ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನವಿ ವಿಚಾರಣೆಗೆ ಜಿಲ್ಲಾಡಳಿತ ನಿರಾಸಕ್ತಿ!, ರಾಜಕೀಯ ಒತ್ತಡಕ್ಕೆ ಮಣಿದ ಆರೋಪ

ಸಚಿವ ಚವ್ಹಾಣ್‌‌ ವಿರುದ್ಧ ಅಕ್ರಮ ಜಾತಿ ಪ್ರಮಾಣ ಪತ್ರ ದೂರು
Last Updated 13 ಅಕ್ಟೋಬರ್ 2020, 20:14 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದಿಂದ ವಲಸೆ ಬಂದು ಅಕ್ರಮವಾಗಿ ಜಾತಿ ಪ್ರಮಾಣಪತ್ರ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ವಿರುದ್ಧ ಬೀದರ್‌ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿ, ನಾಲ್ಕು ತಿಂಗಳಾದರೂ ವಿಚಾರಣೆ ಆರಂಭವಾಗಿಲ್ಲ. ರಾಜಕೀಯ ಪ್ರಭಾವದಿಂದಾಗಿ ವಿಚಾರಣೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

2018ರ ಚುನಾವಣೆಯಲ್ಲಿ ಔರಾದ್‌ ಕ್ಷೇತ್ರದಲ್ಲಿ ಪ್ರಭು ಚವ್ಹಾಣ್‌ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ವಿಜಯಕುಮಾರ್‌ ಕೌಡ್ಯಾಳ, ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ (ಉದ್ಯೋಗದಲ್ಲಿ ಮೀಸಲಾತಿ) ತಿದ್ದುಪಡಿ ಕಾಯ್ದೆ–2011ರ ಸೆಕ್ಷನ್‌ 4ರ ಅನ್ವಯ ಮೇ 26ರಂದು ‘ಸಕಾಲ’ ಅಡಿಯಲ್ಲಿ ಮರು ಪರಿಶೀಲನಾ ಮೇಲ್ಮನವಿ ಸಲ್ಲಿಸಿದ್ದರು. 30 ದಿನಗಳ ಗಡುವು ಕಳೆದರೂ ಜಿಲ್ಲಾಡಳಿತ ವಿಚಾರಣೆ ಆರಂಭಿಸದ ಕಾರಣ ಜೂನ್‌ 29ರಂದು ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇನ್ನೂ ಆರಂಭವಾಗಿಲ್ಲ.

‘ಬೀದರ್‌ ಜಿಲ್ಲಾಧಿಕಾರಿ ರಾಜಕೀಯ ಒತ್ತಡಕ್ಕೆ ಮಣಿದು, ದುರುದ್ದೇಶದಿಂದ ಸಚಿವರ ವಿರುದ್ಧದ ಮೇಲ್ಮನವಿಯ ವಿಚಾರಣೆ ನಡೆಸುತ್ತಿಲ್ಲ’ ಎಂದು ಆರೋಪಿಸಿ ವಿಜಯಕುಮಾರ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರಿಗೆ ಅಕ್ಟೋಬರ್‌ 6ರಂದು ದೂರು ನೀಡಿದ್ದಾರೆ. ತ್ವರಿತವಾಗಿ ವಿಚಾರಣೆ ಆರಂಭಿಸಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಪ್ರಭು ಚವ್ಹಾಣ್‌ ಮೂಲತಃ ಮಹಾರಾಷ್ಟ್ರ ಜಿಲ್ಲೆ ಲಾತೂರು ತಾಲ್ಲೂಕಿನ ಉದಗಿರ ತಾಲ್ಲೂಕಿನ ತೊಗರಿ ಗ್ರಾಮದವರು. 2008ರ ವಿಧಾನಸಭಾ ಚುನಾವಣೆಗೂ ಮೊದಲು ಔರಾದ್‌ ತಾಲ್ಲೂಕಿನ ಬೊಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಮಸುಬಾಯಿ ತಾಂಡಾಕ್ಕೆ ವಾಸ್ತವ್ಯ ಬದಲಿಸಿ, ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು ಎಂಬುದು ದೂರುದಾರರ ಆಪಾದನೆ.

ಐದು ವರ್ಷಗಳಿಂದ ಪ್ರಕರಣ ಜೀವಂತ: ಪ್ರಭು ಚವ್ಹಾಣ್‌ ಸುಳ್ಳು ದಾಖಲೆ ಸಲ್ಲಿಸಿ ಅಕ್ರಮವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡ ಶಂಕರರಾವ್‌ ದೊಡ್ಡಿ ಎಂಬುವವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) 2015ರಲ್ಲಿ ಅರ್ಜಿ ಸಲ್ಲಿಸಿದ್ದರು. ಚವ್ಹಾಣ್‌ ಅವರ ಹುಟ್ಟೂರು, ಅವರ ರಕ್ತ ಸಂಬಂಧಿಗಳು ನೆಲೆಸಿರುವ ಮಹಾರಾಷ್ಟ್ರದ ವಿವಿಧ ಸ್ಥಳಗಳು, ಸಚಿವರು ಮತ್ತು ಅವರ ಮಕ್ಕಳು ಶಿಕ್ಷಣ ಪಡೆದಿರುವ ಶಾಲೆ, ಕಾಲೇಜುಗಳು ಹಾಗೂ ಸದ್ಯ ವಾಸವಿರುವ ಔರಾದ್‌ ತಾಲ್ಲೂಕಿನ ವಿವಿಧೆಡೆ ಭೇಟಿ ನೀಡಿ ವಿಚಾರಣೆ ನಡೆಸಿದ್ದ, ಡಿಸಿಆರ್‌ಇ ಇನ್‌ಸ್ಪೆಕ್ಟರ್‌ ಜಿ. ಮಂಜುನಾಥ, 2015ರ ಡಿಸೆಂಬರ್ 17ರಂದು 240 ಪುಟಗಳ ವಿಸ್ತೃತ ವರದಿ ಸಲ್ಲಿಸಿದ್ದರು.

‘ಲಂಬಾಣಿ ಜಾತಿಯು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಇಲ್ಲ. ವಿಮುಕ್ತ ಜಾತಿ ಪ್ರವರ್ಗದಲ್ಲಿ ಸೇರಿದೆ. ಪ್ರಭು ಚವ್ಹಾಣ್‌ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಂದ ವಾಸಸ್ಥಳ ದಾಖಲಾತಿಗಳನ್ನು ಪಡೆದುಕೊಂಡಿರುತ್ತಾರೆ. ಘಮಸುಬಾಯಿ ತಾಂಡಾದ ಕಾಯಂ ನಿವಾಸಿ ಎಂದು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಪರಿಶಿಷ್ಟ ಜಾತಿಯ ಜನರಿಗೆ ಮೋಸ ಮಾಡಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ವರದಿಯನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ ಡಿಸಿಆರ್‌ಇ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಾತಿ ಪರಿಶೀಲನಾ ಸಮಿತಿಗೆ ಶಿಫಾರಸು ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಸಮಿತಿ, ‘ಪ್ರಭು ಚವ್ಹಾಣ್‌ ಮಹಾರಾಷ್ಟ್ರದಲ್ಲಿ ಬಂಜಾರ ಜಾತಿಯವರೇ ಆಗಿರುವುದರಿಂದ ಅವರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಿರುವ ಔರಾದ್‌ (ಬಿ) ತಹಶೀಲ್ದಾರ್‌ ಕ್ರಮ ಸರಿಯಾಗಿದೆ’ ಎಂಬ ತೀರ್ಮಾನ ನೀಡಿತ್ತು.

ಜಾತಿ ಪರಿಶೀಲನಾ ಸಮಿತಿ ತೀರ್ಮಾನ ಪ್ರಶ್ನಿಸಿ ಶಂಕರರಾವ್‌ ದೊಡ್ಡಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿನ ವಿಚಾರಣೆಗೆ ತಡೆ ನೀಡುವಂತೆ ಚವ್ಹಾಣ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ನ್ಯಾಯಾಲಯದಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ವಿಚಾರಣೆ ನಡುವೆಯೇ ಶಂಕರರಾವ್‌ ತಮ್ಮ ಅರ್ಜಿಯನ್ನು ಹಿಂಪಡೆದಿದ್ದರು. ಚವ್ಹಾಣ್‌ ವಿರುದ್ಧದ ಆರೋಪ ಕುರಿತು ಮರು ಪರಿಶೀಲನೆ ನಡೆಸುವಂತೆ ವಿಜಯಕುಮಾರ್‌ ಕೌಡ್ಯಾಳ ಮೇಲ್ಮನವಿ ಸಲ್ಲಿಸಿದ್ದಾರೆ.

ನೋಟಿಸ್‌ ನೀಡಿದ ದಿನವೇ ವರ್ಗಾವಣೆ!:ವಿಜಯಕುಮಾರ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಸಂಬಂಧ ಬೀದರ್‌ನ ಹಿಂದಿನ ಜಿಲ್ಲಾಧಿಕಾರಿ ಡಾ.ಎಚ್‌.ಆರ್‌. ಮಹಾದೇವ್‌ ಅವರು ಜೂನ್‌ 3ರಂದು ಸಚಿವ ಪ್ರಭು ಚವ್ಹಾಣ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಅದೇ ದಿನ ಸಂಜೆ ಅವರ ವರ್ಗಾವಣೆಯಾಗಿದ್ದು, ರಾಮಚಂದ್ರನ್‌ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು.

‘ರಾಜಕೀಯ ದುರುದ್ದೇಶದ ಆರೋಪ’:‘ನನ್ನ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ 2015ರಿಂದಲೂ ಕೆಲವರು ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿ, ಹೈಕೋರ್ಟ್‌ ಎಲ್ಲ ಕಡೆಗಳಲ್ಲೂ ನನ್ನ ಪರವಾದ ತೀರ್ಮಾನ ಬಂದಿದೆ. ನಾನು ಹುಟ್ಟಿನಿಂದ ಬಂಜಾರ. ಸುಳ್ಳು ಜಾತಿ ಪ್ರಮಾಣ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಸಚಿವ ಪ್ರಭು ಚವ್ಹಾಣ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾನು ಹುಟ್ಟಿದ್ದು, ಬೆಳೆದಿದ್ದು ಬೊಂತಿ ಗ್ರಾಮದಲ್ಲೇ. ನಮ್ಮದು ಮಹಾರಾಷ್ಟ್ರ ಗಡಿಯಲ್ಲಿರುವ ಹಳ್ಳಿ. ಸಹಜವಾಗಿಯೇ ಇಲ್ಲಿನ ಹೆಚ್ಚು ಮಂದಿ ಮರಾಠಿ ಮಾತನಾಡುತ್ತಾರೆ. ಮೂರು ಬಾರಿ ಶಾಸಕನಾಗಿದ್ದು, ಸಚಿವನಾಗಿದ್ದೇನೆ. ನನ್ನ ವಿರುದ್ಧ ಬೇರೆ ಯಾವುದೇ ಆರೋಪ ಮಾಡಲು ವಿರೋಧಿಗಳಿಗೆ ಸಾಧ್ಯವಾಗಿಲ್ಲ. ಜಾತಿಯ ವಿಷಯ ಮುಂದಿಟ್ಟುಕೊಂಡು ಕಿರುಕುಳ ನೀಡುತ್ತಿದ್ದಾರೆ’ ಎಂದರು.

‘ರಾಜಕೀಯ ದುರುದ್ದೇಶದ ಆರೋಪ’

‘ನನ್ನ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ 2015ರಿಂದಲೂ ಕೆಲವರು ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿ, ಹೈಕೋರ್ಟ್‌ ಎಲ್ಲ ಕಡೆಗಳಲ್ಲೂ ನನ್ನ ಪರವಾದ ತೀರ್ಮಾನ ಬಂದಿದೆ. ನಾನು ಹುಟ್ಟಿನಿಂದ ಬಂಜಾರ. ಸುಳ್ಳು ಜಾತಿ ಪ್ರಮಾಣ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಸಚಿವ ಪ್ರಭು ಚವ್ಹಾಣ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾನು ಹುಟ್ಟಿದ್ದು, ಬೆಳೆದಿದ್ದು ಬೊಂತಿ ಗ್ರಾಮದಲ್ಲೇ. ನಮ್ಮದು ಮಹಾರಾಷ್ಟ್ರ ಗಡಿಯಲ್ಲಿರುವ ಹಳ್ಳಿ. ಸಹಜವಾಗಿಯೇ ಇಲ್ಲಿನ ಹೆಚ್ಚು ಮಂದಿ ಮರಾಠಿ ಮಾತನಾಡುತ್ತಾರೆ. ಮೂರು ಬಾರಿ ಶಾಸಕನಾಗಿದ್ದು, ಸಚಿವನಾಗಿದ್ದೇನೆ. ನನ್ನ ವಿರುದ್ಧ ಬೇರೆ ಯಾವುದೇ ಆರೋಪ ಮಾಡಲು ವಿರೋಧಿಗಳಿಗೆ ಸಾಧ್ಯವಾಗಿಲ್ಲ. ಜಾತಿಯ ವಿಷಯ ಮುಂದಿಟ್ಟುಕೊಂಡು ಕಿರುಕುಳ ನೀಡುತ್ತಿದ್ದಾರೆ’ ಎಂದರು.

ನೋಟಿಸ್‌ ನೀಡಿದ ದಿನವೇ ವರ್ಗಾವಣೆ!

ವಿಜಯಕುಮಾರ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಸಂಬಂಧ ಬೀದರ್‌ನ ಹಿಂದಿನ ಜಿಲ್ಲಾಧಿಕಾರಿ ಡಾ.ಎಚ್‌.ಆರ್‌. ಮಹಾದೇವ್‌ ಅವರು ಜೂನ್‌ 3ರಂದು ಸಚಿವ ಪ್ರಭು ಚವ್ಹಾಣ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಅದೇ ದಿನ ಸಂಜೆ ಅವರ ವರ್ಗಾವಣೆಯಾಗಿದ್ದು, ರಾಮಚಂದ್ರನ್‌ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು.
***
ಶಂಕರರಾವ್‌ ದೊಡ್ಡಿ ಅರ್ಜಿ ಹಿಂಪಡೆದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು, ಡಿ.ಸಿ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆಗೆ ಆದೇಶಿಸಿದ್ದರು. ಎರಡು ವರ್ಷವಾದರೂ ಏನೂ ಆಗಿಲ್ಲ

- ವಿಜಯಕುಮಾರ್‌ ಕೌಡ್ಯಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT