ಶುಕ್ರವಾರ, ಅಕ್ಟೋಬರ್ 2, 2020
21 °C
60 ವರ್ಷದ ಕೊರೊನಾ ಸೋಂಕಿತ ಮಹಿಳೆಗೆ ಥೆರಪಿ

ಬೆಂಗಳೂರಿನಿಂದ ಶ್ರೀನಗರಕ್ಕೆ ಪ್ಲಾಸ್ಮಾ: 60 ವರ್ಷದ ಕೊರೊನಾ ಸೋಂಕಿತೆಗೆ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Plasma

ಬೆಂಗಳೂರು: ಶ್ರೀನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೊರೊನಾ ಸೋಂಕಿತ 60 ವರ್ಷದ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ಒದಗಿಸಲು ವಿಮಾನದ ಮೂಲಕ ನಗರದಿಂದ ಪ್ಲಾಸ್ಮಾವನ್ನು ರವಾನಿಸಲಾಗಿದೆ.‌

ಕೊರೊನಾ ಸೋಂಕಿತ ಮಹಿಳೆಯ ಸಂಬಂಧಿಗಳು ನಗರದ ಎಚ್‌ಸಿಜಿ ಆಸ್ಪತ್ರೆಯಲ್ಲಿರುವ ಪ್ಲಾಸ್ಮಾ ಬ್ಯಾಂಕ್‌ ಸಂಪರ್ಕಿಸಿ, ರೋಗಿಯ ಸ್ಥಿತಿ ಗಂಭೀರ ಸ್ವರೂಪ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಪ್ಲಾಸ್ಮಾ ರವಾನಿಸುವಂತೆ ಮನವಿ ಮಾಡಿಕೊಂಡಿದ್ದರು. ಪ್ಲಾಸ್ಮಾ ಬ್ಯಾಂಕ್‌ನ ಮುಖ್ಯಸ್ಥ ಡಾ. ವಿಶಾಲ್ ರಾವ್ ನೇತೃತ್ವದ ವೈದ್ಯರ ತಂಡವು ಎರಡು ಯುನಿಟ್‌ ಪ್ಲಾಸ್ಮಾವನ್ನು 3ಸಾವಿರ ಕಿ.ಮೀ. ದೂರದಲ್ಲಿರುವ ರೋಗಿಗೆ ಇಂಡಿಗೋ ಕಾರ್ಗೊ ವಿಮಾನದ ಮೂಲಕ ಮಂಗಳವಾರ ತಲುಪಿಸಿದೆ. ವಿಮಾನವು ಬೆಂಗಳೂರಿನಿಂದ ದೆಹಲಿ ತಲುಪಿ, ಅಲ್ಲಿಂದ ಶ್ರೀನಗರಕ್ಕೆ ಸಾಗಿತ್ತು. ಅಲ್ಲಿನ ವೈದ್ಯರು ಮಹಿಳೆಗೆ ಪ್ಲಾಸ್ಮಾ ಥೆರಪಿಯನ್ನು ಪ್ರಾರಂಭಿಸಿದ್ದಾರೆ. 

‘ಪ್ಲಾಸ್ಮಾ ಬೇಕು ಎಂಬ ದೂರವಾಣಿ ಕರೆ ನಮಗೆ ಸೋಮವಾರ ಬಂದಿತು. ಕೂಡಲೇ ಅವರಿಗೆ ಹೊಂದಾಣಿಕೆಯಾಗುವ ಪ್ಲಾಸ್ಮಾ ಗುರುತಿಸಿ, ಇಂಡಿಗೋ ತಂಡವನ್ನು ಸಂಪರ್ಕಿಸಿದೆವು. ಅವರು ನಮ್ಮ ಮನವಿಗೆ ಸ್ಪಂದಿಸಿ, ಸುರಕ್ಷಿತವಾಗಿ ತಲುಪಿಸಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಇಂಡಿಗೋ ಸಂಸ್ಥೆಯ ಸಿಬ್ಬಂದಿಯ ನೆರವಿನಿಂದ ಇದು ಸಾಧ್ಯವಾಯಿತು. ಈಗಾಗಲೇ ಹಲವು ಕ್ಲಿಷ್ಟಕರ ಪ್ರಕರಣಗಳಲ್ಲಿ ಪ್ಲಾಸ್ಮಾ ಥೆರಪಿ ಉತ್ತಮ ಫಲಿತಾಂಶ ನೀಡಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರು ಪ್ಲಾಸ್ಮಾ ದಾನ ಮಾಡಲು ಮುಂದೆ ಬರಬೇಕು’ ಎಂದು ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು