ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿಗಳ ಲೆಕ್ಕದಲ್ಲಿ ರಾಜಕಾರಣಿಗಳ ಆದಾಯ ಏರಿಕೆ

ಶಾಂತವೇರಿ ಗೌಪಾಲಗೌಡರ ಜನ್ಮ ಶತಮಾನೋತ್ಸವದಲ್ಲಿ ರಮೇಶ್‌ ಕುಮಾರ್
Last Updated 28 ಜನವರಿ 2023, 19:42 IST
ಅಕ್ಷರ ಗಾತ್ರ

ಬೆಂಗಳೂರು: ಬೆಲೆ ಏರಿಕೆ, ಆದಾಯ ಕುಸಿತದಿಂದ ಸಾಮಾನ್ಯ ಜನರ ಬದುಕು ಪಾತಾಳ ಸೇರುತ್ತಿದ್ದರೆ, ರಾಜಕಾರಣಿಗಳ ಆದಾಯ ಕೋಟಿ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಅವರು ಈ ಗುಟ್ಟನ್ನು ತಮ್ಮ ಮಕ್ಕಳಿಗಷ್ಟೇ ಬಿಟ್ಟುಹೋಗುತ್ತಾರೆ ಎಂದು ಶಾಸಕ ರಮೇಶ್‌ ಕುಮಾರ್ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾಜವಾದಿ ಶಾಂತವೇರಿ ಗೌಪಾಲಗೌಡರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೊದಲ ಬಾರಿ ಸ್ಪರ್ಧಿಸಿದಾಗ ಸಾಧಾರಣ ಆಸ್ತಿ ಹೊಂದಿದ್ದ ರಾಜಕಾರಣಿ, ಆಯ್ಕೆಯಾದ ಐದು ವರ್ಷಗಳ ನಂತರ ₹ 380 ಕೋಟಿ ಆಸ್ತಿ ನಮೂದಿಸುತ್ತಾನೆ. ಆದಾಯ ಪ್ರತಿ ಐದು ವರ್ಷಗಳಿಗೆ ಒಮ್ಮೆ ಏರಿಕೆಯಾಗುತ್ತಲೇ ಸಾಗುತ್ತದೆ. ಈ ಕುರಿತು ಯಾವ ತನಿಖಾ ಸಂಸ್ಥೆಗಳೂ ಪ್ರಶ್ನಿಸುವುದಿಲ್ಲ. ಮೂಲ ಪತ್ತೆ ಹಚ್ಚುವುದಿಲ್ಲ ಎಂದು ದೂರಿದರು.

‘ಗೋಪಾಲಗೌಡರು ಮೌಲ್ಯಗಳ ಅಗ್ರಹಾರ. ಅವರ ವಿಚಾರಗಳು ಇಂದಿಗೂ ಶಾಶ್ವತ. ಅವರ ಹೆಸರು ಪ್ರಸ್ತಾಪಿಸದೇ ಕರ್ನಾಟಕದ ಇತಿಹಾಸ ಪೂರ್ಣವಾಗದು. ಆರಿಸಿ ಕಳುಹಿಸಿದ ಜನರ ಬೇಡಿಕೆಗಳನ್ನು ಸದನದಲ್ಲಿ ಇಟ್ಟು ನ್ಯಾಯ ಕೊಡಿಸುತ್ತಿದ್ದರು. ಬದುಕು, ಸೈದ್ಧಾಂತಿಕ ನಿಲುವು ಒಂದೇ ಆಗಿದ್ದವು. ಇಂದು ಕಳಿಸುವವರಿಗೂ, ಒಳಗೆ ಬಂದವರಿಗೂ ಸಂಬಂಧವೇ ಇರುವುದಿಲ್ಲ. ಏನು ಮಾತಾಡಿದರು, ಏನು ಮಾಡಿದರು ಅನ್ನುವುದು ಯಾರಿಗೂ ಬೇಡವಾಗಿದೆ. ಸರ್ಕಾರದ ಹಂಗಿಲ್ಲದೆ, ಭಯದ ನೆರಳಿಲ್ಲದೆ. ಮತಗಳ ಲೆಕ್ಕಾಚಾರವಿಲ್ಲದೆ ನಿರ್ಮಲ ಮನಸ್ಸಿನಿಂದ ಕೆಲಸ ಮಾಡುವ, ನಿರ್ಭೀತ ಶಾಸಕರು ವಿರಳವಾಗಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಒಂದೇ ಆಗಿವೆ ಎಂದರು.

‘ಜಾತಿ ನೋಡಿ ಮತಹಾಕುವುದಾದರೆ ನಿಮ್ಮ ಮತವೇ ಬೇಡ’ ಎಂದು ಗೋಪಾಲಗೌಡರು ತಮ್ಮ ಕ್ಷೇತ್ರದ ಜನರಿಗೆ ಹೇಳುತ್ತಿದ್ದರು. ಅವರ ನಂತರ ಜಾತಿ ಆಧಾರದಲ್ಲೇ ಚುನಾವಣೆಗಳು ನಡೆದಿವೆ. ಇಂದು ಜಾತಿ ಇರಲಿ, ಉಪ‌ ಜಾತಿಗಳೂ ಮುನ್ನೆಲೆಗೆ ಬಂದಿವೆ’ ಎಂದು ಹೇಳಿದರು.

ಶತಮಾನೋತ್ಸವ ಆಚರಣಾ ಸಮಿತಿ ಸದಸ್ಯ ಕೆ.ಟಿ.ನಾಗರಾಜ್‌ ಪ್ರಾಸ್ತಾವಿಕ ಮಾತನಾಡಿದರು. ತಿಮ್ಮರಾಜ,
ಶಿವಾನಂದ ಕುಗ್ವೆ ಗೀತೆಗಳನ್ನು ಹಾಡಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್, ಸಮಿತಿಯ ಪ್ರಮುಖರಾದ ಜಿ.ಎ. ಪುರುಷೋತ್ತಮ ಗೌಡ, ಮಣಿ ಹೆಗಡೆ, ಡಾ.ಅರುಣ್‌ ಹೊಸಕೊಪ್ಪ, ರೇಖಾ ವಿಷ್ಣುಮೂರ್ತಿ, ನಳಿನಿ ವೆಂಕಪ್ಪಗೌಡ, ಸಿ.ಕೆ.ರಾಮೇಗೌಡ, ‌ಗೋ‍ಪಾಲಗೌಡರ ಮಕ್ಕಳಾದ ರಾಮಮನೋಹರ, ಇಳಾಗೀತಾ ಉಪಸ್ಥಿತರಿದ್ದರು.

ಕಲಾಪಗಳಿಗೆ ಕನ್ನಡಿಯಾಗಿದ್ದ ‘ಪ್ರಜಾವಾಣಿ’

ದಶಕಗಳ ಹಿಂದೆ ನಡೆಯುತ್ತಿದ್ದ ಶಾಸನ ಸಭೆಯಲ್ಲಿ ಮೌಲ್ಯಯುತ ಚರ್ಚೆಗಳಾಗುತ್ತಿದ್ದವು. ಸದಸ್ಯರ ಪ್ರಶ್ನೆಗಳನ್ನು ಸಚಿವರು ಗಂಭೀರವಾಗಿ ಪರಿಗಣಿಸುತ್ತಿದ್ದರು. ಜನರು ಬೆಳಿಗ್ಗೆ ‘ಪ್ರಜಾವಾಣಿ’ ಕೈಗೆತ್ತಿಕೊಂಡರೆ ಇಡೀ ಸದನದಲ್ಲಿ ನಡೆದ ವಿಷಯಗಳು ಅರ್ಥವಾಗಿ ಬಿಡುತ್ತಿದ್ದವು. ಅಷ್ಟೊಂದು ಸೊಗಸಾಗಿ ವರದಿಗಳನ್ನು ಕಟ್ಟಿಕೊಡಲಾಗುತ್ತಿತ್ತು. ಇಂದು ಸದನಲ್ಲಿ ನಡೆಯುವ ಬೆಳವಣಿಗೆಗಳು, ಬಳಸುವ ಪದಗಳನ್ನು ಕೇಳಲು ಆಗದು, ಅದನ್ನೇ ಮಾಧ್ಯಮಗಳು ವಿಜೃಂಭಿಸುತ್ತವೆ ಎಂದು ರಮೇಶ್‌ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT