ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ರೋಡ್‌ ಶೋ | ಒಂದು ಕಡೆ ಡಾಂಬರ್‌, ಇನ್ನೊಂದು ಕಡೆ ಗುಂಡಿ

Last Updated 11 ಮಾರ್ಚ್ 2023, 16:31 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಸಲುವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋ ನಡೆಸುವ ರಸ್ತೆಯ ಒಂದು ಬದಿಗಷ್ಟೇ ಡಾಂಬರು ಹಾಕಿದ್ದು, ಇನ್ನೊಂದು ಬದಿಯಲ್ಲಿ ಗುಂಡಿಗಳನ್ನು ಹಾಗೇ ಉಳಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಫಥದ ನಡುವೆ ರಸ್ತೆ ವಿಭಜಕವಿದ್ದು, ಪ್ರಧಾನಿ ಸಂಚರಿಸುವ ರಸ್ತೆಯ ಎಡಬದಿಗೆ ಮಾತ್ರ ಡಾಂಬರು ಹಾಕಿ ಬಣ್ಣ ಬಳಿಯಲಾಗಿದೆ. ಬಲಬದಿಯಲ್ಲಿ ಎಂದಿನಂತೆ ಗುಂಡಿಗಳಿದ್ದು ಬಣ್ಣ, ಅಲಂಕಾರ
ವಿಲ್ಲದಿರುವುದು ಗಮನ ಸೆಳೆಯುತ್ತಿದೆ. ಶನಿವಾರ ಸಿದ್ಧತೆಯಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಜನ ಈ ಬಗ್ಗೆ ಪ್ರಶ್ನಿಸುತ್ತಿದ್ದರು.

‘ಡಾಂಬರು ಹಾಕಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಇನ್ನೊಂದು ಬದಿಗೆ ಹಾಕುವುದಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಪ್ರಧಾನಿಗೆ ಮಾಡುತ್ತಿರುವ ಅವಮಾನ. ಸರ್ಕಾರದ ಹುಳುಕು ಎದ್ದು ಕಾಣಿಸುತ್ತಿದೆ’ ಎಂದು ನಾಗರಿಕರೊಬ್ಬರು ಆರೋಪಿಸಿದರು.

ಪ್ರವಾಸಿ ಮಂದಿರದಿಂದ ನಂದಾ ಟಾಕೀಸ್‌ವರೆಗೆ ಪ್ರಧಾನಿ 1.8 ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ. ಅಲ್ಲಿಂದ ಅಮರಾವತಿ ಹೋಟೆಲ್‌ವರೆಗೆ 6 ಕಿ.ಮೀ ಕಾರಿನಲ್ಲಿ ಮುಂದುವರಿಯುತ್ತಾರೆ. ಅವರು ಸಂಚರಿಸುವ ಅಷ್ಟು ದೂರಕ್ಕೂ ರಸ್ತೆಯ ಒಂದೇ ಬದಿಗಷ್ಟೇ ಡಾಂಬರು ಹಾಕಲಾಗಿದೆ.

ಮಂಡ್ಯದ ಫ್ಯಾಕ್ಟರಿ ವೃತ್ತದಲ್ಲಿ ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ರ ಪ್ರವೇಶದ್ವಾರ ಅಳವಡಿಸಿರುವುದು
ಮಂಡ್ಯದ ಫ್ಯಾಕ್ಟರಿ ವೃತ್ತದಲ್ಲಿ ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ರ ಪ್ರವೇಶದ್ವಾರ ಅಳವಡಿಸಿರುವುದು

‘ಉರಿಗೌಡ, ದೊಡ್ಡನಂಜೇಗೌಡ ಮಹಾದ್ವಾರ’: ಟಿಪ್ಪುವನ್ನು ಕೊಂದವ ರೆಂದೇ ಬಿಂಬಿಸಲಾಗಿರುವ ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಮಹಾದ್ವಾರವನ್ನು ರೋಡ್‌ ಶೋ ಮಾರ್ಗದಲ್ಲಿ ಅಳವಡಿಸಿರುವುದು ಚರ್ಚೆಗೆ ಕಾರಣವಾಗಿದೆ.

ರೋಡ್‌ ಶೋ ನಡೆಯುವ ಮಾರ್ಗ ದಲ್ಲಿರುವ ಸರ್‌. ಎಂ.ವಿಶ್ವೇಶ್ವರಯ್ಯ, ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಮಹಾದ್ವಾರದ ಜೊತೆಗೆ ಫ್ಯಾಕ್ಟರಿ ಸರ್ಕಲ್‌ನಲ್ಲಿ ಹಾಕಿರುವ ‘ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರ’ದ ಕುರಿತು ಪರ– ವಿರೋಧ ಚರ್ಚೆ ನಡೆದಿದೆ. ಈ ಚಿತ್ರ, ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

‘ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಟಿಪ್ಪು ಕೊಂದ ಪಾಪವನ್ನು ಒಕ್ಕಲಿಗ ಸಮುದಾಯದ ತಲೆಗೆ ಕಟ್ಟಲು ಮುಂದಾಗಿದ್ದಾರೆ. ಕಾಲ್ಪನಿಕ ವ್ಯಕ್ತಿಗಳನ್ನು ನಿಜವೆಂದು ಬಣ್ಣಿಸುತ್ತಿದ್ದಾರೆ’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಸುಲ್ತಾನ್‌ನನ್ನು ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಕೊಂದರು ಎಂದು ಬಿಜೆಪಿ, ಸಂಘ ಪರಿವಾರದ ಮುಖಂಡರು ವಾದಿಸುತ್ತಿದ್ದಾರೆ. ‘ಆದರೆ ಈ ಇಬ್ಬರು ವ್ಯಕ್ತಿಗಳು ಬದುಕಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

‘ಹೆದ್ದಾರಿ ಮೋದಿಯವರ ಕೊಡುಗೆ’
ಬೆಂಗಳೂರು:
ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ನರೇಂದ್ರ ಮೋದಿಯವರ ಕೊಡುಗೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಪ್ರತಿಪಾದಿಸಿದ್ದಾರೆ.

‘ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಯೋಜನೆ ಬಗ್ಗೆ ಕನಸು ಕಂಡಿದ್ದರು. ಆದರೆ, ನನಸಾಗಿರಲಿಲ್ಲ. ಶಂಕುಸ್ಥಾಪನೆಗೆ ಹಾಕಿದ್ದ ಕಲ್ಲುಗಳೇ ಮಾಯವಾಗುವ ಕಾಲವಿತ್ತು. ಆದರೆ, 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದ ಯೋಜನೆ ಈಗ ಮುಕ್ತಾಯವಾಗಿದೆ’ ಎಂದು ಹೇಳಿದರು. ಯೋಜನೆಯಿಂದ ಬೆಂಗಳೂರು, ಮೈಸೂರು ನಗರಗಳು ಹೆಚ್ಚು ಅಭಿವೃದ್ಧಿ ಆಗಲಿವೆ. ಪಕ್ಷದ ಶಾಸಕರಿಲ್ಲದ ಪ್ರದೇಶಗಳಿಗೂ ಬಿಜೆಪಿ ಸರ್ಕಾರ ತಾರತಮ್ಯವಿಲ್ಲದೆ ಯೋಜನೆ ನೀಡುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ಚುನಾವಣಾ ಗಿಮಿಕ್‌: ಸುರ್ಜೆವಾಲಾ
ಬೆಂಗಳೂರು:
‘ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಅಪೂರ್ಣಗೊಂಡಿರುವ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಅಲ್ಲದೆ, ಈ ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಮೂಲಕ ₹ 25 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.

‘ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳಿ ಅಪೂರ್ಣಗೊಂಡಿರುವ ಹೆದ್ದಾರಿ ಉದ್ಘಾಟನೆ ಮಾಡುತ್ತಿದ್ದು, ಟೋಲ್ ಹೆಸರಲ್ಲಿ ಕನ್ನಡಿಗರಿಂದ ಹಣ ಸಂಗ್ರಹಿಸಲು ಬಿಜೆಪಿ ಹೊರಟಿದೆ. ಈ ಹೆದ್ದಾರಿಯ ವಿನ್ಯಾಸ ಅವೈಜ್ಞಾನಿಕವಾಗಿದ್ದು, ನೀರು ಸುಗಮವಾಗಿ ಹರಿದುಹೋಗಲು ಅವಕಾಶ ಕಲ್ಪಿಸಿಲ್ಲ’ ಎಂದು ಅವರು ದೂರಿದ್ದಾರೆ.‌ ‘ಅಪೂರ್ಣಗೊಂಡಿರುವ ಹೆದ್ದಾರಿಯನ್ನು ಉದ್ಘಾಟಿಸುತ್ತಿರುವುದು ಚುನಾವಣೆ ಗಿಮಿಕ್ ಅಲ್ಲವೇ. ಸರ್ವೀಸ್ ರಸ್ತೆ ಪೂರ್ಣಗೊಳಿಸದೇ ರೈತರು, ಜನಸಾಮಾನ್ಯರ ರಕ್ಷಣೆ ಪಣಕ್ಕಿಟ್ಟಿರುವುದೇಕೆ. ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸದೇ, ಹೆದ್ದಾರಿಯ ಎರಡೂ ಬದಿಯ ರೈತರಿಗೆ ಸರಿಯಾದ ನೀರಾವರಿ ವ್ಯವಸ್ಥೆ ಕಲ್ಪಿಸದೇ ಇಷ್ಟು ತರಾತುರಿ ಏಕೆ’ ಎಂದು ಪ್ರಶ್ನಿಸಿದ್ದಾರೆ. ‘ಈ ಹೆದ್ದಾರಿ ನಿರ್ಮಾಣದ ವೆಚ್ಚ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹ 6,420 ಕೋಟಿಯಷ್ಟಿತ್ತು. ಬಿಜೆಪಿ ಅವಧಿಯಲ್ಲಿ ₹ 10 ಸಾವಿರ ಕೋಟಿಗೆ ಹೆಚ್ಚಾಗಿದೆ. ಹೆದ್ದಾರಿಯ ನಿರ್ಮಾಣದ ವೆಚ್ಚ ದುಪ್ಪಟ್ಟಾಗಲು ಕಾರಣವೇನೆಂದು ಪ್ರಧಾನ ಉತ್ತರಿಸಬೇಕು’ ಎಂದೂ ಅವರು ಸವಾಲು ಹಾಕಿದ್ದಾರೆ.

*
ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಪಥ. ಎಚ್.ಡಿ.ದೇವೇಗೌಡ ಮತ್ತು ಕಾಂಗ್ರೆಸ್‌ ಒಂದು ರೂಪಾಯಿ ನೀಡಿಲ್ಲ. ಈಗ ಯಾರಿಗೋ ಹುಟ್ಟಿದ ಮಗುವನ್ನು ನಮ್ಮ ಮಗುವೆನ್ನುತ್ತಿದ್ದಾರೆ.
-ಕೆ.ಎಸ್.ಈಶ್ವರಪ್ಪ, ಶಾಸಕ

*
ದಶಪಥ ಹೆದ್ದಾರಿ ಕಾಂಗ್ರೆಸ್, ಜೆಡಿಎಸ್ ಕನಸಿನ ಕೂಸೇನೋ ನಿಜ. ಅವರು ಬರಿ ಕನಸು ಕಂಡರು. ಆದರೆ, ಅದನ್ನು ನನಸು ಮಾಡಿದ್ದು ಮಾತ್ರ ನರೇಂದ್ರ ಮೋದಿ ಅವರ ಡಬಲ್ ಎಂಜಿನ್ ಸರ್ಕಾರ.
-ತೇಜಸ್ವಿ ಸೂರ್ಯ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT