ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಣ್ಣ ಪತ್ರ, ರುಪ್ಸಾ ಪತ್ರ ಎವಿಡೆನ್ಸ್‌ ಅಲ್ವಾ?: ಸಿದ್ದರಾಮಯ್ಯ ಪ್ರಶ್ನೆ

ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ
Last Updated 13 ಮಾರ್ಚ್ 2023, 17:25 IST
ಅಕ್ಷರ ಗಾತ್ರ

ಹಾವೇರಿ: ಭ್ರಷ್ಟಾಚಾರವಾಗಿದ್ದರೆ ದಾಖಲೆ ಕೊಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೇಳ್ತಾರೆ. 40% ಕಮಿಷನ್‌ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಲಂಚಾವತಾರದ ಬಗ್ಗೆ ರುಪ್ಸಾ ಪತ್ರ ಬರೆದಿದ್ದು.. ಇವೆಲ್ಲವೂ ದಾಖಲೆಗಳಲ್ಲವಾ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.

ರಾಣೆಬೆನ್ನೂರು ಪಟ್ಟಣದಲ್ಲಿ ಸೋಮವಾರ ನಡೆದ ‘ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ’ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ನಮ್ಮ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ 40% ಲಂಚ ತೆಗೆದುಕೊಳ್ಳುವ ಸರ್ಕಾರ ಎಂಬ ಅಪಖ್ಯಾತಿ ಬಿಜೆಪಿಗೆ ಬಂದಿದೆ. ಇಷ್ಟೆಲ್ಲಾ ಆದರೂ ಬೊಮ್ಮಾಯಿ ಭಂಡತನದಿಂದ ದಾಖಲೆ ಕೊಡಿ ಅಂತ ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಕಮಿಷನ್‌ ಕೊಡೋಕೆ ಆಗದೆ ಆತ್ಮಹತ್ಯೆ ಮಾಡಿಕೊಂಡರು. ಡೆತ್‌ ನೋಟ್‌ನಲ್ಲಿ ನನ್ನ ಸಾವಿಗೆ ಈಶ್ವರಪ್ಪ ನೇರ ಕಾರಣ ಅಂತ ಬರೆದಿತ್ತು. ಇದು ಎವಿಡೆನ್ಸ್ ಅಲ್ಲವಾ? ಈಶ್ವರಪ್ಪ ವಿಧಿ ಇಲ್ಲದೇ ರಾಜೀನಾಮೆ ಕೊಟ್ಟರು. ಸಂತೋಷ್ ಪಾಟೀಲ್ ಸಾವಿಗೆ ಬಿಜೆಪಿ ಸರ್ಕಾರ ಕಾರಣ ಎಂದು ಆರೋಪಿಸಿದರು.

ನಂದೀಶ್ ಎಂಬ ಇನ್‌ಸ್ಪೆಕ್ಟರ್‌ ₹ 80 ಲಕ್ಷ ಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ಮೃತದೇಹ ನೋಡೋಕೆ ಹೋಗಿದ್ದ ಎಂಟಿಬಿ ನಾಗರಾಜ್‌ ಅವರು, ‘ಪಾಪ ₹ 70-80 ಲಕ್ಷ ಕೊಟ್ಟು ಸಾಲ ಮಾಡಿ ಬಂದಿದ್ದ, ಬೇರೆ ದಾರಿಯಿಲ್ಲದೆ ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಿದ್ದು ವೈರಲ್ ಆಗಿತ್ತು. ಇದು ಎವಿಡೆನ್ಸ್ ಅಲ್ಲವಾ ಬೊಮ್ಮಾಯಿ?. ಮಾಡಾಳ್ ವಿರೂಪಾಕ್ಷಪ್ಪ ಯಡಿಯೂರಪ್ಪ ಅವರಿಗೆ ಖಾಸಾ. ಪ್ರಶಾಂತ್ ಮಾಡಾಳ್ ಅಪ್ಪನ ಪರವಾಗಿ ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಹಾಕಿಕೊಂಡ. ಇದಕ್ಕಿಂತ ಎವಿಡೆನ್ಸ್‌ ಬೇಕಾ? ಎಂದು ಪ್ರಶ್ನಿಸಿದರು.

ಸಿಎಂ ಸೂಚನೆ ಇತ್ತು: ಮಾಡಾಳ್ ನಾನು ಮನೆಯಲ್ಲಿಯೇ ಇದ್ದ ಎಂದ. ಆದರೂ ಅವರನ್ನು ಅರೆಸ್ಟ್ ಮಾಡಲಿಲ್ಲ. ಪೊಲೀಸರಿಗೆ ಮುಖ್ಯಮಂತ್ರಿಯವರ ಸೂಚನೆ ಇತ್ತು. ಬೊಮ್ಮಾಯಿಯವರಿಗೆ ಒಂದು ಸೆಕೆಂಡ್ ಕೂಡಾ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಜರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್‌ ಮಾತನಾಡಿ, 140 ಕ್ಷೇತ್ರಗಳಲ್ಲಿ ನಾವು ಮುಂದೆ ಇದ್ದೇವೆ. ಹಾವೇರಿ ಜಿಲ್ಲೆಯಲ್ಲಿ ನಮ್ಮ ಸರ್ವೆ ಪ್ರಕಾರ 6ಕ್ಕೆ 6 ಸ್ಥಾನಗಳನ್ನು ಗೆಲ್ಲುತ್ತೇವೆ. ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ ಕರ್ನಾಟಕಕ್ಕೆ ನೂರು ಸಾರಿ ಬಂದ್ರು ನಾವೇ ರಾಜ್ಯದಲ್ಲಿ ಗೆದ್ದು, ಅಧಿಕಾರಕ್ಕೆ ಬರುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸುನಾಮಿ ಇದೆ ಎಂದರು.

ರೌಡಿಗೆ ಕೈಮುಗಿದ ಪ್ರಧಾನಿ: ಒಬ್ಬ ಪುಡಿ ರೌಡಿಗೆ ಪ್ರಧಾನಿ ಮೋದಿ ಅವರು ಕೈ ಮುಗಿಯುತ್ತಾರೆ. 23 ಸಾವಿರ ರೌಡಿಗಳ ಪ್ರಕರಣಗಳನ್ನು ತೆಗೆದು ಹಾಕಿದ್ದು ಬಿಜೆಪಿ ಸರ್ಕಾರ. ರೌಡಿ, ಕೇಡಿಗಳ ರಾಜ್ಯ ಮಾಡಲು ಹೊರಟಿದ್ದೀರಾ ನೀವು? ಎಲ್ಲಾ ರೌಡಿಗಳನ್ನು ತಗೊಂಡು ಬನ್ನಿ, ರಾಜ್ಯದಲ್ಲಿ ಕಾಂಗ್ರೆಸ್ ನಿಲ್ಲಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಭಾವೋದ್ವೇಗದಿಂದ ನುಡಿದರು.

ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸತೀಶ್‌ ಜಾರಕಿಹೊಳಿ, ಜಮೀರ್‌ ಅಹಮದ್‌, ಕೆ.ಬಿ.ಕೋಳಿವಾಡ, ಅಜ್ಜಂಪೀರ್‌ ಖಾದ್ರಿ, ಎಂ.ಎಂ. ಹಿರೇಮಠ, ಬಸವರಾಜ ಶಿವಣ್ಣನವರ, ಡಿ.ಬಸವರಾಜ, ಸಂಜೀವಕುಮಾರ ನೀರಲಗಿ, ಕೊಟ್ರೇಶಪ್ಪ ಬಸೇಗಣ್ಣಿ, ಡಿ.ಆರ್‌.ಪಾಟೀಲ, ಪ್ರಕಾಶ ಕೋಳಿವಾಡ, ಜಟ್ಟಪ್ಪ ಕರೇಗೌಡ, ಡಾ.ಪ್ರವೀಣ್‌ ಕನ್ನೂರ, ನಾಗರಾಜ ಕುಡುಪಲಿ, ಕೃಷ್ಣಪ್ಪ ಕಂಬಳಿ, ನಿಂಗರಾಜ ಕೋಡಿಹಳ್ಳಿ, ರುಕ್ಮಿಣಿ ಸಾಹುಕಾರ್‌, ಪುಟ್ಟಪ್ಪ ಮರಿಯಮ್ಮನವರ್‌, ಮಂಜನಗೌಡ ಪಾಟೀಲ, ಪ್ರೇಮಾ ಪಾಟೀಲ, ಶ್ರೀನಿವಾಸ ಹಳ್ಳಳ್ಳಿ, ಶೇರ್‌ಖಾನ್‌ ಕಾಬೂಲಿ ಇದ್ದರು.

ಆರ್‌. ಶಂಕರ್‌ ಲಾಯಕ್ಕಾ, ನಾಲಾಯಕ್ಕಾ?
ಆರ್‌. ಶಂಕರ್ ಅವರನ್ನು ಅರಣ್ಯ ಮಂತ್ರಿ ಮಾಡಿಸಿದ್ದೆವು, ಮಹತ್ವದ ಖಾತೆ ಕೊಟ್ಟಿದ್ದೆವು. ಒಬ್ಬ ವ್ಯಕ್ತಿ ತನ್ನನ್ನೇ ತಾನು ಮಾರಿಕೊಂಡವರು ಸಾರ್ವಜನಿಕ ಜೀವನದಲ್ಲಿ ಇರೋಕೆ ಲಾಯಕ್ಕಾ? ನಾಲಾಯಕ್ಕಾ? ತೀರ್ಮಾನ ಮಾಡಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶಾಸಕರನ್ನು ರಾಜೀನಾಮೆ ಕೊಡಿಸೋಕೆ ದುಡ್ಡು ಖರ್ಚು ಮಾಡಿದರು, ಎಲೆಕ್ಷನ್ ಗೂ ಖರ್ಚು ಮಾಡಿದರು. ಅನೈತಿಕ ಸರ್ಕಾರ, ಭ್ರಷ್ಟ ಸರ್ಕಾರ, ವಚನ ಭ್ರಷ್ಟ ಸರ್ಕಾರ, ಜನ ವಿರೋಧಿ ಸರ್ಕಾರ ಇದು. ಇಂಥ ಸರ್ಕಾರ ಕರ್ನಾಟಕದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

‘ಮಜಾ ಮಾಡಲು ಹೋಟೆಲ್‌ನಲ್ಲಿ ಆಡಳಿತ’
ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಯೋಚಿಸಿ ಜೆಡಿಎಸ್‌ಗೆ ಬೆಂಬಲ ಕೊಟ್ಟು ಕುಮಾರಸ್ವಾಮಿಯನ್ನು ಸಿಎಂ ಮಾಡಿದೆವು. ವಿಧಾನಸೌಧದಲ್ಲಿ ಕೂತು ಕುಮಾರಸ್ವಾಮಿ ಅಧಿಕಾರ ಮಾಡಿದ್ರೆ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಆದರೆ ತಾಜ್ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕುಳಿತು ಕುಮಾರಸ್ವಾಮಿ ವೈಯಕ್ತಿಕವಾಗಿ ಮಜಾ ಮಾಡಲು ಅಧಿಕಾರ ನಡೆಸಿದರು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು.

ಎಚ್‌.ಡಿ. ಕುಮಾರಸ್ವಾಮಿ ಜನರನ್ನು ಭೇಟಿ ಮಾಡಲಿಲ್ಲ, ಶಾಸಕರನ್ನು ಭೇಟಿ ಮಾಡಲಿಲ್ಲ. ಇದನ್ನೇ ಬಿಜೆಪಿಯವರು ಕಾಯ್ತಾ ಇದ್ದರು. ಯಾವಾಗ ಶಾಸಕರು ಬೇಸತ್ತಿದ್ದರೋ ಅವರಿಗೆ ದುಡ್ಡು ಕೊಟ್ಟು ಖರೀದಿ ಮಾಡಿದರು. ಆಪರೇಷನ್‌ ಕಮಲ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು ಎಂದು ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT