಂತರಿಕ ಪ್ರಜಾಪ್ರಭುತ್ವ ಅತಿ ಅಗತ್ಯ. ಇಲ್ಲವಾದಲ್ಲಿ ಪ್ರಜಾಪ್ರಭುತ್ವವೇ ಕುಸಿದು ಹೋಗುತ್ತದೆ. ಅದರಲ್ಲೂ ಆಂತರಿಕ ಚುನಾವಣೆಗಳನ್ನು ನಡೆಸದಿದ್ದರೆ, ಅಂತಹ ಪಕ್ಷಗಳ ಮಾನ್ಯತೆ ರದ್ದು ಮಾಡಬೇಕು ಎಂದು ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಚುನಾವಣಾ ಆಯೋಗಕ್ಕೆ ಸಲಹೆ ನೀಡಿದರು.

ಚುನಾವಣೆ ಸುಧಾರಣೆಯ ಬಗ್ಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳಲ್ಲಿ ಸದಸ್ಯತ್ವ ಅಭಿಯಾನ, ಪದಾಧಿಕಾರಿಗಳ ಚುನಾವಣೆಗಳನ್ನು ಕಾಲಕಾಲಕ್ಕೆ ನಡೆಸಬೇಕು. ಅದನ್ನು ಮಾಡದೇ ಇದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಲು ಸಾಧ್ಯವೇ? ಈ ಮಾತನ್ನು ಯಾವುದೇ ಒಂದು ಪಕ್ಷವನ್ನು ಉದ್ದೇಶಿಸಿ ಹೇಳುತ್ತಿಲ್ಲ ಎಂದರು.

‘ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವಾದರೆ, ಹೊಸ ಪೀಳಿಗೆ ಬರಲು ಸಾಧ್ಯವಾಗದು. ಆ ಜಾಗವನ್ನು ತಂತ್ರಗಾರಿಕೆ ತುಂಬುತ್ತದೆ. ರಾಜಕೀಯ ಪಕ್ಷಗಳಲ್ಲಿ ಆಂತರಿಕ ಚುನಾವಣೆ ನಡೆಸುವ, ಸದಸ್ಯತ್ವ ಅಭಿಯಾನ ನಡೆಸಲು ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಸಲಹೆ ನೀಡಿದರು.

‘ಅಂತರ್ಗತ ಶಕ್ತಿಯಿಂದ ದೇಶ ಸುಭದ್ರ’

ಪ್ರಜಾಪ್ರಭುತ್ವದ ಅಂತರ್ಗತ ಶಕ್ತಿಯಿಂದಾಗಿ 75 ವರ್ಷಗಳು ಕಳೆದರೂ ದೇಶ ಸುಭದ್ರವಾಗಿದೆ. ಪ್ರತಿ ಚುನಾವಣೆ ನಡೆದಾಗಲೂ ನಮ್ಮಲ್ಲಿ ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುತ್ತದೆ. ಅತ್ಯಂತ ಮುಂದುವರಿದ ದೇಶದಲ್ಲೂ ಅಧಿಕಾರ ಸುಗಮವಾಗಿ ನಡೆಯುವುದಿಲ್ಲ ಎಂಬುದಕ್ಕೆ ಅಮೆರಿಕಾವೇ ಉದಾಹರಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ‘ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಲೋಪಗಳಿವೆ. ಆದರೆ ಸಿನಿಕತನದಿಂದ ಲೋಪವನ್ನೇ ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ. ಲೋಪದೋಷಗಳನ್ನು ಎಲ್ಲರೂ ಸೇರಿಯೇ ಸರಿಪಡಿಸಬೇಕು. ಎಲ್ಲರೂ ಕೂಡಿಯೇ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT