ಗುರುವಾರ , ಮೇ 6, 2021
22 °C

ಬೆಳೆ ವಿಮೆ: ಕುಂದುಕೊರತೆ ಪರಿಹಾರ ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಮಾರ್ಗಸೂಚಿಯಂತೆ ರೈತರು, ಬ್ಯಾಂಕುಗಳು,
ವಿಮೆ ಕಂ‍ಪನಿಗಳು ಮತ್ತು ಸಂಬಂಧಿಸಿದ ಇಲಾಖೆಗಳ ಕುಂದು ಕೊರತೆ ಆಲಿಸಿ ಪರಿಹಾರ ಒದಗಿಸಲು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಕುಂದುಕೊರತೆ ಪರಿಹಾರ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಸಮಿತಿಗೆ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಅಧ್ಯಕ್ಷ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಸದಸ್ಯ ಕಾರ್ಯದರ್ಶಿಯಾಗಿದ್ದು, ಇತರ ಆರು ಮಂದಿ ಸದಸ್ಯರು ಇರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹ ಅಧ್ಯಕ್ಷ, ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಸದಸ್ಯ ಕಾರ್ಯದರ್ಶಿ ಮತ್ತು ಎಂಟು ಮಂದಿ ಸದಸ್ಯರು ಇರುತ್ತಾರೆ.

ರಾಜ್ಯಮಟ್ಟದ ಸಮಿತಿಗೆ ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರು, ತೋಟಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಹ ಅಧ್ಯಕ್ಷರು, ಕೃಷಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿ ಮತ್ತು ಇತರ 10 ಮಂದಿ ಸದಸ್ಯರು ಇರುತ್ತಾರೆ. ಈ ಮೂರು ಸಮಿತಿಗಳ ಸದಸ್ಯರಲ್ಲಿ ಜಿಲ್ಲಾ ಲೀಡ್‌ ಬ್ಯಾಂಕು ಅಧಿಕಾರಿಗಳು, ರೈತರ ಮತ್ತು ವಿಮೆ ಕಂಪನಿಗಳ ಪ್ರತಿನಿಧಿಗಳೂ ಇರುತ್ತಾರೆ.

ರೈತರು, ಬ್ಯಾಂಕುಗಳು, ವಿಮೆ ಕಂ‍ಪನಿಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಕುಂದುಕೊರತೆಗಳನ್ನು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಏಳು ದಿನಗಳ ಒಳಗೆ ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕು. ಸಾಧ್ಯವಾಗದೇ ಇದ್ದರೆ ಆ ದೂರನ್ನು ತಾಲ್ಲೂಕುಮಟ್ಟದ ಸಮಿತಿಯ ಮುಂದಿಡಬೇಕು. ಈ ಸಮಿತಿ ಏಳು ದಿನಗಳ ಒಳಗೆ ಪರಿಹರಿಸಬೇಕು. ಸಾಧ್ಯವಾಗದೇ ಇದ್ದರೆ ಜಿಲ್ಲಾ ಮಟ್ಟದ ಸಮಿತಿಗೆ ದೂರನ್ನು ಸಲ್ಲಿಸಬೇಕು. ಅಲ್ಲಿಯೂ ಪರಿಹಾರ ಸಾಧ್ಯವಾಗದೇ ಇದ್ದರೆ ರಾಜ್ಯಮಟ್ಟದ ಸಮಿತಿ ಪರಿಹಾರ ಕಂಡುಕೊಳ್ಳಬೇಕು. ಕುಂದುಕೊರತೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಸಮಿತಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು