ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರು ಸತ್ಯಾಸತ್ಯತೆ ಪರಿಗಣಿಸಿಲ್ಲ: ಬಸವರಾಜ ಹೊರಟ್ಟಿ

ಊರಿನಲ್ಲಿಲ್ಲದಿದ್ದರೂ ಜಾತಿನಿಂದನೆ ಪ್ರಕರಣ ದಾಖಲು ಕುರಿತು ಹೊರಟ್ಟಿ ಬೇಸರ
Last Updated 30 ಜನವರಿ 2022, 2:39 IST
ಅಕ್ಷರ ಗಾತ್ರ

ಧಾರವಾಡ: ‘ಜಾತಿನಿಂದನೆ ಹಾಗೂ ಹಲ್ಲೆ ಪ್ರಕರಣ ದಾಖಲಿಸುವಾಗ ಪೊಲೀಸರು ಸತ್ಯಾಸತ್ಯತೆ ಪರಿಗಣಿಸಿಲ್ಲ. ಇದು ಪೊಲೀಸರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಮುಗದದಲ್ಲಿರುವ ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ ಸೇರಿದ ಶಾಲೆಯಲ್ಲಿ ಜ.25ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘1996ರಿಂದ ಸರ್ವೋದಯ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷನಾಗಿದ್ದೇನೆ. ಹೀಗಾಗಿ ಶಾಲೆಯ ಪ್ರಾಂಶುಪಾಲರ ಕೊಠಡಿಯಲ್ಲಿ ನನ್ನ ಭಾವಚಿತ್ರ ಹಾಕಿದ್ದಾರೆ. ಆದರೆ, ಅಲ್ಲಿಗೆ ಭೇಟಿ ನೀಡಿದ ವಾಲ್ಮೀಕಿ ಸಮಾಜದ ಕೆಲವರು ದಾಂದಲೆ ನಡೆಸಿ, ಫೋಟೊ ಕಿತ್ತುಹಾಕಿ ಅದನ್ನು ಚಪ್ಪಲಿ ಕಾಲಿನಲ್ಲಿ ತುಳಿದಿದ್ದಾರೆ. ಇದನ್ನು ಪ್ರಶ್ನಿಸಿದ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದಾರೆ’ ಎಂದು ಘಟನೆ ವಿವರಿಸಿದರು

‘ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದನ್ನು ಕಂಡ ವಿದ್ಯಾರ್ಥಿಗಳು ಭಾವೋದ್ರೇಕರಾಗಿ ಬಂದವರ ಕಾರಿನ ಗಾಜು ಒಡೆದಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಶಾಲೆಯಿಂದ ಬಂದ ಮಾಹಿತಿ ಆಧರಿಸಿನಾನೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಸೂಕ್ತ ಭದ್ರತೆ ಒದಗಿಸುವಂತೆ ತಿಳಿಸಿದೆ. ಆದರೆ, ಪ್ರಕರಣ ಕುರಿತು ಪ್ರಾಂಶುಪಾಲರು ದೂರು ನೀಡಿದ್ದರೂ, ಗ್ರಾಮೀಣ ಠಾಣೆಯಲ್ಲಿ ದಾಖಲಿಸಿಲ್ಲ. ಎದುರುಗಾರರ ದೂರನ್ನು ದಾಖಲಿಸಿದ್ದರ ಹಿಂದೆ ಹುನ್ನಾರವೇ ಇರುವ ಶಂಕೆ ಇದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ನನ್ನ ವಿರುದ್ಧ ರಾತ್ರಿ 11.30ಕ್ಕೆ ಪ್ರಕರಣ ದಾಖಲಾಗಿದ್ದರೂ, ಮಧ್ಯರಾತ್ರಿ 3ಕ್ಕೆ ಕರೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್, ತಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವಿಷಯದಲ್ಲಿ ತಮ್ಮ ಮಾರ್ಗದರ್ಶನ ಅಗತ್ಯ ಎಂದರು. ಸಭಾಪತಿಯಾಗಿ ನನ್ನ ಪರಿಸ್ಥಿತಿಯೇ ಹೀಗಾದರೆ, ಇನ್ನು ಇಂಥ ವಿಷಯದಲ್ಲಿ ಸಾಮಾನ್ಯ ಜನರ ಪಾಡೇನು ಎಂಬ ಚಿಂತೆ ಕಾಡುತ್ತಿದೆ. ಸ್ಥಳದಲ್ಲಿ ನಾನಿಲ್ಲದಿದ್ದರೂ ಪ್ರಕರಣ ದಾಖಲಾಗಿದೆ. ದೂರು ಸತ್ಯಕ್ಕೆ ದೂರವಾಗಿದ್ದು, ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯದಲ್ಲಿ ಕೋರಲಾಗಿದೆ’ ಎಂದು ಹೊರಟ್ಟಿ ಹೇಳಿದರು.

ಈ ಕುರಿತು ಪ್ರತಿಕ್ರಿಯೆಗೆ ಎಸ್‌ಪಿ ಕೃಷ್ಣಕಾಂತ್ ಅವರಿಗೆ ಕರೆ ಮಾಡಲಾಯಿತಾದರೂ, ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT