ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್ ಕದ್ದಾಲಿಕೆ: ಕಾಂಗ್ರೆಸ್‌ನಿಂದ ರಾಜಭವನಕ್ಕೆ ಮುತ್ತಿಗೆ

Last Updated 22 ಜುಲೈ 2021, 8:59 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಟೆಲಿಫೋನ್ ಕದ್ದಾಲಿಕೆ ಪ್ರತಿಭಟಿಸಿ ಕಾಂಗ್ರೆಸ್‌ ಶಾಸಕರು, ಮುಖಂಡರು ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಹಿರಿಯ ಮುಖಂಡರಾದ ಎಚ್.ಕೆ. ಪಾಟೀಲ, ಅಲ್ಲಂ ವೀರಭದ್ರಪ್ಪ, ರಾಮಲಿಂಗಾರೆಡ್ಡಿ, ಕೆ.ಆರ್. ರಮೇಶ್ ಕುಮಾರ್, ಸಲೀಂ ಅಹ್ಮದ್‌ ವಹಿಸಿದ್ದರು.

ಅದಕ್ಕೂ ಮೊದಲು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ನಂತರ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಡೆದ ಧರಣಿ ನಡೆಯಿತು.

ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ ನಂತರ ಕೆಂಗಲ್ ವೃತ್ತದ ಮೂಲಕ ಮೆರವಣಿಗೆ ಹೊರಟು, ರಾಜಭವನದತ್ತ ತೆರಳುತ್ತಿದ್ದ ಕಾಂಗ್ರೆಸ್ ನಾಯಕರನ್ನ ಮಾರ್ಗ ಮಧ್ಯೆ ತಡೆದ ಪೊಲೀಸರು, ಕಾರ್ಯಕರ್ತರ ಸಮೇತವಾಗಿ ವಶಕ್ಕೆ ಪಡೆದು ಕರೆದೊಯ್ದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದ ಕಾಂಗ್ರೆಸ್ ನಾಯಕರು, ಮಾರ್ಗದುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜಭವನದ ತಿಮ್ಮಯ್ಯ ಸರ್ಕಲ್ ಬಳಿ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರನ್ನ ತಡೆದು ಪೊಲೀಸರು ವಶಕ್ಕೆ ಪಡೆದರು. ಪಕ್ಷದ ಕಾರ್ಯಕರ್ತರು ಸಹ ವಿಧಾನಸೌಧ ಹೊರಭಾಗದಿಂದ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಭಾಗಿಯಾದರು. ಎಲ್ಲರನ್ನೂ ಮೂರಕ್ಕೂ ಹೆಚ್ಚು ಬಸ್​ಗಳಲ್ಲಿ ತುಂಬಿಕೊಂಡು ಕರೆದೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT