ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ದೆಹಲಿ ಭೇಟಿ ಕುತೂಹಲ?

Last Updated 23 ಜೂನ್ 2022, 1:06 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಢೀರನೇ ಎರಡು ದಿನಗಳ ದೆಹಲಿ ಪ್ರವಾಸ ಕೈಗೊಂಡಿರುವುದು ಬಿಜೆಪಿ ಪಡಸಾಲೆಯಲ್ಲಿ ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಎರಡು ದಿನ ರಾಜ್ಯ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬೊಮ್ಮಾಯಿ
ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ವಾರದ ಹಿಂದಷ್ಟೇ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಳೂರಿಗೆ ಬಂದು, ಚರ್ಚೆಯನ್ನೂ ನಡೆಸಿದ್ದರು. ಅದಕ್ಕೆ ಒಂದು ದಿನ ಮೊದಲಷ್ಟೇ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಕೈಗೊಂಡು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಹಾಗೂ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.

ದೆಹಲಿಗೆ ಬರುವಂತೆ ಬುಲಾವ್‌ ಬಂದ ಬೆನ್ನಲ್ಲೇ ಬೊಮ್ಮಾಯಿಯವರ ಭೇಟಿ ನಿಗದಿಯಾಗಿದೆ. ಗಾಂಧಿಭವನದಲ್ಲಿ ನಡೆದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ, ವೇದಿಕೆಯ ಮೇಲಿದ್ದಾಗಲೇ ಸತತ ದೂರವಾಣಿ ಕರೆಯನ್ನು ಸ್ವೀಕರಿಸಿ, ಮಾತನಾಡುತ್ತಲೇ ಇದ್ದರು. ಮೂರುಗಂಟೆ ಬಳಿಕ ಕೆಲವು ಗಂಟೆಗಳ ಕಾಲ ಆಪ್ತ ಸಿಬ್ಬಂದಿ, ಬೆಂಗಾವಲು ಪಡೆಯನ್ನು ಬಿಟ್ಟ ಅವರು, ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ದಿನದ ಈ ಬೆಳವಣಿಗಗಳು ರಾಜಕೀಯ ಕುತೂಹಲಕ್ಕೆ ಕಾರಣವಾಗಿವೆ.

ಗುರುವಾರ ಮಧ್ಯಾಹ್ನ ದೆಹಲಿಗೆ ತೆರಳಿರುವ ಅವರು, ಶುಕ್ರವಾರ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಅವರ ಪ್ರವಾಸದ ಪಟ್ಟಿಯಲ್ಲಿ ಕೇಂದ್ರ ಸಚಿವರ ಭೇಟಿ ಎಂದು ನಮೂದಿಸಲಾಗಿದೆ.

ಬೊಮ್ಮಾಯಿ ಅವರು ದಿಢೀರ್ ದೆಹಲಿಗೆ ತೆರಳುತ್ತಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿನ ಮತ್ತೆ ಆಸೆ ಗರಿಗೆದರಿದೆ. ಈ ಬಾರಿ ವಿಸ್ತರಣೆ ಅಥವಾ ಪುನರ್‌ರಚನೆ ಎರಡರಲ್ಲಿ ಯಾವುದೋ ಒಂದು ಆಗಿಯೇ ತೀರುತ್ತದೆ ಎಂಬ ವಿಶ್ವಾಸ ಹಲವು ಶಾಸಕರಲ್ಲಿ ಮೂಡಿದೆ.
‘ದೆಹಲಿಗೆ ಹೋಗುತ್ತಿದ್ದೇನೆ. ಈ ಭೇಟಿ ಫಲಪ್ರದವಾಗಲಿದೆ’ ಎಂದು ಬೊಮ್ಮಾಯಿ ತಮ್ಮ ಶಾಸಕರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಮೋದಿ ಬಳಿ ಪ್ರಸ್ತಾಪ: ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗೆ ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟ ವಿಸ್ತರಣೆಯ ವಿಚಾರವನ್ನು ಪ್ರಸ್ತಾಪಿಸಿದ್ದು, ‘ಆಗಲಿ, ತ್ವರಿತವಾಗಿ ಮಾಡಿ, ಅದಕ್ಕೂ ಮುನ್ನ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಮಾತನಾಡಿ’ ಎಂದು ಮೋದಿ ಅವರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಬೊಮ್ಮಾಯಿ ಸಂಪುಟದಲ್ಲಿ ಈಗ ಒಟ್ಟು 5 ಸಚಿವ ಸ್ಥಾನಗಳು ಖಾಲಿ ಇದ್ದು, ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕಿದರೆ ಶುಕ್ರವಾರ ಸಂಜೆ ಅಥವಾ ಶನಿವಾರವೇ ಪ್ರಮಾಣ ವಚನ ಸ್ವೀಕಾರ ನಡೆಯಲೂಬಹುದು ಎಂದೂ ಮೂಲಗಳು ಹೇಳಿವೆ.

ರಾಷ್ಟ್ರಪತಿ ಚುನಾವಣೆ ಕಾರಣ

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲು ಬಿಜೆಪಿ ಆಡಳಿತವಿರುವ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳನ್ನು ದೆಹಲಿಗೆ ಬರುವಂತೆ ಸೂಚಿಸಲಾಗಿದೆ. ಈ ಕಾರಣಕ್ಕಾಗಿ ಅವರು ದೆಹಲಿಗೆ ಹೋಗುತ್ತಿದ್ದಾರೆ. ಶುಕ್ರವಾರ ದ್ರೌಪದಿಯವರು ನಾಮಪತ್ರ ಸಲ್ಲಿಸಲಿದ್ದಾರೆ. ಆ ಬಳಿಕ ಬೊಮ್ಮಾಯಿ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT