ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ವರ್ಗ: ಸಚಿವರಿಗೆ ಅಧಿಕಾರ, ಶೇ 6ರಷ್ಟು ಸಾರ್ವತ್ರಿಕ ವರ್ಗಾವಣೆ ಅವಕಾಶ

Last Updated 8 ಜುಲೈ 2021, 21:25 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಅಬ್ಬರ ಕಡಿಮೆಯಾದ ಬೆನ್ನಲ್ಲೆ, ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ಕಲ್ಪಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ವರ್ಗಾವಣೆಯ ಅಧಿಕಾರವನ್ನು ತಮಗೆ ನೀಡಬೇಕು ಎಂದು ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಒತ್ತಡ ಹೇರಿದ್ದರು. ಹೀಗಾಗಿ, ನೇಮಕಾತಿ ಪ್ರಾಧಿಕಾರಿ/ ಪ್ರಾಧಿಕಾರಕ್ಕೆ ಇದ್ದ ವರ್ಗಾವಣೆಯ ಅಧಿಕಾರವನ್ನು ಹಿಂದಿನ ವರ್ಷ ಆರಂಭಿಸಿದ್ದ ಹೊಸ ಪದ್ಧತಿಯಂತೆ ಆಯಾ ಇಲಾಖೆಗಳ ಸಚಿವರಿಗೆ ನೀಡಲಾಗಿದೆ. ಇದೇ 22ರ ಒಳಗೆ ಪ್ರಕ್ರಿಯೆ ಮುಗಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

2021-22ನೇ ಸಾಲಿಗೆ ಎಲ್ಲ ಇಲಾಖೆಗಳಲ್ಲಿ ಗ್ರೂಪ್ ‘ಬಿ’ ಮತ್ತು ‘ಸಿ’ ವರ್ಗದ ಅಧಿಕಾರಿ, ನೌಕರರಿಗೆ ಮಾತ್ರ ವರ್ಗಾವಣೆ ಅವಕಾಶ ನೀಡಲಾಗಿದೆ. ವರ್ಗಾವಣೆಯು ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದಲ್ಲಿ ಶೇ 6ರಷ್ಟನ್ನು ಮೀರಬಾರದು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರತಿವರ್ಷ 2013ರ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಆಧರಿಸಿ ಮೇ ಮತ್ತು ಜೂನ್ ತಿಂಗಳಲ್ಲಿ ಶೇ 4ರಿಂದ 5ರಷ್ಟು ನೌಕರರ ವರ್ಗಾವಣೆಗೆ ಅವಕಾಶ ನೀಡಲಾಗುತ್ತಿತ್ತು. ಕಳೆದ ಸಾಲಿನಲ್ಲಿ (2020–21) ಗರಿಷ್ಠ ಶೇ 6ರಷ್ಟು ವರ್ಗಾವಣೆಗೆ ಆಗಸ್ಟ್ ತಿಂಗಳವರೆಗೆ ಸರ್ಕಾರ ಅವಕಾಶ ನೀಡಿತ್ತು. ಪ್ರಸಕ್ತ ಸಾಲಿನಲ್ಲಿ ಕೂಡಾ ಅಷ್ಟೇ ಪ್ರಮಾಣದಲ್ಲಿ ವರ್ಗಾವಣೆಗೆ ಅವಕಾಶ ನೀಡಲಾಗಿದೆ.

ಚರ್ಚೆಗೆ ಗ್ರಾಸ: ಕಳೆದ ಸಾಲಿನಂತೆ ಈ ವರ್ಷ ಕೂಡಾ ವರ್ಗಾವಣೆ ಅಧಿಕಾರವನ್ನು ಸಚಿವರಿಗೆ ನೀಡಿರುವುದು ನೌಕರರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಸಚಿವರು, ಶಾಸಕರು ತಮಗೆ ಬೇಕಾದ ಕಡೆ ನೌಕರರನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಅಲ್ಲದೆ, ಈ ವ್ಯವಸ್ಥೆಯಲ್ಲಿ ಯಾವುದೇ ಪಾರದರ್ಶಕತೆ ಇರುವುದಿಲ್ಲ. ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಡಬಹುದು ಎಂಬ ಚರ್ಚೆಯೂ ಶುರುವಾಗಿದೆ.

ಕೋವಿಡ್‌ ಕಾರಣಕ್ಕೆ ಮಿತವ್ಯಯ ಮತ್ತು ಸೋಂಕು ನಿರ್ವಹಣೆ ಕೆಲಸಕ್ಕೆ ಧಕ್ಕೆ ಆಗಲಿದೆ ಎಂಬ ಕಾರಣಕ್ಕೆ ಕಳೆದ ಸಾಲಿನಲ್ಲಿ ಮೊದಲು ಸಾರ್ವತ್ರಿಕ ವರ್ಗಾವಣೆ ರದ್ದುಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ವಿರಳ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಅನುಮೋದನೆ ಮೂಲಕ ಮಾತ್ರ ಅವಕಾಶ ನೀಡಲಾಗಿತ್ತು. ಬಳಿಕ ಒಂದೇ ವಾರದಲ್ಲಿ ನಿಲುವು ಬದಲಿಸಿದ್ದ ಸರ್ಕಾರ, ಸಚಿವರು ತಮ್ಮ ಇಲಾಖೆಗಳಲ್ಲಿ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ನೀಡಿತ್ತು.

‘2021ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಆರಂಭಗೊಳ್ಳುವವರೆಗೆ ಇಲಾಖಾ ಹಂತದಲ್ಲಿ ಯಾವುದೇ ವರ್ಗಾವಣೆ ಮಾಡಬಾರದು. ವರ್ಗಾವಣೆ ಮಾಡಲೇಬೇಕಾಗಿದ್ದರೆ ಮುಖ್ಯಮಂತ್ರಿ ಅನುಮೋದನೆ ಅಗತ್ಯ’ ಎಂದು ಸರ್ಕಾರ ಷರತ್ತು ವಿಧಿಸಿತ್ತು. ವರ್ಗಾವಣೆ ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಬೇಕಿದೆ. ಅಲ್ಲಿಯವರೆಗೆ ಆಡಳಿತಾತ್ಮಕವಾಗಿ ಅವಶ್ಯವಿರುವ ಖಾಲಿಸ್ಥಾನಗಳನ್ನು ತುಂಬಲು ಮಾತ್ರ ವರ್ಗಾವಣೆಗಳನ್ನು ಮಾಡಬಹುದು. ಅದರ ಹೊರತು, ಬೇರೆ ಯಾವುದೇ ವರ್ಗಾವಣೆಗೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಸೂಚನೆ ನೀಡಲಾಗಿತ್ತು.

ಸರ್ಕಾರಿ ನೌಕರರಿಂದಲೂ ಪಟ್ಟು: ನೌಕರರ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿತ್ತು. ಕಳೆದ ಬಾರಿ ವರ್ಗಾವಣೆ ಸಮರ್ಪಕವಾಗಿ ಆಗಿಲ್ಲ. ಹಲವು ಸರ್ಕಾರಿ ನೌಕರರಿಗೆ ವರ್ಗಾವಣೆಯ ಅನಿವಾರ್ಯ ಇರುತ್ತದೆ. ಇನ್ನೂ ಕೆಲವರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ. ಹೀಗಾಗಿ ಸಾಮಾನ್ಯ ವರ್ಗಾವಣೆ ಮಾಡಬೇಕು ಎಂದು ಸಂಘ ಮನವಿ ಮಾಡಿತ್ತು. ಸಚಿವಾಲಯ ನೌಕರರ ಸಂಘದವರು ಕೂಡಾ ವರ್ಗಾವಣೆಗೆ ಅವಕಾಶ ನೀಡಿವಂತೆ ಆಗ್ರಹಿಸಿದ್ದರು. ಎಲ್ಲರಿಗೂ ಮುಖ್ಯಮಂತ್ರಿ ಬಳಿ ಹೋಗಿ ವರ್ಗಾವಣೆಯ ಮನವಿ ಪತ್ರ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಈ ಬಾರಿ ವರ್ಗಾವಣೆ ಕೈಗೊಳ್ಳಬೇಕು ಎಂದು ಸಂಘ ಮನವಿ ಸಲ್ಲಿಸಿತ್ತು.

ಸಚಿವರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ: ಈ ಬಾರಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ನೀಡುವಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಂಟಕ್ಕೂ ಹೆಚ್ಚು ಸಚಿವರು ಒತ್ತಾಯಿಸಿದ್ದರು. ಕೋವಿಡ್ ಕಡಿಮೆ ಆಗಿರುವುದರಿಂದ ವರ್ಗಾವಣೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಸಚಿವರ ಮಾತಿಗೆ ಸಿಟ್ಟಾಗಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಈ ಬಾರಿ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ಇಲ್ಲ. ಅಂಥ ತುರ್ತು ಪ್ರಕರಣ ಇದ್ದರೆ, ನನ್ನ ಗಮನಕ್ಕೆ ತನ್ನಿ, ನಾನೇ ವರ್ಗಾವಣೆ ಮಾಡಿಸುತ್ತೇನೆ’ ಎಂದಿದ್ದರು. ಹೀಗಾಗಿ, ಈ ಬಾರಿ ಸಾರ್ವತ್ರಿಕ ವರ್ಗಾವಣೆ ಬಹುತೇಕ ಅನುಮಾನ ಎಂದೇ ಹೇಳಲಾಗಿತ್ತು. ಇದೀಗ ಸಂಪುಟ ಸಹೋದ್ಯೋಗಿಗಳ ಒತ್ತಡಕ್ಕೆ ಮಣಿದು ವರ್ಗಾವಣೆಗೆ ಮುಖ್ಯಮಂತ್ರಿ ಹಸಿರು ನಿಶಾನೆ ನೀಡಿದ್ದಾರೆ.

*
ಸಾರ್ವತ್ರಿಕ ವರ್ಗಾವಣೆಗೆ ಅಗತ್ಯವಿದೆ. ಆದರೆ, ನೌಕರರ ಸಮಸ್ಯೆಗಳನ್ನು ಅರಿತುಕೊಂಡು ನಿಜವಾಗಿಯೂ ಅಗತ್ಯ ಇರುವವರಿಗೆ ವರ್ಗಾವಣೆ ಮೂಲಕ ಸರ್ಕಾರ ಅನುಕೂಲ ಮಾಡಿಕೊಡಬೇಕು.
-ಪಿ. ಗುರುಸ್ವಾಮಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT