ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಸಿಬಿಐ ತನಿಖೆಗೆ ಆಗ್ರಹ

ಸ್ವಾತಂತ್ರ್ಯ ಉದ್ಯಾನದಲ್ಲಿ ಅಭ್ಯರ್ಥಿಗಳ ಪ್ರತಿಭಟನೆ l ತಾತ್ಕಾಲಿಕ ಪಟ್ಟಿ ರದ್ದುಪಡಿಸಿ ಮರು ಪರೀಕ್ಷೆ ನಡೆಸಲು ಒತ್ತಾಯ
Last Updated 13 ಏಪ್ರಿಲ್ 2022, 18:44 IST
ಅಕ್ಷರ ಗಾತ್ರ

ಬೆಂಗಳೂರು: ‘ಪಿಎಸ್‌ಐ 545 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಕೂಡಲೇ ಸಿಬಿಐಗೆ ವಹಿಸಬೇಕು. ಅಕ್ರಮ ಮಾರ್ಗದ ಮೂಲಕ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಜೈಲಿಗೆ ಕಳುಹಿಸಬೇಕು’ ಎಂದು ನೊಂದ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭ್ಯರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಸ್ವಚ್ಛವಾಗಿದ್ದರೆ ಆಯ್ದ ಸರ್ಕಾರ; ಹಾಕಿರಿ ಜೈಕಾರ, ಸರ್ಕಾರವೇ ನಡೆಸಿದರೆ ಭ್ರಷ್ಟಾಚಾರ; ತೋರಿಸಿರಿ ಪ್ರಜಾಪ್ರಭುತ್ವದ ಅಧಿಕಾರ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

‘ಪಿಎಸ್‌ಐ ಹುದ್ದೆಗೆ ನೇಮಕವಾಗಿರುವವರ ತಾತ್ಕಾಲಿಕ ಪಟ್ಟಿ ರದ್ದುಪಡಿಸಬೇಕು. ಮರುಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು. ಅದರ ದಿನಾಂಕವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ವಾರದೊಳಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಇದೇ 20ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಿದ್ದೇವೆ’ ಎಂದು ಎಚ್ಚರಿಸಿದರು.

‘ಇನ್ನು ಮುಂದೆ ಪರೀಕ್ಷಾ ಕೇಂದ್ರಗಳ ಸುತ್ತ ಸಿಸಿಟಿವಿ ಕ್ಯಾಮೆರಾ ಹಾಗೂ ಜಾಮರ್‌ಗಳನ್ನು ಅಳವಡಿಸಬೇಕು. ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಬಯಸುವವರ ವಯೋಮಿತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ನೋಂದಣಿ ಸಂಖ್ಯೆಯನ್ನು ಅಕ್ಕಪಕ್ಕದಲ್ಲೇ ಹಾಕಿಕೊಡುತ್ತಿದ್ದಾರೆ ಎಂಬ ಅನುಮಾನ ಇದೆ. ಅದನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಅಭ್ಯರ್ಥಿ ಇಚ್ಛಿಸಿದಲ್ಲಿತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ 30 ದಿನಗಳೊಳಗೆಆರ್‌ಟಿಐ ಅಡಿ ನಕಲಿ ಉತ್ತರ ಪತ್ರಿಕೆಗಳನ್ನು ಒದಗಿಸಬೇಕು. ಅಭ್ಯರ್ಥಿಗಳು ಸ್ಥಳೀಯ ಕೇಂದ್ರಗಳಲ್ಲೇ ಪರೀಕ್ಷೆ ಬರೆಯುವುದಕ್ಕೆ ಕಡಿವಾಣ ಹಾಕಬೇಕು. ದೈಹಿಕ ಪರೀಕ್ಷೆ ವೇಳೆಯೂ ಅಕ್ರಮಗಳು ನಡೆಯುತ್ತಿದೆ. ಅದನ್ನೂ ತಡೆಯಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪ್ರತಿಭಾವಂತ ಅಭ್ಯರ್ಥಿಗಳ ಭವಿಷ್ಯ ನಾಶವಾಗುತ್ತಿದೆ. ಇದನ್ನು ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು’ ಎಂದು ಅಭ್ಯರ್ಥಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT