ಸೋಮವಾರ, ಆಗಸ್ಟ್ 15, 2022
28 °C

ಚುನಾವಣೆಗಾಗಿ ದರ ಏರಿಸಿ, ಇಳಿಸುವ ಆಟ: ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಸರ್ಕಾರವು ವಿದ್ಯುತ್‌ ದರವನ್ನು ಏರಿಸಿ, ಇಳಿಸುವ ಆಟಕ್ಕೆ ಕೈಹಾಕಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿದ್ಯುತ್‌ ದರ ಪರಿಷ್ಕರಣೆ ಸಂಬಂಧ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸೋಮವಾರ ಆದೇಶ ಹೊರಡಿಸಿರುವ ಕುರಿತು ಮಂಗಳವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಈಗ ವಿದ್ಯುತ್‌ ದರ ಏರಿಸಿ, ಇನ್ನೇನು ಚುನಾವಣೆ ಸಮೀಪದಲ್ಲಿದೆ ಎನ್ನುವಾಗ ಇಳಿಸುವ ನಾಟಕ ಈ ಆದೇಶದ ಹಿಂದಿದೆ’ ಎಂದು ಟೀಕಿಸಿದ್ದಾರೆ.

‘ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಹಾಗಿದ್ದರೆ ದರ ಏರಿಕೆ ಏಕೆ? ಇದರ ಹಿಂದಿರುವ ಹುನ್ನಾರ ಏನು? ತಿಂಗಳಿಗೆ 100 ಯೂನಿಟ್‌ ವಿದ್ಯುತ್‌ ಬಳಸುವ ಗ್ರಾಹಕರೇ ಹೆಚ್ಚು ಬೆಲೆ ತೆರಬೇಕಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರು ವಿದ್ಯುತ್‌ ಬಳಸದೆ ಕತ್ತಲಲ್ಲಿ ಕೊಳೆಯಬೇಕೆ? ಗತಿಶಕ್ತಿ ಯೋಜನೆ ಮೂಲಕ ದೇಶಕ್ಕೆ ಹೊಸ ಗತಿ ಕಾಣಿಸುವುದು ಎಂದರೆ ಇದೇನಾ’ ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಜನರು ಈಗಾಗಲೇ ಹೈರಾಣಾಗಿದ್ದಾರೆ. ಇಂಧನ ಇಲಾಖೆಯ ಅಸಮರ್ಪಕ ನಿರ್ವಹಣೆ ಮತ್ತು ವಿದ್ಯುತ್‌ ಸೋರಿಕೆ ತಡೆಯುವ ಬದಲಿಗೆ ದರ ಏರಿಸಿ ಬಡವರನ್ನು ಮತ್ತಷ್ಟು ಸುಲಿಗೆ ಮಾಡುವ ಪ್ರಯತ್ನ ಇದು. ವ್ಯಾಪಾರಿ ವರ್ಗದ ಪರವಾಗಿರುವ ಬಿಜೆಪಿ, ಬಡವರು ಮತ್ತು ಮಧ್ಯಮ ವರ್ಗದ ಪಾಲಿಗೆ ರಕ್ತಪಿಪಾಸು ಆಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ ಮತ್ತು ನಿಯಮಿತ ಅವಧಿಯ ವಿದ್ಯುತ್‌ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಸುವ ನೈತಿಕ ಹಕ್ಕು ಇಲ್ಲ. ದರ ಏರಿಕೆ ಜಾರಿಗೊಳಿಸಿದರೆ ಜನಾಂದೋಲನಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು