ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರಿ ವರ್ತಿಸಿದ ಪೊಲೀಸರು: ಆರೋಪ

ವೈದ್ಯ, ವೈದ್ಯ ವಿದ್ಯಾರ್ಥಿಗಳ ವಿರುದ್ಧ ಗಾಂಜಾ ಮಾರಾಟ ಪ್ರಕರಣ
Last Updated 24 ಜನವರಿ 2023, 14:18 IST
ಅಕ್ಷರ ಗಾತ್ರ

ಮಂಗಳೂರು: ‘ನಗರದ ವೈದ್ಯಕೀಯ ಕಾಲೇಜುಗಳ ಕೆಲವು ವೈದ್ಯರು ಹಾಗೂ ವಿದ್ಯಾರ್ಥಿಗಳು ಗಾಂಜಾ ಮಾರಾಟದಲ್ಲಿ ಭಾಗಿ ಆಗದಿದ್ದರೂ, ಅವರ ವಿರುದ್ಧ ಗಾಂಜಾ ಮಾರಾಟದ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಪೊಲೀಸರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನಿಯಮ ಮೀರಿ ವರ್ತಿಸಿದ್ದಾರೆ’ ಎಂದು ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಮನೋರಾಜ್‌ ರಾಜೀವ ಹಾಗೂ ವಿಧಿವಿಜ್ಞಾನ ತಜ್ಞ ಡಾ.ಮಹಾಬಲೇಶ್ ಶೆಟ್ಟಿ ಆರೋಪಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನೋರಾಜ್‌ ರಾಜೀವ, ‘ಅಲ್ಪಪ್ರಮಾಣದಲ್ಲಿ ಗಾಂಜಾ ಸೇವನೆ ಮಾಡಿದವರನ್ನು ಕಾನೂನು ಕ್ರಮಕ್ಕೆ ಒಳಪಡಿಸುವುದರಿಂದ 1985ರ ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್‌ 64 ಎ ರಕ್ಷಣೆ ಒದಗಿಸುತ್ತದೆ. ನಮ್ಮದು ಕಲ್ಯಾಣ ರಾಜ್ಯ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಗಾಂಜಾ ಸೇವಿಸಿದವರನ್ನು ಸಂತ್ರಸ್ತರೆಂದು ಪರಿಗಣಿಸಬೇಕಿತ್ತು. ಅಲ್ಪ ಪ್ರಮಾಣದಲ್ಲಿ ಗಾಂಜಾ ಸೇವಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಂತೆ ಕೇಂದ್ರದ ಸಮಾಜ ಕಲ್ಯಾಣ ಇಲಾಖೆಯೂ ನಿರ್ದೇಶನ ನೀಡಿದ್ದು, ಇದನ್ನು ಕಡೆಗಣಿಸಲಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತರ ಪುನರ್ವಸತಿಗೆ ಕ್ರಮ ಕೈಗೊಳ್ಳುವ ಬದಲು, ಅವರಿಗೆ ಜಾಮೀನು ಸಿಗದಂತಹ ಸೆಕ್ಷನ್‌ಗಳನ್ನು ಹಾಕಿ ಜೈಲಿಗೆ ಕಳುಹಿಸಿದ್ದು ಸರಿಯಲ್ಲ’ ಎಂದರು.

‘ಗಾಂಜಾ ಮಾರಾಟದಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಗಾಂಜಾ ಸೇವಿಸಿದವರನ್ನು ಅದರ ಮಾರಾಟಗಾರರು ಎಂದು ಬಿಂಬಿಸಿದ್ದು ಸರಿಯಲ್ಲ. ರಿಯಾ ಚಕ್ರವರ್ತಿ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್‌ 27 ಎ ಪ್ರಕಾರ ನಿರ್ದಿಷ್ಟ ವಹಿವಾಟಿಗೆ ಹಣ ನೀಡಿದ್ದರೆ ಅದನ್ನು ಹಣಕಾಸು ನೆರವು ಎಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದೆ’ ಎಂದರು.

ಡಾ.ಮಹಾಬಲೇಶ್ ಶೆಟ್ಟಿ, ‘ಆರೋಪಿಗಳು ಗಾಂಜಾ ಸೇವಿಸಿರುವುದು ತಪಾಸಣೆಯಲ್ಲಿ ದೃಢಪಟ್ಟರೆ, ಅದನ್ನು ಖಚಿತಪಡಿಸಿಕೊಳ್ಳಲು ಮಾದರಿಯನ್ನು 24 ತಾಸಿನ ಒಳಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಕೆಲವೊಮ್ಮೆ ಬೇರೆ ಔಷಧ ಸೇವಿಸಿದಾಗಲೂ ಪ್ರಾಥಮಿಕ ತಪಾಸಣೆಯಲ್ಲಿ ಸಕಾರಾತ್ಮಕ ಫಲಿತಾಂಶ ಬರಬಹುದು. ಈ ಪ್ರಕ್ರಿಯೆಯನ್ನೇ ಪೊಲೀಸರು ಸರಿಯಾಗಿ ನಿರ್ವಹಿಸಿಲ್ಲ’ ಎಂದು ಆರೋಪಿಸಿದರು.

‘ಮಾದಕ ಪದಾರ್ಥ ಸೇವನೆ ಪರೀಕ್ಷೆಯನ್ನು ಪರಿಚಯಿಸಿದ್ದೇ ನಾನು. ಸಿಬಿಐ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಕರ್ನಾಟಕ ಪೊಲೀಸ್‌, ಸಿಐಡಿ ಹಾಗೂ ಕೇರಳ ಪೊಲೀಸ್‌ ಇಲಾಖೆಗಳಿಗೂ ಮಾದಕ ಪದಾರ್ಥ ಸೇವನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ನೆರವಾಗುತ್ತಿದ್ದೇನೆ. ಎನ್‌ಡಿಪಿಎಸ್‌ ಕಾಯ್ದೆಗೆ ಸಂಬಂಧಿಸಿದ 4 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳುತ್ತಿರುವವ ನಾನು. ಆದರೆ, ಸಂತ್ರಸ್ತ ವಿದ್ಯಾರ್ಥಿಗಳನ್ನೇ ಆರೋಪಿಗಳೆಂದು ಬಿಂಬಿಸುವುದನ್ನು ಒಪ್ಪುವುದಿಲ್ಲ. ಇದರಿಂದ ವಿದ್ಯಾರ್ಥಿಗಳನ್ನು ಮಾದಕ ಪದಾರ್ಥ ಸೇವನೆಯ ವ್ಯಸನದಿಂದ ಮುಕ್ತಗೊಳಿಸುವ ಉದ್ದೇಶವೂ ಈಡೇರದು’ ಎಂದು ಸ್ಪಷ್ಟಪಡಿಸಿದರು.

‘ಮಂಗಳೂರಿನ ಬ್ರ್ಯಾಂಡ್‌ಗೆ ಧಕ್ಕೆ’

‘ಪ್ರಕರಣದಲ್ಲಿ ಗಾಂಜಾ ಸೇವಿಸಿದ ಆರೋಪಿಗಳನ್ನು ಗಾಂಜಾ ಮಾರಾಟಗಾರರು ಎಂದು ಬಿಂಬಿಸಿ ಅವರ ಭಾವಚಿತ್ರ, ವಿಳಾಸವನ್ನು ಬಹಿರಂಗಪಡಿಸಲಾಗಿದೆ. ಮಂಗಳೂರಿನ ವೈದ್ಯಕೀಯ ಕಾಲೇಜುಗಳ ಹೆಸರಿಗೆ ಮಸಿ ಬಳಿಯಲಾಗಿದೆ. ಇದರಿಂದ ಮಂಗಳೂರಿನ ಬ್ರ್ಯಾಂಡ್‌ ಮೌಲ್ಯಕ್ಕೂ ಧಕ್ಕೆ ಉಂಟಾಗಿದೆ. ಇಷ್ಟೆಲ್ಲಾ ಆದರೂ, ಇಲ್ಲಿನ ಶಾಸಕರಾದ ವೇದವ್ಯಾಸ ಕಾಮತ್‌, ಡಾ.ಭರತ್‌ ಶೆಟ್ಟಿ, ಯು.ಟಿ.ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಧ್ವನಿ ಎತ್ತದಿರುವುದು ಆಶ್ಚರ್ಯ ತಂದಿದೆ’ ಎಂದು ಮನೋರಾಜ್‌ ರಾಜೀವ ಹಾಗೂ ಡಾ.ಮಹಾಬಲೇಶ್ ಶೆಟ್ಟಿ ತಿಳಿಸಿದರು.

‘ಆರೋಪಿಗಳಲ್ಲಿ ಬಹುತೇಕರು ಮೆರಿಟ್‌ ಆಧಾರದಲ್ಲಿ ವೈದ್ಯಕೀಯ ಸೀಟು ಗಳಿಸಿದವರು. ಈ ಪ್ರಕರಣದಲ್ಲಿ ಅವರ ವೈದ್ಯಕೀಯ ಹಿನ್ನೆಲೆಯನ್ನು ಜಗಜ್ಜಾಹೀರುಗೊಳಿಸಿ ಭವಿಷ್ಯಕ್ಕೆ ಕಲ್ಲುಹಾಕುವ ಅಗತ್ಯವಾದರೂ ಏನಿತ್ತು’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT