ಭಾನುವಾರ, ಸೆಪ್ಟೆಂಬರ್ 27, 2020
27 °C
ಸರ್ಕಾರಕ್ಕೆ ಒತ್ತಡ ಹೇರಲು ಕ್ರಿಯಾ ಸಮಿತಿ ಚಿಂತನೆ

‘ಶಬರಿ ದರ್ಶನ’ಕ್ಕೆ ಯೋಜನೆ ರೂಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರುತ್ತಿದ್ದಂತೆಯೇ ರಾಮನ ಪರಮ ಭಕ್ತೆ ಶಬರಿಯ ವಾಸಸ್ಥಾನ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಶಬರಿ ಕೊಳ್ಳದ ದರ್ಶನಕ್ಕೆ ಬರಲು ಸಾವಿರಾರು ಮಂದಿ ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಸಲು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಚಿಂತನೆ ನಡೆಸಲಾಗಿದೆ’ ಎಂದು ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.

‘ರಾವಣನಿಂದ ಅಪಹರಣಕ್ಕೆ ಒಳಗಾದ ಸೀತೆಯನ್ನು ಶೋಧಿಸುತ್ತಾ ದಕ್ಷಿಣಾಭಿಮುಖವಾಗಿ ಬಂದ ರಾಮನಿಗಾಗಿ ಕಾಯುತ್ತಾ ಕುಳಿತಿದ್ದ ಶಬರಿಯು ವಾಸವಾಗಿದ್ದ ಅರಣ್ಯ ಪ್ರದೇಶವೇ ಈಗಿನ ಶಬರಿಕೊಳ್ಳ. ಅಲ್ಲಿ ಶಬರಿಗೊಂದು ದೇವಸ್ಥಾನವಿದೆ. ಪುರಾಣಪ್ರಸಿದ್ಧವಾದ ಅಲ್ಲಿ ಶಬರಿಗೆ ನಿತ್ಯವೂ ಪೂಜೆ, ಮಂಗಳಾರತಿ ನೆರವೇರುತ್ತಿದೆ. ಈ ವಿಷಯ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಆಗುತ್ತಿರುವ ಹಿನ್ನೆಲೆಯಲ್ಲಿ ದೇಶದ ನಾನಾ ಕಡೆಗಳಿಂದ ಸಹಸ್ರಾರು ಭಕ್ತರು ಶಬರಿಕೊಳ್ಳ ನೋಡಲು ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಅಂಥವರನ್ನು ಕರೆದೊಯ್ಯಲು ಮಳೆಗಾಲ ಮುಗಿದ ನಂತರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

‘ಪ್ರವಾಸಿಗರನ್ನು, ಬೆಳಗಾವಿಯಿಂದ ಮೊದಲು ರಾಮದುರ್ಗ ತಾಲ್ಲೂಕಿನ ಕರಡಿಗುಡ್ಡಕ್ಕೆ ತೆರಳಿ ಅಲ್ಲಿ ಮಾತಂಗ ಋಷಿಗಳ ತಾಣ ತೋರಿಸುವುದು. ಅಲ್ಲಿಂದ ರಾಮದುರ್ಗದ ವೆಂಕಟೇಶ್ವರ ದೇವಸ್ಥಾನದ ರಾಮನ ಗುಡಿಯ ದರ್ಶನದ ಬಳಿಕ 10 ಕಿ.ಮೀ. ದೂರದ (ಗದಗ ರಸ್ತೆಯಲ್ಲಿರುವ) ಶಬರಿಕೊಳ್ಳಕ್ಕೆ ಕರೆದೊಯ್ಯುವುದು. ಅಲ್ಲಿನ ಪರಿಸರದಲ್ಲಿ 2 ಗಂಟೆಗಳಷ್ಟು ಕಳೆದು ಬೆಳಗಾವಿಗೆ ಮರಳುವುದು. ಈ ನಿಟ್ಟಿನಲ್ಲಿ ‘ಶಬರಿ ದರ್ಶನ’ ಯೋಜನೆಯನ್ನು ಸಾರಿಗೆ ಸಂಸ್ಥೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಗಮನಸೆಳೆಯಲು ಪ್ರಯತ್ನಿಸುವುದಲ್ಲದೇ, ಒಮ್ಮೆ ಅವರು ಶಬರಿಕೊಳ್ಳಕ್ಕೆ ಭೇಟಿ ನೀಡುವಂತೆ ಮಾಡುವುದೂ ಸಮಿತಿಯ ಚಿಂತನೆಯಾಗಿದೆ. ಕೇಂದ್ರ ಸಚಿವರು, ಸಂಸದರು ಈ ಚಿಂತನೆಗೆ ಧ್ವನಿಗೂಡಿಸಿದರೆ ಶಬರಿಯ ಬೆಳಕು ದೇಶದ ಎಲ್ಲೆಡೆ ಪಸರಿಸುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು