ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸಕ್ಕೆ ಗೈರಾಗಿ ಪೌರಕಾರ್ಮಿಕರ ಮುಷ್ಕರ

ನೌಕರಿ ಕಾಯಂಗೆ ಸ್ವಚ್ಛತಾ ಕಾರ್ಮಿಕರ ಆಗ್ರಹ l ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ
Last Updated 1 ಜುಲೈ 2022, 21:14 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಕಾಯಂಗೊಳಿಸಬೇಕು’ ಎಂದು ಆಗ್ರಹಿಸಿ ಪೌರಕಾರ್ಮಿಕರು ರಾಜ್ಯವ್ಯಾಪಿ ಶುಕ್ರವಾರ ಮುಷ್ಕರ ಆರಂಭಿಸಿದ್ದಾರೆ.

ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿ, ರಾಜ್ಯ ನಗರ ಪಾಲಿಕೆ–ಪುರಸಭೆ–ನಗರಸಭೆ ಪೌರ ಕಾರ್ಮಿಕರ ಮಹಾ ಸಂಘ ಹಾಗೂ ಬಿಬಿಎಂಪಿ ಪೌರ ಕಾರ್ಮಿಕರ ಸಂಘದ ಸಹಯೋಗದಲ್ಲಿ ಕೆಲಸಕ್ಕೆ ಗೈರಾಗಿ ಪೌರಕಾರ್ಮಿಕರು ಮುಷ್ಕರ ಹಮ್ಮಿಕೊಂಡಿದ್ದಾರೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಉಂಟಾಗಿದೆ.

ಜಿಲ್ಲಾವಾರು ಪ್ರತಿಭಟನೆ ಜೊತೆ ಯಲ್ಲೇ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ವೇದಿಕೆಯಲ್ಲಿ ಮುಷ್ಕರ ಆರಂಭವಾಗಿದೆ.

ಮುಷ್ಕರ ವೇಳೆ ‘ಕಾಯಂಮಾತಿ ನಮ್ಮ ಹಕ್ಕು’ ಎಂಬ ಘೋಷಣಾ ಫಲಕ ಪ್ರದರ್ಶಿಸಿದ ಪ್ರತಿಭಟನಕಾರರು, ‘ರಾಜ್ಯ ಎಲ್ಲ ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ಕಸ ಸಾಗಣೆ ವಾಹನದ ಚಾಲಕರು ಹಾಗೂ ಸಿಬ್ಬಂದಿ, ಒಳಚರಂಡಿ ಸ್ವಚ್ಛಗೊಳಿಸುವವರು ಸೇರಿದಂತೆ ಎಲ್ಲ ಬಗೆಯ ಸ್ವಚ್ಛತಾ ಕಾರ್ಮಿಕರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ 54,512 ಗುತ್ತಿಗೆ ಪೌರ ಕಾರ್ಮಿಕರಿದ್ದು, ಈ ಪೈಕಿ 10,775 ಕಾರ್ಮಿಕರನ್ನು ಮಾತ್ರ ಕಾಯಂಗೊಳಿಸಲಾಗಿದೆ. ಕಾಯಂಗೊಂಡಿರುವ ಕಾರ್ಮಿಕರಿಗೆ ಉತ್ತಮ ವೇತನ ಬರು ತ್ತಿದೆ. ಗುತ್ತಿಗೆ ಹಾಗೂ ಇತರೆ ಪ್ರಕಾರದ ಕಾರ್ಮಿಕರಿಗೆ ಕೇವಲ ₹14,000 ಮಾಸಿಕ ವೇತನ ದೊರೆಯುತ್ತಿದೆ. ಇಂದಿನ ಬೆಲೆ ಏರಿಕೆ ಕಾಲದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಸಹ ಆಗುತ್ತಿಲ್ಲ’ ಎಂದು ಅಳಲು ತೋಡಿ ಕೊಂಡರು.

‘ಸಿದ್ದರಾಮಯ್ಯ ಅವರುಮುಖ್ಯಮಂತ್ರಿಯಾಗಿದ್ದಾಗ, ಎಲ್ಲ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಆದರೆ, ಪ್ರಸ್ತಾವ ಅನುಷ್ಠಾನಕ್ಕೆ ಅಂದಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸಹ ಪೌರಕಾರ್ಮಿಕರ ಕಾಯಂ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದೂ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಿಗದ ಲಿಖಿತ ಭರವಸೆ, ಮುಷ್ಕರ ಮುಂದುವರಿಕೆ: ‘ಪೌರಕಾರ್ಮಿಕರ ಬೇಡಿಕೆ ಈಡೇರಿಸುವ ಬಗ್ಗೆ ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡಿಲ್ಲ. ಹೀಗಾಗಿ, ಸ್ವಾತಂತ್ರ್ಯ ಉದ್ಯಾನದಲ್ಲೇ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಲಾಗುವುದು’ ಎಂದು ಮುಖಂಡರು ತಿಳಿಸಿದ್ದಾರೆ.

ಪ್ರಮುಖ ಬೇಡಿಕೆಗಳು

l ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಹಾಗೂ ಭತ್ಯೆ ನೀಡಬೇಕು. ಶೌಚಾಲಯ, ಕುಡಿಯುವ ನೀರು ಸೇರಿ ಮೂಲ ಸೌಕರ್ಯ ಒದಗಿಸಬೇಕು

l ಗೃಹ ಭಾಗ್ಯ ಯೋಜನೆಯನ್ನು ಎಲ್ಲ ಕಾರ್ಮಿಕರಿಗೆ ವಿಸ್ತರಿಸಬೇಕು

l ಪೌರಕಾರ್ಮಿಕರ ಮಕ್ಕಳು ಖಾಸಗಿ ಶಾಲೆ–ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಅಗತ್ಯವಿರುವ ಹಣಕಾಸು ನೆರವು ಒದಗಿಸಬೇಕು

l 60 ವಯಸ್ಸಿನವರೆಗೆ ಕೆಲಸ ಮಾಡಿ ನಿವೃತ್ತರಾದವರಿಗೆ ₹ 10 ಲಕ್ಷ ಇಡುಗಂಟು ಹಾಗೂ ₹ 10ಸಾವಿರ ಪಿಂಚಣಿ ನೀಡಬೇಕು.

₹ 2 ಸಾವಿರ ಸಂಕಷ್ಟ ಭತ್ಯೆ

ಬೆಂಗಳೂರು: ಬಿಬಿಎಂಪಿ ಸೇರಿ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಪೌರ ಕಾರ್ಮಿಕರಿಗೆ ತಿಂಗಳಿಗೆ ₹2,000 ಸಂಕಷ್ಟ ಭತ್ಯೆ ನೀಡಲು ಸರ್ಕಾರ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕಾಯಂ ಮತ್ತು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡಲಾಗುವುದು. ಪೌರಕಾರ್ಮಿಕರ ಹೋರಾಟಕ್ಕೂ ಈ ಘೋಷಣೆಗೂ ಸಂಬಂಧವಿಲ್ಲ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT