ಶುಕ್ರವಾರ, ಸೆಪ್ಟೆಂಬರ್ 30, 2022
20 °C
ಬಿಜೆಪಿ ಕ್ಷೇತ್ರಗಳಿಗೆ ತಲಾ ₹ 3 ಕೋಟಿ; ಕಾಂಗ್ರೆಸ್‌– ಜೆಡಿಎಸ್‌ ಕ್ಷೇತ್ರಗಳಿಗೆ ತಲಾ ₹ 1 ಕೋಟಿ

ಕೆಕೆಆರ್‌ಡಿಬಿ ವಿವೇಚನಾ ನಿಧಿ; ತಾರತಮ್ಯಕ್ಕೆ ತೇಪೆ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ (2022–23) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಹಂಚಿಕೆಯಾದ ₹ 3 ಸಾವಿರ ಕೋಟಿ ಅನುದಾನದಲ್ಲಿ ಸರ್ಕಾರದ ‘ವಿವೇಚನಾ ನಿಧಿ’ ₹ 150 ಕೋಟಿಯನ್ನು ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೆ, ಕಾಂಗ್ರೆಸ್‌– ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೂ ‘ಪಾಲು’ ನೀಡಲಾಗಿದೆ.

ಬಿಜೆಪಿ ಶಾಸಕರಿರುವ 19 ಕ್ಷೇತ್ರಗಳಿಗೆ ತಲಾ ₹ 3 ಕೋಟಿಯಂತೆ ₹ 57 ಕೋಟಿಯನ್ನು ಜೂನ್‌ 13ರಂದೇ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಅಪಸ್ವರ ವ್ಯಕ್ತವಾದ ಕಾರಣ ಕಾಂಗ್ರೆಸ್ಸಿನ 19, ಜೆಡಿಎಸ್‌ನ 3 (ಒಟ್ಟು 22) ಕ್ಷೇತ್ರಗಳಿಗೆ ತಲಾ ₹ 1 ಕೋಟಿಯಂತೆ ಒಟ್ಟು ₹ 22 ಕೋಟಿಯನ್ನು ಹಂಚಿಕೆ ಮಾಡಿ ಸಮಾಧಾನಪಡಿಸಲಾಗಿದೆ.

ಒಟ್ಟು ಅನುದಾನದಲ್ಲಿ ಸರ್ಕಾರದ ವಿವೇಚನಾ ನಿಧಿ ಶೇ 5ರಷ್ಟನ್ನು (₹ 150 ಕೋಟಿ) ಯೋಜನಾ ಸಚಿವರ (ಮುನಿರತ್ನ) ವಿವೇಚನೆಯಂತೆ ಹಂಚಿಕೆ ಮಾಡಲಾಗುತ್ತದೆ. ಸಚಿವರ ಟಿಪ್ಪಣಿ ಯಂತೆ, ಈ ನಿಧಿಯಿಂದ ಈಗಾಗಲೇ ₹ 9.50 ಕೋಟಿ, ₹ 57 ಕೋಟಿ, ₹ 17 ಕೋಟಿ, ₹ 11 ಕೋಟಿ ಮತ್ತು ₹ 22 ಕೋಟಿ ಹೀಗೆ ಒಟ್ಟು ₹ 116.50 ಕೋಟಿ ಮೊತ್ತದ ಕಾಮಗಾರಿಗಳ ಅನುಷ್ಠಾನಕ್ಕೆ ಸರ್ಕಾರದಿಂದ ಕಾರ್ಯಾದೇಶ ಹೊರಡಿಸಲಾಗಿದೆ.

ಕೆಕೆಆರ್‌ಡಿಬಿ ₹ 3 ಸಾವಿರ ಕೋಟಿಯಲ್ಲಿ ₹ 1,500 ಕೋಟಿಗೆ ಮಾತ್ರ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ಡಿ.ಎಂ. ನಂಜುಂಡಪ್ಪ ವರದಿಯಲ್ಲಿರುವ ಸಮಗ್ರ ಅಭಿವೃದ್ಧಿ ಸೂಚಿಯನ್ವಯ (ಸಿಡಿಐ– ಇಂಡೆಕ್ಸ್‌) ಅನುದಾನ ಹಂಚಿಕೆ ಮಾಡಿ, ಕ್ರಿಯಾ ಯೋಜನೆ ತಯಾರಿಸಿ ಸರ್ಕಾರದಿಂದ ಅನುಮೋದನೆ ಪಡೆದು ಅನುಷ್ಠಾನಗೊಳಿಸುತ್ತದೆ. ಇನ್ನುಳಿದ, ₹ 1,500 ಕೋಟಿಯಲ್ಲಿ ವಿವೇಚನಾ ನಿಧಿ ಮತ್ತು ಇತರ ವೆಚ್ಚ ಭರಿಸಲಾಗುತ್ತದೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಈ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ, ಬಿಜೆಪಿ ಶಾಸಕರಿರುವ ಸೇಡಂ, ಚಿಂಚೋಳಿ, ಕಲಬುರಗಿ ಗ್ರಾಮಾಂತರ, ಆಳಂದ, ಕಲಬುರಗಿ ದಕ್ಷಿಣ, ಸುರಪುರ, ಯಾದಗಿರಿ, ಬಸವಕಲ್ಯಾಣ, ಔರಾದ್‌, ರಾಯಚೂರು, ದೇವದುರ್ಗ, ಕನಕಗಿರಿ, ಗಂಗಾವತಿ, ಯಲಬುರ್ಗಾ, ವಿಜಯನಗರ, ಕೂಡ್ಲಿಗಿ, ಹರಪನಹಳ್ಳಿ, ಸಿರಗುಪ್ಪ, ಬಳ್ಳಾರಿ ನಗರ ಈ 19 ಕ್ಷೇತ್ರಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಅಳವಡಿಸಲು ತಲಾ ₹ 1 ಕೋಟಿಯಂತೆ (ಪ್ರತಿ ಕ್ಷೇತ್ರಕ್ಕೆ ₹ 3 ಕೋಟಿ) ವಿವೇಚನಾ ನಿಧಿಯಿಂದ ₹ 57 ಕೋಟಿ ಹಂಚಿಕೆ ಮಾಡಿ ಸರ್ಕಾರ ಜೂನ್‌ನಲ್ಲಿಯೇ ಕಾರ್ಯಾದೇಶ ಹೊರಡಿಸಿತ್ತು.

ಆದರೆ, ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ವಿವೇಚನಾ ನಿಧಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂದುಳಿದಿರುವಿಕೆ ಆಧಾರದಲ್ಲಿ ಅನುದಾನ ನೀಡಲು ವಿವೇಚನೆ ಬಳಸಬೇಕೆ ಹೊರತು ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಬಳಸಿದರೆ ಹೇಗೆ ಎಂದು ಕೆಲವು ಶಾಸಕರು ಪ್ರಶ್ನಿಸಿದ್ದರು. ಇದೀಗ, ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾತ್ರ ಸ್ಮಾರ್ಟ್‌ ಕ್ಲಾಸ್‌ ಅಳವಡಿಸಲು ತಲಾ ₹ 1 ಕೋಟಿಯಂತೆ ಒಟ್ಟು ₹ 22 ಕೋಟಿಯ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.

ಕಲಬುರಗಿ (ಉತ್ತರ), ಚಿತ್ತಾಪುರ, ಅಫಜಲಪುರ, ಜೇವರ್ಗಿ, ಶಹಾಪುರ, ಹುಮನಾಬಾದ್‌, ಬೀದರ್‌, ಬಾಲ್ಕಿ, ಸಿಂಧನೂರು, ರಾಯಚೂರು (ಗ್ರಾಮಾಂತರ), ಲಿಂಗಸೂರು, ಮಸ್ಕಿ, ಕುಷ್ಠಗಿ, ಕೊಪ್ಪಳ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಬಳ್ಳಾರಿ, ಸಂಡೂರು ಮತ್ತು ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್, ಬೀದರ್‌ (ದಕ್ಷಿಣ), ಮಾನ್ವಿ ಮತ್ತು ಗುರುಮಠಕಲ್‌ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ.

ತೋಟಗಾರಿಕಾ ವಿವಿಗಳಿಗೆ ನಿಧಿ: ಅಲ್ಲದೆ, ಸರ್ಕಾರದ ವಿವಾಚನಾ ನಿಧಿಯಿಂದ ಕೆಕೆಆರ್‌ಡಿಬಿ ವ್ಯಾಪ್ತಿಯ ಮುನಿರಾಬಾದ್ (ಕೊಪ್ಪಳ) ಹಾಗೂ ಬೀದರ್‌ನಲ್ಲಿರುವ ಎರಡು ತೋಟಗಾರಿಕಾ ವಿಜ್ಞಾನಗಳ ವಿದ್ಯಾಲಯಗಳಲ್ಲಿ ಸೋಲಾರ್‌ ಪ್ಯಾನಲ್‌ ಆಧಾರಿತ ಹೈ ಮಾಸ್ಕ್‌ ವಿದ್ಯುತ್‌ ಸೌಲಭ್ಯಗಳು, ಸಿಸಿಟಿವಿ ಕ್ಯಾಮೆರಾ ಮತ್ತು ಸ್ಮಾರ್ಟ್‌ ಕ್ಲಾಸ್‌ಗಳನ್ನು ಅಳವಡಿಸುವ ಕಾಮಗಾರಿಗೆ ತಲಾ ₹ 4.75 ಕೋಟಿಯಂತೆ ₹ 9.50 ಕೋಟಿಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದೇ ವ್ಯಾಪ್ತಿಯ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಮತ್ತು ಇತರ ಅಭಿವೃದ್ಧಿಗೆ ಒಟ್ಟು  ₹ 17 ಕೋಟಿ ಮೊತ್ತದಲ್ಲಿ ನಾಲ್ಕು ಕಾಮಗಾರಿಗೂ ಕಾರ್ಯಾದೇಶ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು