ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Last Updated 5 ಸೆಪ್ಟೆಂಬರ್ 2021, 8:14 IST
ಅಕ್ಷರ ಗಾತ್ರ

ಬೆಂಗಳೂರು: ರೈತ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ನಡೆದ 'ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ 17 ಲಕ್ಷ ರೈತ ಕುಟುಂಬಗಳಿವೆ. ಈ ಕುಟುಂಬಗಳಿಗೆ ಆರ್ಥಿಕ ಬಲ‌ ತುಂಬುವುದು ನಮ್ಮ ಸರ್ಕಾರದ ಗುರಿ' ಎಂದರು.

ರೈತರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ರೈತ ವಿದ್ಯಾ ನಿಧಿ ಯೋಜನೆ ರೂಪಿಸಲಾಗಿದೆ. ರೈತರ ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಯೋಜನೆಯ ಉದ್ದೇಶ. ತ್ವರಿತವಾಗಿ ಯೋಜನೆ ರೂಪಿಸಿ, ಅನುಷ್ಠಾನ ಮಾಡಲಾಗಿದೆ. ರೈತರ ಮಕ್ಕಳ ಶಿಕ್ಷಣಕ್ಕೆ ಇದು ಆಸರೆಯಾಗಲಿದೆ ಎಂದು ಹೇಳಿದರು.

ದೇಶದಲ್ಲಿ ಈಗಲೂ ಶೇಕಡ 60 ರಷ್ಟು ಜನರು ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಕೃಷಿ ಕ್ಷೇತ್ರದ ವರಮಾನ ಹೆಚ್ಚಳದಿಂದ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲೂ ಬೆಳವಣಿಗೆ ಆಗುತ್ತದೆ. ಕೃಷಿಕರ ಕುಟುಂಬಗಳಿಗೆ ಸಮಗ್ರವಾದ ಅಭಿವೃದ್ಧಿಗೆ ಪೂರಕವಾದ ನೆರವು ಅಗತ್ಯವಿದೆ ಎಂದರು.

ಇತರ ರಾಜ್ಯಗಳಿಗೆ ಮಾದರಿ: ಯೋಜನೆಗೆ ಚಾಲನೆ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ' ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳ ಡಿಜಿಟಲೀಕರಣದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಇಲ್ಲಿನ ಮಾದರಿಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೆ ಸಲಹೆ ನೀಡಲಾಗುವುದು' ಎಂದರು.

ಕೃಷಿ ಕ್ಷೇತ್ರದಲ್ಲಿ ದುಡಿಯುವ ಜನರ ಸಂಖ್ಯೆ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು. ರೈತ ವಿದ್ಯಾ ನಿಧಿ ಯೋಜನೆ ಅದಕ್ಕೆ ಪೂರಕವಾಗಿದೆ ಎಂದು ಹೇಳಿದರು.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, 'ಕೃಷಿ ಬಜೆಟ್ ಮಂಡಿಸಿದ ಮೊದಲ ರಾಜ್ಯ ಕರ್ನಾಟಕ. ಈಗಲೂ ರೈತರ ಪರವಾದ ಯೋಜನೆಗಳ ಅನುಷ್ಠಾನದಲ್ಲಿ ಮಾದರಿ' ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಸಚಿವ ಮುನಿರತ್ನ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದರಾದ ಮುನಿಸ್ವಾಮಿ, ಡಾ. ಉಮೇಶ್ ಜಾಧವ್, ಈರಣ್ಣ ಕಡಾಡಿ, ವಿಧಾನ ಪರಿಷತ್ ನಲ್ಲಿ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್. ಆನಂದ್ ಉಪಸ್ಥಿತರಿದ್ದರು.

ಸಾಂಕೇತಿಕವಾಗಿ ನಾಲ್ವರು ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಚೆಕ್ ವಿತರಿಸಲಾಯಿತು. ನೇರ ನಗದು ವರ್ಗಾವಣೆ ಮೂಲಕ ಎಲ್ಲರಿಗೂ ವಿದ್ಯಾರ್ಥಿ ವೇತನ ಪಾವತಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

'ಯಡಿಯೂರಪ್ಪ ಮಾರ್ಗದರ್ಶಕ'

'ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸರ್ಕಾರದ ಮಾರ್ಗದರ್ಶಕ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾಷಣದ ಮಧ್ಯದಲ್ಲಿ ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿದ ಅವರು, 'ಯಡಿಯೂರಪ್ಪ ಅವರು ದೇಶದಲ್ಲೇ ಮೊದಲ ಬಾರಿಗೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದವರು. ನಮ್ಮ ಸರ್ಕಾರದ ಮಾರ್ಗದರ್ಶಕರಾದ ಅವರು ಹಲವು ರೈತ ಪರ ಯೋಜನೆಗಳನ್ನು ಜಾರಿಗೊಳಿಸಿದ್ದರು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT